ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿ, ಮೊಟ್ಟೆ ಮಾರಾಟ ಅಲ್ಪ ಕುಸಿತ

Last Updated 5 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಬಳಿಕ ಕೋಳಿ ಹಾಗೂ ಮೊಟ್ಟೆ ಮಾರಾಟದ ಮೇಲೂ ಸ್ವಲ್ಪಮಟ್ಟಿನ ದುಷ್ಪರಿಣಾಮ ಉಂಟಾಗಿದೆ ಎಂದು ಕರ್ನಾಟಕ ಕುಕ್ಕುಟ ಮಹಾಮಂಡಲ ತಿಳಿಸಿದೆ.

‘ಮಾರಾಟ ಅಲ್ಪ ಪ್ರಮಾಣದಲ್ಲಿ ಮಾತ್ರ ಕುಸಿತ ಕಂಡಿದೆ. ಹೆಚ್ಚೆಂದರೆ ಶೇ 20ರಷ್ಟು ಕುಸಿತ ಉಂಟಾಗಿರಬಹುದು. ಆದರೆ, ಹಕ್ಕಿ ಜ್ವರ ಪ್ರಕರಣ
ಗಳು ವರದಿಯಾಗಿರುವ ಕಡೆಗಳಲ್ಲೆಲ್ಲ ಮಾರಾಟವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಜನರಲ್ಲೂ ಈ ಬಗ್ಗೆ ಜಾಗೃತಿ ಮೂಡಿದೆ’ ಎಂದು ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಮಂಜೇಶ್‌ ಕುಮಾರ್‌ ಜಾಧವ್‌ ತಿಳಿಸಿದರು.

ಹಕ್ಕಿ ಜ್ವರದ ಮೊದಲ ಪ್ರಕರಣ ವರದಿಯಾಗಿದ್ದು ಯಲಹಂಕದಲ್ಲಿ. ನಗರದಲ್ಲಿ ಮಾರಾಟವಾಗುವ ಕೋಳಿ ಹಾಗೂ ಮೊಟ್ಟೆಯಲ್ಲಿ ಶೇ 10ರಷ್ಟು ಇಲ್ಲೇ ಬಿಕರಿಯಾಗುತ್ತವೆ. ಈ ಪ್ರದೇಶದಲ್ಲಿ ಕೋಳಿ ಹಾಗೂ ಮೊಟ್ಟೆ ಮಾರಾಟ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ರೋಗ ಇರುವುದು ನಾಟಿ ಕೋಳಿಗಳಲ್ಲಿ: ‘ಈ ರೋಗಬಾಧೆ ಕಾಣಿಸಿಕೊಂಡಿರುವುದು ಬ್ರಾಯ್ಲರ್‌ ಕೋಳಿಯಲ್ಲಿ ಅಲ್ಲ; ನಾಟಿ ಕೋಳಿಗಳಲ್ಲಿ ಎಂದು ಖಚಿತಪಟ್ಟಿದೆ. ಈ ನಾಟಿ ಕೋಳಿಗಳೆಲ್ಲ ಪೂರೈಕೆ ಆಗಿದ್ದು ತಮಿಳುನಾಡಿನಿಂದ. ಅಲ್ಲಿಂದ ಖರೀದಿಯನ್ನು ಸಂಪೂರ್ಣ ನಿಲ್ಲಿಸಿದ್ದೇವೆ. ಪೂರೈಕೆ ಆಗಿರುವ ಒಟ್ಟು ಕೋಳಿಗಳ ಪೈಕಿ ಶೇ 0.5 ಕೋಳಿಗಳು ಮಾತ್ರ ಈ ಸೋಂಕು ಹೊಂದಿದ್ದವು’ ಎಂದು ಜಾಧವ್‌ ತಿಳಿಸಿದರು.

ನಗರದಲ್ಲಿ ಕೋಳಿ ಮಾಂಸ ಮಾರಾಟ ಮಾಡುವ ಸುಮಾರು 2,000ದಷ್ಟು ಅಂಗಡಿಗಳಿವೆ. ನೈರ್ಮಲ್ಯ ಕಾಪಾಡುವಂತೆ ಈ ಅಂಗಡಿ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ಕೋಳಿ ಸಾಕುವ ರೈತರಿಗೂ ನಿರ್ದೇಶನ ನೀಡಲಾಗಿದೆ.

ನಗರದಲ್ಲಿ ಸುಮಾರು 10 ಸಾವಿರ ಮಂದಿ ಕೋಳಿ ಸಾಕಣೆಯಲ್ಲಿ ತೊಡಗಿದ್ದಾರೆ. ಅವರು ಬೇರೆ ಬೇರೆ ಬಗೆಯ ಕೋಳಿಗಳನ್ನು ಸಾಕುತ್ತಾರೆ. ಇದಕ್ಕೆ ವ್ಯವಸ್ಥಿತ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ತಮಿಳುನಾಡಿನ ಕೆಲವೆಡೆ ನಾಟಿ ಕೋಳಿಗಳನ್ನು ‌ಹೆಚ್ಚಾಗಿ ಸಾಕುತ್ತಾರೆ. ವ್ಯವಸ್ಥಿತ ಕೇಂದ್ರಗಳಲ್ಲಿ ಅವುಗಳನ್ನು ಸಾಕುವುದಿಲ್ಲ. ನೈರ್ಮಲ್ಯ ಕಾಪಾಡಲು ಅಲ್ಲಿ ಆದ್ಯತೆ ನೀಡುವುದಿಲ್ಲ ಎಂದು ಜಾಧವ್‌ ವಿವರಿಸಿದರು.

‘ಕೋಳಿ ಅಥವಾ ಮೊಟ್ಟೆಯನ್ನು 70 ಡಿಗ್ರಿ ಸೆಲ್ಸಿಯಸ್‌ನಿಂದ 200 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ಬೇಯಿಸಿದರೆ ಅಥವಾ ಹೆಚ್ಚು ಹೊತ್ತು ಕಾಯಿಸಿ
ದರೆ ಅವುಗಳಲ್ಲಿರುವ ವೈರಸ್‌ಗಳು ಸಾಯುತ್ತವೆ. ಇವುಗಳನ್ನು ಸೇವಿಸುವವರಿಗೂ ಈ ವಿಚಾರ ತಿಳಿದಿದೆ’ ಎಂದರು.

36 ಸಾವಿರ ಜನರ ತಪಾಸಣೆ: ಉತ್ತರ ತಾಲ್ಲೂಕಿನ ಥಣಿಸಂದ್ರ ಸಮೀಪದ ದಾಸರಹಳ್ಳಿಯಲ್ಲಿ ಹಕ್ಕಿಜ್ವರ (ಎಚ್‌5ಎನ್‌1) ಕಾಣಿಸಿಕೊಂಡ ಹಿನ್ನೆಲೆಯಲ್ಲಿ 36 ಸಾವಿರ ಜನರ ತಪಾಸಣೆ ನಡೆಸಿದ್ದು, ಯಾರಲ್ಲೂ ಹಕ್ಕಿಜ್ವರದ ಲಕ್ಷಣಗಳು ಕಾಣಸಿಕೊಂಡಿಲ್ಲ.

ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರೋಗ್ಯ ಸಹಾಯಕರ 52 ತಂಡಗಳು ದಾಸರಹಳ್ಳಿ ಹಾಗೂ ಅದರ 3 ಕಿ.ಮೀ ವ್ಯಾಪ್ತಿಯಲ್ಲಿ ಪ್ರತಿ ಮನೆಗೂ ಭೇಟಿ ನೀಡಿ, ಅವರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದಾರೆಯೇ ಎಂಬುದನ್ನು ಸಮೀಕ್ಷೆ ಮಾಡುತ್ತಿದ್ದಾರೆ. ಈ ಲಕ್ಷಣಗಳು ಕಾಣಿಸಿಕೊಂಡವರು ಇತ್ತೀಚೆಗೆ ಕೋಳಿ ಮಾಂಸ ಸೇವಿಸಿದ್ದಾರೆಯೇ ಎಂಬುದರ ಮಾಹಿತಿಯನ್ನೂ ಕಲೆಹಾಕುತ್ತಿದ್ದಾರೆ. ಯಾರಲ್ಲೂ ಈ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಇನ್ನೂ 7 ದಿನಗಳವರೆಗೆ ತಪಾಸಣೆ ನಡೆಸಲಾಗುತ್ತದೆ. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಸುನಂದಾ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಭಾಗದಲ್ಲಿದ್ದ ಸುಮಾರು 950 ಕೋಳಿಗಳನ್ನು ನಾಶ ಮಾಡಲಾಗಿದೆ. ಕೋಳಿ ಮಾಂಸ ಹಾಗೂ ಮೊಟ್ಟೆ ತಿನ್ನುವುದರಿಂದ ಹಕ್ಕಿಜ್ವರ ಬರುವುದಿಲ್ಲ. ಆದರೆ, ಮಾಂಸ ಹಾಗೂ ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಹಸಿ ಮೊಟ್ಟೆಯನ್ನು ತಿನ್ನಬಾರದು. ಸ್ವಚ್ಛತೆಗೆ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

ಮೊಟ್ಟೆ ಪ್ರಿಯ ಸಿಂಗಳೀಕದ ಆರೋಗ್ಯದ್ದೇ ಚಿಂತೆ
ಬೆಂಗಳೂರು: ಹಕ್ಕಿ ಜ್ವರದಿಂದ ಜನರು ಸೇವಿಸುವ ಆಹಾರದ ಮೇಲೆ ಮಾತ್ರ ಪರಿಣಾಮ ಉಂಟಾಗಿಲ್ಲ; ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿರುವ (ಬಿಬಿಪಿ) ಸಿಂಗಳೀಕವೂ (ಹನುಮಾನ್‌ ಲಂಗೂರ್‌) ಇದರಿಂದ ಆತಂಕ ಎದುರಿಸುತ್ತಿದೆ.

ಇಲ್ಲಿ ಮೂರು ಸಿಂಗಳೀಕಗಳು (ಗಂಡು) ಹಾಗೂ ನಾಲ್ಕು ಸ್ಪೆಕ್ಟಾಕ್ಲ್‌ಡ್‌ ಲಂಗೂರ್‌ಗಳಿವೆ. ಈ ಪೈಕಿ ಏಳು ವರ್ಷದ ಸಿಂಗಳೀಕವೊಂದು ಬೇಯಿಸಿದ ಮೊಟ್ಟೆಗಳನ್ನು ಸೇವಿಸಿಯೇ ಹಸಿವು ತಣಿಸಿಕೊಳ್ಳುತ್ತಿತ್ತು.

ನಗರದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಬಳಿಕ ಬಿಬಿಪಿ ಆಡಳಿತವು, ಇಲ್ಲಿ ಸಾಕುತ್ತಿರುವ ವನ್ಯಜೀವಿಗಳಿಗೆ ಕೋಳಿ ಮತ್ತು ಕೋಳಿ ಮೊಟ್ಟೆ ನೀಡುವುದನ್ನು ನಿಲ್ಲಿಸಲು ನಿರ್ಧರಿಸಿದೆ.

ಆದರೆ, ನೆಚ್ಚಿನ ಆಹಾರ ಸಿಗದಿದ್ದರೆ ಸಿಂಗಳೀಕ ಹಸಿವಿನಿಂದ ಬಳಲಬಹುದು ಎಂಬ ಆತಂಕ ಇಲ್ಲಿನ ಸಿಬ್ಬಂದಿಯನ್ನು ಕಾಡುತ್ತಿದೆ. ಅದು ಆಹಾರ ಸೇವಿಸುವಂತೆ ಮಾಡುವುದು ಹೇಗೆ ಎಂಬ ಬಗ್ಗೆ ಅವರು ಚಿಂತಿತರಾಗಿದ್ದಾರೆ.

ಹಣ್ಣುಹಂಪಲು, ತರಕಾರಿಗಳನ್ನು ಇಟ್ಟರೂ ಇದು ಪ್ರತಿದಿನವೂ ಬೇಯಿಸಿದ ಮೊಟ್ಟೆಗಾಗಿ ಕಾಯುತ್ತದೆ. ಸುಮಾರು ವರ್ಷದಿಂದ ಈಚೆಗೆ ಇದು ಮೊಟ್ಟೆ ಬಗ್ಗೆ ವಿಶೇಷ ಒಲವು ಬೆಳೆಸಿಕೊಂಡಿದೆ ಎಂದು ಇಲ್ಲಿ ಪ್ರಾಣಿಗಳನ್ನು ಆರೈಕೆ ಮಾಡುವ ಸಿಬ್ಬಂದಿಯೊಬ್ಬರು ತಿಳಿಸಿದರು.

‘ಹಕ್ಕಿ ಜ್ವರದ ಆತಂಕ ಕೊನೆಗೊಳ್ಳುವವರೆಗೆ ಇಲ್ಲಿನ ಪ್ರಾಣಿಗಳಿಗೆ ಕೋಳಿಮರಿ, ಕೋಳಿ ಹಾಗೂ ಮೊಟ್ಟೆಗಳನ್ನು ನೀಡುವುದಿಲ್ಲ. ಈ ಕೊರತೆ ನೀಗಿಸಲು ಗೋಮಾಂಸ ಮತ್ತು ಮೀನಿನ ಪೂರೈಕೆ ಹೆಚ್ಚಿಸಲಿದ್ದೇವೆ’ ಎಂದು ಬಿಬಿಪಿ ಕಾರ್ಯನಿರ್ವಾಹಕ ನಿರ್ದೇಶಕ ಆರ್‌.ಗೋಕುಲ್ ತಿಳಿಸಿದರು.

‘ಈ ಸಿಂಗಳೀಕಕ್ಕೆ ಬೇಯಿಸಿದ ಮೊಟ್ಟೆ ಮೇಲೆ ಅದೇಕೆ ಅಷ್ಟು ಪ್ರೀತಿಯೋ ಗೊತ್ತಿಲ್ಲ. ಈಗ ಅದರ ಪಾಡನ್ನು ನೋಡಿ ಆತಂಕವಾಗುತ್ತಿದೆ’ ಎನ್ನುತ್ತಾರೆ ಅವರು.

ಜೈವಿಕ ಉದ್ಯಾನದ ಪ್ರಾಣಿಗಳಿಗಾಗಿ ನಿತ್ಯ 15 ಕೆ.ಜಿ ಕೋಳಿ, 36 ಕೆ.ಜಿ ಮೀನು, 375 ಕೆ.ಜಿ ಕೋಳಿಮರಿ, ಹಾಗೂ 700 ಕೆ.ಜಿ ಗೋಮಾಂಸವನ್ನು ಆಡಳಿತ ಮಂಡಳಿ ತರಿಸಿಕೊಳ್ಳುತ್ತಿದೆ. ಜೊತೆಗೆ ಈ ಸಿಂಗಳೀಕಕ್ಕಾಗಿ ಒಂದು ಬೇಯಿಸಿದ ಮೊಟ್ಟೆಯನ್ನೂ ತರಿಸಲಾಗುತ್ತದೆ. ಮಾಂಸಾಹಾರಿ ಪ್ರಾಣಿಗಳ ಆರೋಗ್ಯಕ್ಕೆ ಕುತ್ತು ತರಬಲ್ಲ ಬ್ಯಾಕ್ಟೀರಿಯಾಗಳು ಹಂದಿ ಮಾಂಸದಲ್ಲಿ ಹೆಚ್ಚು ಇರುತ್ತವೆ. ಹಾಗಾಗಿ ಇಲ್ಲಿನ ಪ್ರಾಣಿಗಳಿಗೆ ಅದನ್ನು ನೀಡುವುದಿಲ್ಲ. ಇಲ್ಲಿನ ಪ್ರಾಣಿಗಳಿಗೆ ವಾರದಲ್ಲಿ ಆರು ದಿನ ಆಹಾರ ನೀಡಲಾಗುತ್ತದೆ. ಮಂಗಳವಾರ ಉಪವಾಸ.

ಹಕ್ಕಿಗಳ ಮೇಲೆ ವಿಶೇಷ ನಿಗಾ
ಜೈವಿಕ ಉದ್ಯಾನದ ಹಕ್ಕಿಗಳ ಚಲನವಲನದ ಮೇಲೂ ಸಿಬ್ಬಂದಿ ನಿಗಾ ಇಟ್ಟಿದ್ದಾರೆ. ಅವುಗಳಲ್ಲಿ ಹಕ್ಕಿ ಜ್ವರದ ಲಕ್ಷಣಗಳೇನಾದರೂ ಕಾಣಿಸಿಕೊಳ್ಳುತ್ತಿದೆಯೇ ಎಂಬ ಬಗ್ಗೆ ವಿಶೇಷ ಗಮನವಹಿಸುತ್ತಿದ್ದಾರೆ. ಯಾವುದಾದರೂ ಹಕ್ಕಿ ಸತ್ತರೆ, ಅದರ ಶವವನ್ನು ಪ್ರತ್ಯೇಕಿಸಿ ತಕ್ಷಣವೇ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಗೋಕುಲ್‌ ತಿಳಿಸಿದರು.

ಸಿಬ್ಬಂದಿಯ ಆರೋಗ್ಯದ ಮೇಲೂ ವಿಶೇಷ ನಿಗಾ ಇಡಲಾಗಿದೆ ಎಂದರು.

ನೈರ್ಮಲ್ಯ ವಹಿಸುವಂತೆ ಪ್ರವಾಸಿಗರಿಗೆ ಸೂಚನೆ
ಜೈವಿಕ ಉದ್ಯಾನಕ್ಕೆ ಪ್ರವಾಸಿಗರನ್ನು ನಿರ್ಬಂಧಿಸದಿರಲು ಆಡಳಿತ ಮಂಡಳಿ ನಿರ್ಧರಿಸಿದೆ. ಆದರೆ, ಪ್ರವೇಶದ್ವಾರದ ಬಳಿಯೇ ಪೊಟಾಷಿಯಂ ಪರಮಾಂಗನೇಟ್‌ ದ್ರಾವಣವನ್ನು ಇಡಲಾಗಿದೆ. ಪ್ರವಾಸಿಗರು ಅದರಲ್ಲಿ ಕಾಲನ್ನು ತೊಳೆದು ಒಳಗೆ ಪ್ರವೇಶಿಸಬೇಕಿದೆ.

ಹಕ್ಕಿಗಳನ್ನು ವೀಕ್ಷಿಸುವಾಗ ಸಾಕಷ್ಟು ಅಂತರ ಕಾಯ್ದುಕೊಳ್ಳುವಂತೆಯೂ ಸಲಹೆ ನೀಡಲಾಗುತ್ತಿದೆ. ಪಂಜರಗಳಲ್ಲಿರುವ ಹಕ್ಕಿಗಳು ಲವಲವಿಕೆಯಿಂದ ಇರದಿದ್ದರೆ, ಕಾಯಿಲೆ ಬಿದ್ದಂತಿದ್ದರೆ ಅಥವಾ ಸತ್ತು ಬಿದ್ದಿದ್ದರೆ ತಕ್ಷಣವೇ ಗಮನಕ್ಕೆ ತರುವಂತೆ ಆಡಳಿತ ಮಂಡಳಿಯು ಪ್ರವಾಸಿಗರಿಗೆ ಸೂಚನೆ ನೀಡುತ್ತಿದೆ.

‘ವಾಹನಗಳ ಮೇಲೂ ನಿಗಾ ಇಡಲಾಗಿದೆ. ಚಿಕನ್‌ನಿಂದ ತಯಾರಿಸಿದ ಆಹಾರ ಅಥವಾ ಮೊಟ್ಟೆಯನ್ನು ತರಬಾರದು ಎಂಬುದಾಗಿ ಪ್ರವಾಸಿಗರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ’ ಎಂದು ಆಡಳಿತ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT