ಮಂಗಳವಾರ, ಮಾರ್ಚ್ 2, 2021
23 °C

ಮಳೆ ಬಂದರೂ ನೀರಿಗೆ ಬರ!

ಕೆ.ಎಂ.ಸಂತೋಷ್‌ಕುಮಾರ್‌ Updated:

ಅಕ್ಷರ ಗಾತ್ರ : | |

ಮಳೆ ಬಂದರೂ ನೀರಿಗೆ ಬರ!

ಬೆಂಗಳೂರು: ನಾಲ್ಕು ವರ್ಷದ ಸತತ ಬರಗಾಲದ ನಂತರ ರಾಜ್ಯದ ಹಲವೆಡೆ ಈ ಬಾರಿ ದಾಖಲೆ ಪ್ರಮಾಣದ ಮಳೆ ಸುರಿದರೂ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮಾತ್ರ ಅಂತರ್ಜಲಮಟ್ಟ ಹೇಳಿಕೊಳ್ಳುವಷ್ಟು ವೃದ್ಧಿಸಿಲ್ಲ!

‌ದಿನೇ ದಿನೇ ಹೆಚ್ಚುತ್ತಿರುವ ಕೊಳವೆ ಬಾವಿಗಳು ಮತ್ತು ಅವುಗಳ ಅತಿ ಬಳಕೆಯಿಂದ ನಗರದಲ್ಲಿ ಅಂತರ್ಜಲ ಮಟ್ಟ ಮತ್ತಷ್ಟು ಆಳಕ್ಕಿಳಿಯುತ್ತಿದೆ. ಜತೆಗೆ ಅನೇಕ ಕೊಳವೆ ಬಾವಿಗಳ ನೀರು ಕುಡಿಯಲೂ ಯೋಗ್ಯವಾಗಿಲ್ಲ.

‘ನಗರ ಮತ್ತು ಬಯಲು ಸೀಮೆ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ 310ರಿಂದ 320 ಮೀಟರ್‌ ಆಳದಲ್ಲಿದೆ. ಕೆಲವು ಕಡೆ ಅಂತರ್ಜಲ ಮಟ್ಟ ಇನ್ನೂ ಕೆಳಕ್ಕಿಳಿದಿದೆ. 600ರಿಂದ 800 ಅಡಿ ಆಳದಲ್ಲಿ ಸಿಗುವ ನೀರು ಬಹುತೇಕ ಗಡುಸು ಮತ್ತು ಫ್ಲೋರೈಡ್‌ನಿಂದ ಕೂಡಿರುತ್ತದೆ’ ಎನ್ನುತ್ತಾರೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ.

‘ರಾಜ್ಯದಲ್ಲಿ 1967ರ ಸುಮಾರಿಗೆ 60,000 ಕೊಳವೆ ಬಾವಿಗಳಿದ್ದವು. ಈಗ 40 ಲಕ್ಷಕ್ಕೂ ಹೆಚ್ಚು ಕೊಳವೆ ಬಾವಿಗಳಿವೆ. ಅಂತರ್ಜಲ ನಿರ್ದೇಶನಾಲಯ, ಅಂತರ್ಜಲ ಪ್ರಾಧಿಕಾರ, ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿಯಂತ್ರಿಸದ ಪರಿಣಾಮ, ಅಂತರ್ಜಲ ಶೋಷಣೆ ವ್ಯಾಪಕವಾಗುತ್ತಿದೆ. ಬೆಂಗಳೂರಿನಲ್ಲಿ ಕೊಳವೆ ಬಾವಿಗಳ ಸಂಖ್ಯೆ 4 ಲಕ್ಷ ದಾಟಿದೆ’ ಎನ್ನುವುದು ಜಲತಜ್ಞರ ಅಭಿಪ್ರಾಯ.

‘ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ರಾಮನಗರ ಜಿಲ್ಲೆಗಳಲ್ಲಿ ಮಾತ್ರ ಈ ವರ್ಷ ಮಟ್ಟ ಕೊಂಚ ಏರಿಕೆ ಕಾಣಿಸಿದೆ. ಆದರೆ, ಬೆಂಗಳೂರು ನಗರದಲ್ಲಿ ಅಂತರ್ಜಲ ಮಟ್ಟ ಹೇಳಿಕೊಳ್ಳುವಂತೆ ಏರಿಕೆಯಾಗಿಲ್ಲ’ ಎನ್ನುತ್ತಾರೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್‌. ಶ್ರೀನಿವಾಸರೆಡ್ಡಿ.

‘ಬಯಲು ಪ್ರದೇಶ ಮತ್ತು ಗ್ರಾಮೀಣ ಭಾಗಗಳಲ್ಲಿ ಮಳೆ ನೀರು ಇಂಗುವ ಪ್ರಮಾಣ ಶೇ 10ರಿಂದ ಶೇ 15ರಷ್ಟಿದೆ. ನಗರ ಪ್ರದೇಶಗಳಲ್ಲಿ ಮಳೆ ನೀರು ಇಂಗುವ ಪ್ರಮಾಣ ಶೇ 5ಕ್ಕಿಂತಲೂ ಕಡಿಮೆ ಇದೆ. ಬೆಂಗಳೂರು ನಗರ ಶೇ 90ರಷ್ಟು ಕಾಂಕ್ರೀಟ್‌ ಕಾಡಾಗಿದೆ. ಇದರಿಂದ ಇಲ್ಲಿ ಮಳೆ ನೀರು ಇಂಗುವ ಪ್ರಮಾಣ ಇನ್ನೂ ಕಡಿಮೆ ಇರುತ್ತದೆ’ ಎನ್ನುತ್ತಾರೆ ಅವರು.

‘ನಗರದಲ್ಲಿ ಈ ಬಾರಿ ಬಿದ್ದ ದಾಖಲೆಯ ಮಳೆ ಪ್ರಮಾಣಕ್ಕೆ ಹೋಲಿಸಿದರೆ ಅಂತರ್ಜಲಮಟ್ಟದ ಏರಿಕೆ ಹೇಳಿಕೊಳ್ಳುವಂತಿಲ್ಲ. ಮಳೆ ನೀರು ಇಂಗಿ ಅಂತರ್ಜಲಕ್ಕೆ ಮರುಪೂರಣವಾಗಬೇಕಾದರೆ, ಮಳೆ ನಿಧಾನಗತಿಯಲ್ಲಿ ಸುರಿಯಬೇಕು. ರಭಸವಾಗಿ ಸುರಿಯುವ ಮಳೆ ಬಿದ್ದ ವೇಗದಲ್ಲೇ ಹರಿದು ಹೋಗುತ್ತದೆ’ ಎನ್ನುತ್ತಾರೆ ಕೇಂದ್ರ ಅಂತರ್ಜಲ ಮಂಡಳಿಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಕೆ.ಆರ್‌.ಸೂರ್ಯನಾರಾಯಣ.

‘800 ಚ.ಕಿ.ಮೀ. ವ್ಯಾಪ್ತಿಯ ನಗರದಲ್ಲಿ ಕಾಂಕ್ರೀಟ್‌ ಕಾಡು 600 ಚ.ಕಿ.ಮೀ.ಗೂ ಹೆಚ್ಚು ಇದೆ. ಅಂದಾಜು 200 ಚ.ಕಿ.ಮೀ ಬಯಲು ಜಾಗದಲ್ಲಿ ಮಾತ್ರ ಮಳೆ ನೀರು ಇಂಗಬೇಕಿದೆ. ನಗರದ ಕೆಲವು ಭಾಗಗಳಲ್ಲಿ ಭೂಸಂರಚನೆ ಗಟ್ಟಿ ಜೇಡಿಮಣ್ಣಿನಿಂದ ಕೂಡಿದೆ. ಈ ಪ್ರದೇಶದಲ್ಲಿ ನೀರು ಅಷ್ಟಾಗಿ ಇಂಗುವುದಿಲ್ಲ’ ಎನ್ನುತ್ತಾರೆ ಹಿರಿಯ ಜಲವಿಜ್ಞಾನಿ ಸುಭಾಶ್ಚಂದ್ರ.

ಮಳೆ ಇದ್ದಾಗಲೂ ಅಂತರ್ಜಲ ಕುಸಿತ

ಆನೇಕಲ್‌, ಕೆ.ಆರ್‌.ಪುರ, ಉತ್ತರ ಮತ್ತು ದಕ್ಷಿಣ ತಾಲ್ಲೂಕುಗಳಲ್ಲಿ ಆಯ್ದ 24 ಕೊಳವೆ ಬಾವಿಗಳನ್ನು ಪರೀಕ್ಷಿಸಿದಾಗ ಅಂತರ್ಜಲಮಟ್ಟ ಮೇ ತಿಂಗಳಿನಿಂದ ನವೆಂಬರ್‌ವರೆಗೆ ಶೇ3ರಿಂದ 6ರಷ್ಟು ಏರಿಕೆಯಾಗಿರುವುದು ಕಂಡುಬಂದಿದೆ.

ಕೆಲವು ಕಡೆ ಮಳೆ ಇದ್ದಾಗಲೂ ಅಂತರ್ಜಲಮಟ್ಟ ಕುಸಿದಿದೆ. ಕಳೆದ ವರ್ಷ ಮಳೆ ಪ್ರಮಾಣ ಕಡಿಮೆ ಇದ್ದಾಗ್ಯೂ ಈ ತಾಲ್ಲೂಕುಗಳ ಕೆಲವು ಭಾಗದಲ್ಲಿ ಶೇ 27ರಷ್ಟು ಅಂತರ್ಜಲಮಟ್ಟ ಏರಿಕೆ ಕಂಡಿತ್ತು ಎನ್ನುತ್ತಾರೆ ಅಂತರ್ಜಲ ಪ್ರಾಧಿಕಾರದ ಅಧಿಕಾರಿಗಳು.

‘ನಗರವನ್ನು ಗಂಡಾಂತರಕ್ಕೆ ನೂಕಬೇಡಿ’

ನಗರದಲ್ಲಿ ಹೆಚ್ಚುತ್ತಿರುವ ಕೊಳವೆ ಬಾವಿ ಸಮಸ್ಯೆ ಇತ್ತೀಚೆಗೆ ನಡೆದ ಬಿಬಿಎಂಪಿ ವಿಶೇಷ ಸಭೆಯಲ್ಲೂ ಪ್ರತಿ ಧ್ವನಿಸಿತು. ಹೆಜ್ಜೆ ಹೆಜ್ಜೆಗೂ ಕೊಳವೆ ಬಾವಿ ಕೊರೆಯುತ್ತಿದ್ದರೆ ಭವಿಷ್ಯದಲ್ಲಿ ಭಾರಿ ಗಂಡಾಂತರಕ್ಕೆ ನಗರ ಸಿಲುಕುತ್ತದೆ. ಬಿಬಿಎಂಪಿ ಮತ್ತು ಜಲಮಂಡಳಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದೂ ಸದಸ್ಯರು ಒತ್ತಾಯಿಸಿದರು.

**

ಒಂದೇ ಮಳೆಗಾಲದಲ್ಲಿ ಅಂತರ್ಜಲ ಪುನಶ್ಚೇತನ ಆಗುವುದಿಲ್ಲ. ಇನ್ನೊಂದು ವರ್ಷ ಇಷ್ಟೇ ಮಳೆಯಾದರೆ ಅಂತರ್ಜಲ ಹೆಚ್ಚಬಹುದು.

–ಕೆ.ಆರ್‌.ಸೂರ್ಯನಾರಾಯಣ ಮುಖ್ಯಸ್ಥರು, ಕೇಂದ್ರ ಅಂತರ್ಜಲ ಮಂಡಳಿ ತಾಂತ್ರಿಕ ವಿಭಾಗ

ಒಂದು ವರ್ಷದಲ್ಲಿ ಭೂಗರ್ಭ ಸೇರುವ ಮಳೆ ನೀರಿನ ಮೂರುಪಟ್ಟು ಅಂತರ್ಜಲವನ್ನು ಮೇಲೆತ್ತಲಾಗುತ್ತಿದೆ. ದಿನೇ ದಿನೇ ಅಂತರ್ಜಲಮಟ್ಟ ತಳ ಕಾಣುತ್ತಿದೆ.

–ಸುಭಾಶ್ಚಂದ್ರ, ಹಿರಿಯ ಜಲವಿಜ್ಞಾನಿ

ಕೆರೆಕಟ್ಟೆಗಳಲ್ಲೂ ಹೂಳು ತುಂಬಿ, ಕಾಂಕ್ರೀಟ್‌ ರೀತಿ ಮಣ್ಣಿನ ಪದರ ಸಂರಚನೆಯಾಗಿದೆ. ಇದರಿಂದ ನೀರು ಅಂತರ್ಜಲ ಸೇರುವುದಿಲ್ಲ

–ಜಿ.ಎಸ್‌.ಶ್ರೀನಿವಾಸರೆಡ್ಡಿ, ನಿರ್ದೇಶಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.