ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಣ ಪಡೆದು ಸರ್ಕಾರಿ ಉದ್ಯೋಗ ಹೇಳಿಕೆ: ಈಗ ಸಚಿವನ ಸರದಿ

Published 29 ಜೂನ್ 2024, 0:20 IST
Last Updated 29 ಜೂನ್ 2024, 0:20 IST
ಅಕ್ಷರ ಗಾತ್ರ

ಲಖನೌ: ‘ಹಲವು ಜನರಿಂದ ಹಣ ಪಡೆದು, ಅವರಿಗೆ ಸರ್ಕಾರಿ ಉದ್ಯೋಗ ಕೊಡಿಸಿದ್ದೇನೆ’ ಎಂದು ಉತ್ತರ ಪ್ರದೇಶದ ಬಿಜೆಪಿ ಮೈತ್ರಿ ಪಕ್ಷ ಸುಹೇಲ್‌ದೇವ್‌ ಭಾರತೀಯ ಸಮಾಜ ಪಾರ್ಟಿಯ (ಎಸ್‌ಬಿಎಸ್‌ಪಿ) ಶಾಸಕ ಬೇಡಿ ರಾಮ್‌ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ, ಅದೇ ಪಕ್ಷದ ಅಧ್ಯಕ್ಷ, ಸಚಿವ ಓಂ ಪ್ರಕಾಶ್‌ ರಾಜ್‌ಭರ್‌ ಅವರು, ‘ಬೇಡಿ ರಾಮ್‌ ಹಲವರಿಗೆ ಉದ್ಯೋಗ ಕೊಡಿಸಿದ್ದಾರೆ’ ಎಂದು ಹೇಳಿರುವ ಮತ್ತೊಂದು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

'ಯುವಕರಿಗೆ ಕೆಲಸಗಳನ್ನು ಕೊಡಿಸುವ ‘ಸಾಮರ್ಥ್ಯ’ ರಾಮ್‌ ಅವರಿಗಿದೆ’ ಎಂದು ಓಂ ಪ್ರಕಾಶ್‌ ಹೇಳಿರುವುದು ವಿಡಿಯೊ ತುಣುಕಿನಲ್ಲಿದೆ. 

‘ನಿಮ್ಮ ಮಗ, ಮಗಳಿಗೆ ಉದ್ಯೋಗ ಬೇಕು ಎಂದಿದ್ದರೆ, ನಿಮಗೆ ಸಂದರ್ಶನಕ್ಕೆ ಪತ್ರ ಬಂದ ನಂತರ ಬೇಡಿ ರಾಮ್‌ ಅವರನ್ನು ಸಂಪರ್ಕಿಸಬೇಕು’ ಎಂದು ರಾಜ್‌ಭರ್‌ ಅವರು ಸಭೆಯೊಂದರಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳುವ ದೃಶ್ಯಾವಳಿ ವಿಡಿಯೊ ತುಣುಕಿನಲ್ಲಿದೆ. 

‘ಅವರು (ರಾಮ್‌) ಯುವಜನರಿಗೆ ಕೆಲಸ ಕೊಡಿಸುವುದರಲ್ಲಿ ಎತ್ತಿದ ಕೈ. ಅವರ ಮೂಲಕ ಉದ್ಯೋಗ ಪಡೆದಿರುವ ಸಾಕಷ್ಟು ಜನರು ಈಗ ವೃತ್ತಿ ಮಾಡುತ್ತಿದ್ದಾರೆ’ ಎಂದು ರಾಜಭರ್‌ ಹೇಳುತ್ತಿರುವುದು ವಿಡಿಯೊದಲ್ಲಿದೆ. ಆ ಸಭೆಯಲ್ಲಿ ಬೇಡಿ ರಾಮ್‌ ಕೂಡ ಇದ್ದರು. ಯಾವಾಗ ಈ ಸಭೆ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ. 

ಕ್ರಮಕ್ಕೆ ಸೂಚನೆ: ಶಾಸಕ ರಾಮ್‌ ವಿಡಿಯೊಕ್ಕೆ ಸಂಬಂಧಿಸಿದಂತೆ  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಗುರುವಾರ ಸಂಜೆ ರಾಜ್‌ಭರ್‌ ಅವರನ್ನು ಕರೆಸಿಕೊಂಡು ರಾಮ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. 

ಬೇಡಿ ರಾಮ್‌ ವಿಡಿಯೊದ ಬಗ್ಗೆ ರಾಜ್‌ಭರ್‌ ಅವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ, ‘ನೀವ್ಯಾಕೆ ಅವರನ್ನು ಕೇಳಬಾರದು’ ಎಂದು ಮರುಪ್ರಶ್ನೆ ಎಸೆದರು. 

‘ಹೊಸ ವಿಡಿಯೊಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕತ್ವ ರಾಜ್‌ಭರ್‌ ಅವರನ್ನು ಕರೆಸಿಕೊಂಡು ಚರ್ಚಿಸಿದೆ. ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ಬೇಡಿ ರಾಮ್‌ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ’ ಎಂದು ಮೂಲಗಳು ತಿಳಿಸಿವೆ. 

ವಾಗ್ದಾಳಿ: ವಿಡಿಯೊಗಳನ್ನು ಆಧಾರವಾಗಿಟ್ಟುಕೊಂಡು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಹರಿಹಾಯ್ದಿವೆ.

ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ಶಾಸಕ ರಾಮ್‌ ಬಂಧನಕ್ಕೆ ಒತ್ತಾಯಿಸಿದ್ದಾರೆ. 

‍ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಿಜೆಪಿ ಆರೋಪಿಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌, ಶಾಸಕ ರಾಮ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. 

ರಾಮ್‌: ಹಲವು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಆರೋಪಿ

ಲಖನೌ: ಉತ್ತರ ಪ್ರದೇಶದಲ್ಲಿ ನಡೆದಿರುವ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ಶಾಸಕ ಬೇಡಿ ರಾಮ್‌ ಅವರು ರೈಲ್ವೆ ಉದ್ಯೋಗಿಯಾಗಿದ್ದವರು. 2006ರಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ನಂತರ ಅವರನ್ನು ರೈಲ್ವೆ ಹುದ್ದೆಯಿಂದ ವಜಾ ಮಾಡಲಾಗಿತ್ತು.  ಹಲವು ‍ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾದ ದೊಡ್ಡ ಇತಿಹಾಸ ಅವರದ್ದು.  ರೈಲ್ವೆ ನೇಮಕಾತಿ ಮಂಡಳಿ ನಡೆಸುವ ಲೋಕೋಪೈಲಟ್‌ ಪರೀಕ್ಷೆಯ ‍ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ ಆರೋಪದಲ್ಲಿ ರಾಮ್‌ ಹಾಗೂ ಅವರ ಸಹಚರರನ್ನು 2008ರಲ್ಲಿ ಬಂಧಿಸಲಾಗಿತ್ತು.  ಒಂದು ವರ್ಷದ ಬಳಿಕ ಸಹಾಯಕ ಸ್ಟೇಷನ್‌ ಮಾಸ್ಟರ್‌ ನೇಮಕಾತಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲೂ ಅವರನ್ನು ಬಂಧಿಸಲಾಗಿತ್ತು. 2014ರಲ್ಲಿ ಲೋಕೋ ಪೈಲಟ್‌ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲೂ ಇವರನ್ನು ಬಂಧಿಸಲಾಗಿತ್ತು.  2022ರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಎಂಟು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ ಎಂದು ಅವರು ಹೇಳಿಕೊಂಡಿದ್ದಾರೆ.  ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯವರಾದ ರಾಮ್‌ ಅವರ ಹೆಸರು ಮಧ್ಯಪ್ರದೇಶದಲ್ಲಿ ನಡೆದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲೂ ಕೇಳಿ ಬಂದಿತ್ತು. ಉತ್ತರ ಪ್ರದೇಶ ಮಾತ್ರವಲ್ಲದೆ ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲೂ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT