ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕ್ಷೇತ್ರಕ್ಕೂ ವೇತನ ಆಯೋಗ ರಚಿಸಿ

Last Updated 13 ಡಿಸೆಂಬರ್ 2017, 7:24 IST
ಅಕ್ಷರ ಗಾತ್ರ

ಕುಶಾಲನಗರ: ದೇಶದ ಆರ್ಥಿಕ ವ್ಯವಸ್ಥೆ ಕೃಷಿಯನ್ನು ಅವಲಂಬಿಸಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷ್ಯಿತ್ತಿವೆ ಎಂದು ಶಾಸಕ ಕೆ.ಎಸ್.ಪುಟ್ಟಣಯ್ಯ ವಿಷಾದ ವ್ಯಕ್ತಪಡಿಸಿದರು.

ಸಮೀಪದ ತೊರೆನೂರು ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಮಂಗಳವಾರ ಏರ್ಪಡಿಸಿದ್ದ ಕೃಷಿ ಸಾಹಿತ್ಯ ಸಮಾವೇಶವನ್ನು →ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಬೆಳೆದ ಬೆಳೆಗೆ ಸೂಕ್ತ ದರ ನಿಗದಿಪಡಿಸುವ ಮೂಲಕ ಅವರ ಬದುಕು ಹಸನಗೊಳಿಸ ಬೇಕು. ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರಕ್ಕೂ ವೇತನ ಆಯೋಗ ರಚನೆ ಮಾಡಬೇಕು ಎಂದು ಪುಟ್ಟಣಯ್ಯ ಸರ್ಕಾರವನ್ನು ಆಗ್ರಹಿಸಿದರು.

ದೇಶದ ಹೋಟೆಲ್‌ ಉದ್ಯಮ ಕೃಷಿ ಮೇಲೆ ನಿಂತಿದೆ. ಕೃಷಿ ನಾಶವಾದರೆ ದೇಶವೇ ನಾಶವಾಗುತ್ತದೆ ಎಂಬುದನ್ನು ಮನಗಂಡಿದ್ದರೂ ಸರ್ಕಾರ ಈ ಕ್ಷೇತ್ರದ ಏಳಿಗೆಗೆ ಒತ್ತು ನೀಡುತ್ತಿಲ್ಲ. ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಆರ್ಥಿಕ ಸಂಕಷ್ಟಕ್ಕಳಗಾಗಿ ರೈತರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ ಎಂದು ಹೇಳಿದರು.

‘ವಿಶ್ವದಲ್ಲಿ ಹೈನುಗಾರಿಕೆಯಲ್ಲಿ ಭಾರತ ನಂಬರ್‌ ಒನ್. ಇದರಿಂದ ₹ 20 ಸಾವಿರ ಕೋಟಿಗೂ ಹೆಚ್ಚಿನ ಆದಾಯ ಬರುತ್ತದೆ. ಆದರೆ, ಹಸುಗಳನ್ನು ಸಾಕಿ ಹಾಲು ಉತ್ಪಾದನೆ ಮಾಡುವ ರೈತರಿಗೆ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ದೊರೆತಾಗ ಮಾತ್ರ ಅವರ ಬದುಕು ಹಸನವಾಗುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಕೃಷಿ ಲಾಭದಾಯಕ ಉದ್ಯಮವಾಗಬೇಕು. ಆಗ ಮಾತ್ರ ರೈತರ ಮಕ್ಕಳು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುವುದು ತಪ್ಪುತ್ತದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಮಾತನಾಡಿ, ರೈತರ ಬದುಕಿನಲ್ಲಿ ಬದಲಾವಣೆ ತರಬೇಕು ಎಂಬ ಉದ್ದೇಶದಿಂದ ಕೃಷಿ ಸಮ್ಮೇಳನವನ್ನು ಆಯೋಜಿಸಲಾಗಿದೆ. ಕೃಷಿಯಿಂದ ಸಂಸ್ಕೃತಿ ಹುಟ್ಟುತ್ತದೆ. ಗ್ರಾಮೀಣ ಪ್ರದೇಶದ ಕಲೆ, ಸಂಸ್ಕೃತಿ, ಜನಪದ ಸಾಹಿತ್ಯಗಳು ಯುವ ಬರಹಗಾರರಿಗೆ ಪ್ರೇರಣೆಯಾಗಲಿವೆ ಎಂದರು.

ತೊರೆನೂರು ಗ್ರಾ.ಪಂ. ಅಧ್ಯಕ್ಷ ಕೆ.ಬಿ.ದೇವರಾಜ್, ಶಿರಂಗಾಲ ಗ್ರಾ.ಪಂ. ಅಧ್ಯಕ್ಷ ರಮೇಶ್, ಜಿ.ಪಂ. ಮಾಜಿ ಅಧ್ಯಕ್ಷೆ ದೀರ್ಘಕೇಶಿ ಶಿವಣ್ಣ, ಮಾಜಿ ಸದಸ್ಯ ಡಿ.ವಿ.ಧರ್ಮಪ್ಪ, ತಾ.ಪಂ.ಮಾಜಿ ಉಪಾಧ್ಯಕ್ಷ ಟಿ.ಕೆ.ಪಾಂಡುರಂಗ, ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಎಸ್.ಎಸ್. ಚಂದ್ರಶೇಖರ್, ಟಿ.ಬಿ. ಜಗದೀಶ್, ಎಚ್.ಬಿ. ಚಂದ್ರಪ್ಪ, ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ರಮೇಶ್, ಖಜಾಂಚಿ ಮುರುಳೀಧರ್, ತಾಲ್ಲೂಕು ಅಧ್ಯಕ್ಷ ವಿಜೇತ್, ನೀರು ಬಳಕೆದಾರರ ಮಹಾಮಂಡಳದ ಅಧ್ಯಕ್ಷ ಎಸ್.ಸಿ.ಚೌಡೇಗೌಡ, ಚೆಟ್ಟಳ್ಳಿ ತೋಟಗಾರಿಕಾ ಸಂಶೋಧನಾ ಕೇಂದ್ರದ ಪಿ.ಎನ್.ದೊರೆಯಪ್ಪ, ಎಂಜಿನಿಯರ್ ಉಮಾಶಂಕರ್, ದೇವಾಲಯ ಸಮಿತಿ ಕಾರ್ಯದರ್ಶಿ ಶಿವಾನಂದ, ನೀರು ಬಳಕೆದಾರರ ಸಂಘದ ಚಿಕ್ಕಯ್ಯ ಉಪಸ್ಥಿತರಿದ್ದರು. ಉಪನ್ಯಾಸಕ ಹಂಡ್ರಂಗಿ ನಾಗರಾಜು ನಿರೂಪಿಸಿದರು. ಕೃಷ್ಣೇಗೌಡ ಸ್ವಾಗತಿಸಿದರು. ಚಂದ್ರಪ್ಪ ವಂದಿಸಿದರು.

ಗಮನಸೆಳೆದ ಕೃಷಿ ಸಾಹಿತ್ಯ ಮೆರವಣಿಗೆ

ಕುಶಾಲನಗರ: ಕೃಷಿ ಸಾಹಿತ್ಯ ಸಮಾವೇಶದಲ್ಲಿ ಆಯೋಜಿಸಿದ್ದ ಆಕರ್ಷಕ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆಗೆ ಜಿಲ್ಲಾ ಪಂಚಾಯಿತಿ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆರ್.ಶ್ರೀನಿವಾಸ್ ಚಾಲನೆ ನೀಡಿದರು.

ಪಿರಿಯಾಪಟ್ಟಣದ ಮಹರ್ಷಿ ವಾಲ್ಮೀಕಿ ಯುವಕ ಸಂಘದ ಕಲಾವಿದ ಗಣೇಶ್ ನಾಯಕ್ ನೇತೃತ್ವದಲ್ಲಿ ಪ್ರದರ್ಶಿಸಿದ ಡೊಳ್ಳುಕುಣಿತ, ವಿವಿಧ ಶಾಲೆಗಳ ವಿದ್ಯಾರ್ಥಿಗಳ ಬ್ಯಾಂಡ್ ಸೆಂಟ್ ಮೆರವಣಿಗೆಗೆ ಮೆರುಗು ನೀಡಿದವು.

ರೈತ ಟಿ.ಎಸ್.ಶಂಭಪ್ಪ ಅವರು ತಮ್ಮ ಎತ್ತುಗಳಿಗೆ ಹಾಗೂ ಎತ್ತಿನ ಗಾಡಿಗೆ ಶೃಂಗಾರಿಸಿಕೊಂಡು ಬಂದಿದ್ದು ಎಲ್ಲರನ್ನು ಆಕರ್ಷಿಸಿತು. ಗ್ರಾಮದ ಮಂಜುನಾಥ್ ಸ್ವ ಸಹಾಯ ಸಂಘದ ಸದಸ್ಯರು ಸಮವಸ್ತ್ರ ಧರಿಸಿ ಪೂರ್ಣಕುಂಭ ಕಳಸ ಹೊತ್ತು ಮೆರವಣಿಗೆಯಲ್ಲಿ ಸಾಗಿದರು.

ಮೆರವಣಿಗೆಯು ಊರಿನ ಪ್ರಮುಖ ಬೀದಿಯಲ್ಲಿ ಸಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದ ಬಳಿ ಮುಕ್ತಯಗೊಂಡಿತು. ಸಮ್ಮೇಳನದ ಅಂಗವಾಗಿ ಕನ್ನಡದ ಬಾವುಟಗಳು ಹಾಗೂ ಬ್ಯಾನರ್‌ಗಳಿಂದ ಗ್ರಾಮವನ್ನು ಶೃಂಗಾರಿಸಲಾಗಿತ್ತು. ಮೆರವಣಿಗೆಯಲ್ಲಿ ಪುಟಾಣಿ ಬಾಲಕ ಪಂಚೆ, ಅಂಗಿ ಧರಿಸಿ ಕನ್ನಡ ಧ್ವಜ ಹಿಡಿದು ಸಾಗುವ ಮೂಲಕ ಎಲ್ಲರ ಗಮನ ಸೆಳೆದನು.

ಮೇಳೈಸಿದ ದೇಸಿ ಕ್ರೀಡೆಗಳು

ಕೃಷಿ ಸಾಹಿತ್ಯ ಸಮಾವೇಶದ ಅಂಗವಾಗಿ ಏರ್ಪಡಿಸಿದ್ದ ಗ್ರಾಮೀಣ ಕ್ರೀಡಾ ಸ್ಪರ್ಧೆಯಲ್ಲಿ ದೇಸಿ ಕ್ರೀಡೆಗಳು ಮೇಳೈಸಿದವು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ವಿವಿಧ ಕ್ರೀಡೆಗಳಲ್ಲಿ ಪುರುಷರಿಗೆ ಲಗೋರಿ, ಬುಗುರಿ, ಸೂರ್ಚಂಡು, ಗಿಲ್ಲಿದಾಂಡು, ಮಹಿಳೆಯರಿಗೆ ಅಳಿಗುಳಿಮಣೆ, ಕಟ್ಟೆಮಣೆ, ರಾಗಿ ಬೀಸಣಿಕೆ, ಭತ್ತ ಕುಟ್ಟುವುದು, ಹಗ್ಗಜಗ್ಗಾಟ, ಕುಂಟೆಬಿಲ್ಲೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಜನಪದ ಗೀತೆ, ಕೋಲಾಟ, ಉಳುವ ಯೋಗಿಯ ಹಾಡು, ರಾಗಿಬೀಸುವ ಪದ, ನಾಟಿಹಾಡು, ಭತ್ತಕುಟ್ಟುವ ಹಾಡು, ರಂಗಗೀತೆಗಳು ಸಮಾವೇಶದಲ್ಲಿ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸಿದವು.

ಮಹಿಳೆಯರ ಭತ್ತ ಕುಟ್ಟುವ ಸ್ಪರ್ಧೆಯನ್ನು ಜಿ.ಪಂ.ಮಾಜಿ ಅಧ್ಯಕ್ಷೆ ದೀರ್ಘಕೇಶಿ ಶಿವಣ್ಣ ಉದ್ಘಾಟಿಸಿದರು. ಮಹಿಳೆಯರ ಕ್ರೀಡಾ ಚಟುವಟಿಕೆಯನ್ನು ಗ್ರಾ.ಪಂ. ಉಪಾಧ್ಯಕ್ಷೆ ದ್ರಾಕ್ಷಾಯಿಣಿ, ಪುರುಷರ ಕ್ರೀಡಾಕೂಟವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಟಿ.ಬಿ.ಜಗದೀಶ್ ಚಾಲನೆ ನೀಡಿದರು.

ವಸ್ತುಪ್ರದರ್ಶನ: ಗ್ರಾಮೀಣ ಕೃಷಿ ಪರಿಕರಗಳಾದ ನೊಗ, ನೇಗಿಲು, ಸೇರು, ಪಾವು ಅಳತೆ ಮಾಪನಗಳು, ಪೂರ್ವಿಕರು ಭೋಜನಕ್ಕೆ ಬಳಸುತ್ತಿದ್ದ ಮಣೆ, ಮೊರ, ತಕ್ಕಡಿ, ರಾಗಿ ಬೀಸುವ ಕಲ್ಲು, ಒಳಕಲ್ಲು, ಮಡಿಕೆ, ಕುಡಿಕೆಗಳು, ಬೆಲ್ಲದ ಅಚ್ಚು, ಮಂಕ್ರಿ, ಹಲುಬೆ, ರುಬ್ಬುವ ಕಲ್ಲು, ಭತ್ತ ಕುಟ್ಟುವ ಕಲ್ಲು ಮತ್ತಿತರ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

* * 

ಕೃಷಿ ಕ್ಷೇತ್ರದ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಕುಸಿತಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ ಕೃಷಿ ಬೆಳವಣಿಗೆಗೆ ಸರ್ಕಾರ ವಿಶೇಷ ಒತ್ತು ನೀಡಬೇಕು
ಪುಟ್ಟಣ್ಣಯ್ಯ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT