ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಎಪಿ ಕಚೇರಿಗೆ ಸಂಪರ್ಕ ಬಂದ್; ಚುನಾವಣಾ ಆಯೋಗಕ್ಕೆ ದೂರು ನೀಡಲಿದ್ದೇವೆ: ಅತಿಶಿ

Published 23 ಮಾರ್ಚ್ 2024, 10:52 IST
Last Updated 23 ಮಾರ್ಚ್ 2024, 23:08 IST
ಅಕ್ಷರ ಗಾತ್ರ

ನವದೆಹಲಿ: ‘ದೆಹಲಿಯಲ್ಲಿರುವ ಆಮ್‌ ಆದ್ಮಿ ಪಕ್ಷದ (ಎಎಪಿ) ಕಚೇರಿಯನ್ನು ಎಲ್ಲ ಕಡೆಯಿಂದಲೂ ‘ಸೀಲ್‌’ ಮಾಡಲಾಗಿದ್ದು, ಪ್ರವೇಶ ನಿರ್ಬಂಧಿಸಲಾಗಿದೆ. ಈ ವಿಷಯವನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು’ ಎಂದು ದೆಹಲಿ ಸಚಿವೆ ಆತಿಶಿ ಶನಿವಾರ ಹೇಳಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಲೋಕಸಭಾ ಚುನಾವಣೆ ಸಮಯದಲ್ಲಿ ರಾಷ್ಟ್ರೀಯ ಪಕ್ಷವೊಂದರ ಕಚೇರಿಯ ಪ್ರವೇಶವನ್ನು ಹೀಗೆ ತಡೆಯಬಹುದೇ? ಸಂವಿಧಾನವು ಎಲ್ಲರಿಗೂ ಚುನಾವಣೆಯಲ್ಲಿ ಸಮಾನ ಅವಕಾಶವನ್ನು ನೀಡುತ್ತದೆ. ಆದರೆ ಕಚೇರಿಯನ್ನು ‘ಸೀಲ್‌’ ಮಾಡಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ’ ಎಂದು ತಿಳಿಸಿದ್ದಾರೆ.

ಈ ಆರೋಪವನ್ನು ದೆಹಲಿ ಪೊಲೀಸರು ಅಲ್ಲಗಳೆದಿದ್ದಾರೆ. ‘ಎಎಪಿ ಕಚೇರಿಯನ್ನು ಪೊಲೀಸರು ಸೀಲ್‌ ಮಾಡಿಲ್ಲ. ಡಿಡಿಯು ಮಾರ್ಗದಲ್ಲಿ ಸಿಆರ್‌ಪಿಸಿ ಸೆಕ್ಷನ್‌ 144 ವಿಧಿಸಿರುವುದ ರಿಂದ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಭೆ ಸೇರುವುದನ್ನು ನಿಷೇಧಿಸಲಾಗಿದೆ’ ಎಂದು ಡಿಸಿಪಿ (ಕೇಂದ್ರ) ಎಂ. ಹರ್ಷವರ್ಧನ ಹೇಳಿದ್ದಾರೆ. 

‘ಎಎಪಿಯ 500ಕ್ಕೂ ಹೆಚ್ಚು ಕಾರ್ಯ ಕರ್ತರು ಮತ್ತು ನಾಯಕರು ಶನಿವಾರ ಶಾಹೀದಿ ಪಾರ್ಕ್‌ನಲ್ಲಿ ಜಮಾಯಿಸಿದ್ದರು. ಸಭೆಗೆ ಅನುಮತಿ ಪಡೆಯದ ಅವರು ಮೆರವಣಿಗೆ ಪ್ರಾರಂಭಿಸಿದರು. ಈ ಮಾರ್ಗದಲ್ಲಿ ನ್ಯಾಯಾಲಯ, ಹಲವು ರಾಜಕೀಯ ಪಕ್ಷಗಳ ಕಚೇರಿಗಳು ಇವೆ. ಅಲ್ಲದೆ ನಿಷೇಧಾಜ್ಞೆ ಇದ್ದ ಕಾರಣ ಅವರನ್ನು ತಡೆಯಲಾಯಿತು. ಈ ವೇಳೆ 25 ಮಂದಿಯನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು’ ಎಂದು ಅವರು ವಿವರಿಸಿದ್ದಾರೆ. 

ಸಚಿವ ಸೌರಬ್‌ ಕಿಡಿ: ‘ಮಾದರಿ ನೀತಿ ಸಂಹಿತೆ ಜಾರಿ ಇರುವಾಗ ಕೇಂದ್ರ ಸರ್ಕಾರವು ಎಎಪಿ ಕೇಂದ್ರ ಕಚೇರಿಯ ಎಲ್ಲ ಪ್ರವೇಶಗಳನ್ನು ಬಂದ್‌ ಮಾಡಿರುವುದು ಸರಿಯಲ್ಲ’ ಎಂದು ದೆಹಲಿಯ ಮತ್ತೊಬ್ಬ ಸಚಿವ ಸೌರಭ್‌ ಭಾರದ್ವಾಜ್‌ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಹಣದ ಜಾಡು ಪತ್ತೆಗೆ ಇ.ಡಿ ವಿಫಲ’:  ಶರದ್‌ ಪಿ ರೆಡ್ಡಿ ಎಂಬುವರ ಹೇಳಿಕೆಯನ್ನು ಆಧರಿಸಿ ಇ.ಡಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಬಂಧಿಸಿದೆ. ಅರಬಿಂದೋ ಫಾರ್ಮಾದ ರೆಡ್ಡಿ ಅವರನ್ನು ಅಬಕಾರಿ ನೀತಿ ಪ್ರಕರಣದಲ್ಲಿ ನವೆಂಬರ್‌ನಲ್ಲಿ ಇ.ಡಿ ಬಂಧಿಸಲಾಗಿತ್ತು. ಅವರು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ ಕೋಟ್ಯಂತರ ರೂಪಾಯಿ ಪಾವತಿಸಿದ್ದಾರೆ. ಹೀಗಾಗಿ ಇ.ಡಿ ನೈಜವಾಗಿ ಕೇಸರಿ ಪಕ್ಷದ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಎಂದು ದೆಹಲಿ ಸಚಿವೆ ಆತಿಶಿ ಆಗ್ರಹಿಸಿದ್ದಾರೆ.

‘ನಡ್ಡಾ ಅವರನ್ನು ಬಂಧಿಸಿ’: ಬಿಜೆಪಿಯು ತನ್ನ ಬ್ಯಾಂಕ್‌ ಖಾತೆಗಳಲ್ಲಿ ‘ಅಪರಾಧದ ಆದಾಯ’ ‍ಪಡೆದಿದೆ ಎಂದು ಆರೋಪಿಸಿದ ಸಚಿವೆ, ಕೇಸರಿ ಪಕ್ಷದ ಮುಖ್ಯಸ್ಥ ಜೆ.ಪಿ.ನಡ್ಡಾ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಬೇಕು ಎಂದು ಎಎಪಿ ಮುಖಂಡರು ಆಗ್ರಹಿಸಿದ್ದಾರೆ. 

ದೇಶ ಸೇವೆ ಮುಂದುವರಿಯಲಿದೆ: ಅರವಿಂದ ಕೇಜ್ರಿವಾಲ್

‘ನನ್ನ ಪ್ರೀತಿಯ ದೇಶವಾಸಿಗಳೇ, ನಾನು ಜೈಲಿನಲ್ಲಿದ್ದರೂ ಹೊರಗಿದ್ದರೂ ದೇಶಕ್ಕಾಗಿ ಸೇವೆ ಮುಂದುವರಿಸುತ್ತೇನೆ’ ಎಂದು ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಶನಿವಾರ ಸಂದೇಶ ಕಳುಹಿಸಿದ್ದಾರೆ.

ಜಾರಿ ನಿರ್ದೇಶನಾಲಯದ ವಶದಲ್ಲಿರುವ ಅವರು ಕಳುಹಿಸಿರುವ ಸಂದೇಶವನ್ನು ಅವರ ಪತ್ನಿ ಸುನಿತಾ ಕೇಜ್ರಿವಾಲ್‌ ಶನಿವಾರ ಓದಿದರು. ಅದರ ವಿಡಿಯೊವನ್ನು ಎಎಪಿ ಹಂಚಿಕೊಂಡಿದೆ. ‘ನಿಮ್ಮ ಮಗ ಮತ್ತು ಸಹೋದರ ಕೇಜ್ರಿವಾಲ್‌ ಅವರು ಕಸ್ಟಡಿಯಿಂದ ಇದನ್ನು ಕಳುಹಿಸಿದ್ದಾರೆ’ ಎಂದರು.

‘ನನ್ನ ಬಂಧನಕ್ಕಾಗಿ ಬಿಜೆಪಿಯನ್ನು ದ್ವೇಷಿಸಬೇಡಿ. ಅವರೂ ನಮ್ಮ ಸಹೋದರ ಸಹೋದರಿಯರು‘ ಎಂದು ಹೇಳಿದ್ದಾರೆ.

 ’ನಾನು ಹಲವಾರು ಹೋರಾಟಗಳಲ್ಲಿ ಭಾಗಿಯಾಗಿದ್ದೇನೆ ಮತ್ತು ಅದು ಮುಂದುವರಿಯುತ್ತದೆ ಎಂಬುದು ಗೊತ್ತಿದೆ. ಈ ಬಂಧನ ಆಶ್ಚರ್ಯ ತಂದಿಲ್ಲ’ ಎಂದು ಅವರು ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. 

‘ನಾನು ಇಲ್ಲಿಯವರೆಗೆ ನೀಡಿರುವ ಯಾವುದೇ ಭರವಸೆಯನ್ನು ಈಡೇರಿಸುವಲ್ಲಿ ವಿಫಲನಾಗಿಲ್ಲ’ ಎಂದಿರುವ ಅವರು, ‘ಬಜೆಟ್‌ನಲ್ಲಿ ಘೋಷಿಸಿರುವಂತೆ ಅರ್ಹ ಫಲಾನುಭವಿ ಮಹಿಳೆಯರಿಗೆ ಮಾಸಿಕ ₹ 1,000 ಗೌರವಧನ ನೀಡುವ ಯೋಜನೆ ಜಾರಿಗೊಳಿಸುವುದಾಗಿ’ ಭರವಸೆ ನೀಡಿದ್ದಾರೆ.

ತಾನು ಕಬ್ಬಿಣದಷ್ಟು ಬಲಶಾಲಿಯಾದ ವ್ಯಕ್ತಿ ಎಂದು ಹೇಳಿರುವ ಅವರು, ಜನರಿಗೆ ದೇವಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯುವಂತೆ ಕೋರಿದ್ದಾರೆ. 

ಬಿಜೆಪಿ ಟೀಕೆ: ಬಂಧನದಲ್ಲಿದ್ದರೂ ಅರವಿಂದ ಕೇಜ್ರಿವಾಲ್‌ ಅವರು ದೆಹಲಿ ಮುಖ್ಯಮಂತ್ರಿಯಾಗಿ ಮುಂದುವರಿದಿರುವುದನ್ನು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಕಟುವಾಗಿ ಟೀಕಿಸಿದ್ದಾರೆ. ‘ಇದು ದೇಶದ ರಾಜಕೀಯ ಪ್ರಯಾಣದಲ್ಲಿ ಅತ್ಯಂತ ದುರದೃಷ್ಟಕರ ಕ್ಷಣ ಮತ್ತು ಕೆಟ್ಟ ರೀತಿಯ ರಾಜಕೀಯ’ ಎಂದು ಅವರು ದೂರಿದ್ದಾರೆ.

ಬಂಧನ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಶನಿವಾರ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ವಿಷಯವನ್ನು ತುರ್ತಾಗಿ, ಭಾನುವಾರ ವಿಚಾರಣೆಗೆ ತೆಗೆದುಕೊಳ್ಳುವಂತೆ ಕೇಜ್ರಿವಾಲ್‌ ಅವರ ಕಾನೂನು ತಂಡ ಕೋರಿದೆ ಎಂದು ಎಎಪಿ ಮೂಲಗಳು ತಿಳಿಸಿವೆ.  

‘ತನ್ನ ಬಂಧನ ಕಾನೂನು ಬಾಹಿರವಾಗಿದೆ. ತಕ್ಷಣ ಬಂಧನದಿಂದ ಬಿಡುಗಡೆ ಮಾಡುವಂತೆ’ ಅರ್ಜಿಯಲ್ಲಿ ಕೋರಲಾಗಿದೆ. ಆದರೆ, ಹೋಳಿ ರಜೆಯ ಕಾರಣ ನ್ಯಾಯಾಲಯವು ಇದೇ 27ಕ್ಕೂ ಮೊದಲು ಈ ಅರ್ಜಿ ವಿಚಾರಣೆ ನಡೆಸುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.

ಎಎಪಿ ಶಾಸಕನ ವಿರುದ್ಧ ಐ.ಟಿ ದಾಳಿ

ತೆರಿಗೆ ವಂಚನೆ ತನಿಖೆಯ ಭಾಗವಾಗಿ ಎಎಪಿ ಶಾಸಕ ಗುಲಾಬ್‌ ಸಿಂಗ್ ಯಾದವ್‌ ಮತ್ತು ಇತರ ಕೆಲವರಿಗೆ ಸೇರಿದ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶನಿವಾರ ಶೋಧ ನಡೆಸಿದ್ದಾರೆ.

ಎರಡು ಬಾರಿ ಶಾಸಕರಾಗಿರುವ ಯಾದವ್‌ (45) ಅವರು, ದೆಹಲಿ ವಿಧಾನಸಭೆಯಲ್ಲಿ ಮಟಿಯಾಲಾ ಕ್ಷೇತ್ರದ ಪ್ರತಿನಿಧಿಯಾಗಿದ್ದಾರೆ. 

ದೆಹಲಿಯ ಘುಮ್ಮನ್‌ಹೆಡಾ ಗ್ರಾಮ ಸೇರಿದಂತೆ ಇತರ ಸ್ಥಳಗಳಲ್ಲಿ ದಾಳಿ ನಡೆದಿದೆ. ದೆಹಲಿ ಪೊಲೀಸರ ಬೆಂಗಾವಲಿನಲ್ಲಿ ತೆರಿಗೆ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವೇಳೆ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ಕೆಲ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.

‘ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ಸಂರಕ್ಷಿಸಿ’

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಸಂರಕ್ಷಿಸಿಡುವಂತೆ ಸ್ಥಳೀಯ ನ್ಯಾಯಾಲಯ ತಿಳಿಸಿದೆ.

ಕೇಜ್ರಿವಾಲ್‌ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಭದ್ರತಾ ಮೇಲ್ವಿಚಾರಕರಾಗಿ ನಿಯೋಜಿತರಾಗಿದ್ದ ಎಸಿಪಿ ಎ.ಕೆ. ಸಿಂಗ್‌ ಅವರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಕೇಜ್ರಿವಾಲ್‌ ಪರ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.

ಅಲ್ಲದೆ ಆ ಅಧಿಕಾರಿಯನ್ನು ದುರ್ವತನೆ ಆರೋಪದ ಮೇಲೆ ತೆಗೆದುಹಾಕುವಂತೆ ಅಥವಾ ಬದಲಿಸುವಂತೆಯೂ ಕೋರಲಾಗಿದೆ. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂರಕ್ಷಿಸಲು ಮತ್ತು ಅದರ ಪ್ರತಿಯನ್ನು ಹಾಜರು ಪಡಿಸಲು ಕೋರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಿಗೆ ಪತ್ರ ಬರೆಯುವಂತೆ ತಿಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT