ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್‌ನಲ್ಲಿ ರಾಜಕೀಯ ಬಿಕ್ಕಟ್ಟು: ಹೈದರಾಬಾದ್‌ಗೆ ಜೆಎಂಎಂ ಶಾಸಕರು

43 ಶಾಸಕರ ಬೆಂಬಲವಿದೆ ಎಂದ ಜೆಎಂಎಂ
Published 1 ಫೆಬ್ರುವರಿ 2024, 23:30 IST
Last Updated 1 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ರಾಂಚಿ: ಹೇಮಂತ್ ಸೊರೇನ್‌ ಅವರ ಬಂಧನವಾದಾಗಿನಿಂದ ಜಾರ್ಖಂಡ್‌ನಲ್ಲಿ ಮುಖ್ಯಮಂತ್ರಿ ಇಲ್ಲದಂತಾಗಿದ್ದು, ಹೊಸ ಸರ್ಕಾರ ರಚನೆಗೆ ರಾಜ್ಯಪಾಲರು ಜೆಎಂಎಂ ಮೈತ್ರಿಕೂಟದ ಶಾಸಕಾಂಗ ಪಕ್ಷದ ಹೊಸ ನಾಯಕನನ್ನು ಇನ್ನೂ ಆಹ್ವಾನಿಸಿಲ್ಲ. ಇದರಿಂದ ಉದ್ಭವವಾಗಿರುವ ರಾಜಕೀಯ ಬಿಕ್ಕಟ್ಟು ರಾಜ್ಯದಲ್ಲಿ ‘ರೆಸಾರ್ಟ್‌ ರಾಜಕಾರಣ’ಕ್ಕೆ ನಾಂದಿ ಹಾಡಿದೆ.

ಬಿಜೆಪಿಯಿಂದ ಶಾಸಕರ ಕುದುರೆ ವ್ಯಾಪಾರ ನಡೆಯಬಹುದೆಂಬ ಭಯದಲ್ಲಿರುವ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ-ಕಾಂಗ್ರೆಸ್-ರಾಷ್ಟ್ರೀಯ ಜನತಾ ದಳದ ಮೈತ್ರಿಕೂಟದ ಶಾಸಕರನ್ನು ಕಾಂಗ್ರೆಸ್‌ ಆಡಳಿತವಿರುವ ತೆಲಂಗಾಣಕ್ಕೆ ಸ್ಥಳಾಂತರ ಮಾಡುತ್ತಿದೆ. 

ರಾಂಚಿಯ ಸರ್ಕ್ಯೂಟ್ ಹೌಸ್‌ನಿಂದ ವರದಿಗಾರರತ್ತ ಕೈ ಬೀಸುತ್ತಾ ಶಾಸಕರು ಐಷಾರಾಮಿ ಪ್ರಯಾಣಿಕ ಬಸ್‌ನಲ್ಲಿ ಬೆಂಗಾವಲು  ವಾಹನಗಳೊಂದಿಗೆ ಹೊರಟ ದೃಶ್ಯಗಳನ್ನು ಸುದ್ದಿ ಮಾಧ್ಯಮಗಳು ಬಿತ್ತರಿಸಿವೆ. 

‘ಶಾಸಕರನ್ನು ಬಸ್‌ನಲ್ಲಿ ರಾಂಚಿ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಗುತ್ತಿದೆ. ಅಲ್ಲಿಂದ ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದ ಹೈದರಾಬಾದ್‌ಗೆ ಸ್ಥಳಾಂತರಿಸಲಾಗುವುದು’ ಎಂದು ಮೂಲಗಳು ನೀಡಿರುವ ಮಾಹಿತಿ ಉಲ್ಲೇಖಿಸಿ ‘ಎನ್‌ಡಿಟಿವಿ’ ವರದಿ ಮಾಡಿದೆ. 

‘ನಾವು ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದೇವೆ. ಬಿಜೆಪಿಯವರು ಎಂತಹ ಜನರು ಎಂಬುದು ನಿಮಗೆ ತಿಳಿದಿದೆ. ಅವರು ಯಾವುದೇ ಸಮಯದಲ್ಲಿ ಏನು ಬೇಕಾದರೂ ಮಾಡಬಹುದು. 43 ಶಾಸಕರು ಜತೆಗಿದ್ದಾರೆ’ ಎಂದು ಕಾಂಗ್ರೆಸ್‌ನ ಜಾರ್ಖಂಡ್ ಮುಖ್ಯಸ್ಥ ರಾಜೇಶ್ ಠಾಕೂರ್ ಹೇಳಿದರು.

ಇದೇ ವೇಳೆ, 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ 43 ಶಾಸಕರ ಬೆಂಬಲವಿರುವುದಾಗಿ ಜೆಎಂಎಂ ನೇತೃತ್ವದ ಮೈತ್ರಿಕೂಟವು ವಿಡಿಯೊ ಬಿಡುಗಡೆ ಮಾಡಿದೆ. 

ಜಾರ್ಖಂಡ್ ವಿಧಾನಸಭೆಯು 81 ಶಾಸಕ ಬಲ ಹೊಂದಿದೆ. ಬಹುಮತಕ್ಕೆ 41 ಶಾಸಕರ ಬೆಂಬಲ ಬೇಕಿದೆ. ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಮೈತ್ರಿಕೂಟವು 47 ಶಾಸಕರನ್ನು ಹೊಂದಿದೆ. ಸೊರೇನ್ ಅವರ ಪಕ್ಷ 29, ಕಾಂಗ್ರೆಸ್‌ 17 ಕಾಂಗ್ರೆಸ್‌, ಲಾಲು ಪ್ರಸಾದ್‌ ಅವರ ಆರ್‌ಜೆಡಿ ಒಬ್ಬ ಶಾಸಕರನ್ನು ಹೊಂದಿವೆ. 

ಬಿಜೆಪಿ 25 ಶಾಸಕರನ್ನು ಹೊಂದಿದೆ. ಆಲ್ ಜಾರ್ಖಂಡ್ ವಿದ್ಯಾರ್ಥಿ ಒಕ್ಕೂಟದಲ್ಲಿ ಮೂವರು ಶಾಸಕರಿದ್ದಾರೆ. ಎನ್‌ಸಿಪಿ ಮತ್ತು ಎಡಪಕ್ಷಗಳ ತಲಾ ಒಬ್ಬರು ಶಾಸಕರು ಹಾಗೂ ಮೂವರು ಸ್ವತಂತ್ರ ಶಾಸಕರು ಇದ್ದಾರೆ.

ಪ್ರಸ್ತುತ ಚಂಪೈ ಸೊರೇನ್ ಅವರನ್ನು ಬೆಂಬಲಿಸುತ್ತಿರುವ 43 ಶಾಸಕರು ತಮ್ಮ ನಿಲುವು ಬದಲಿಸದಿದ್ದರೆ, ಮಾಜಿ ಸಾರಿಗೆ ಸಚಿವರನ್ನು ಹೊಸ ಸರ್ಕಾರ ರಚಿಸಲು ಆಹ್ವಾನಿಸಲಾಗುತ್ತದೆ. ಆದರೆ, ಒಬ್ಬ ಶಾಸಕ ಕೂಡ ಅತ್ತಿತ್ತ ವಾಲಿದರೂ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಬಿಜೆಪಿಗೆ ವಿರೋಧ ಪಕ್ಷದ ಆಡಳಿತವಿರುವ ರಾಜ್ಯವನ್ನು ಕಸಿದುಕೊಳ್ಳಲು ಬಾಗಿಲು ತೆರೆದುಕೊಳ್ಳಲಿದೆ. ಬಿಜೆ‍ಪಿಗೆ ಅಧಿಕಾರ ಹಿಡಿಯಲು ತಮ್ಮ 25 ಶಾಸಕರ ಜತೆಗೆ ಇತರ 15 ಶಾಸಕರ ಬೆಂಬಲದ ಅಗತ್ಯವಿದೆ.

ಇಂದು ‘ಸುಪ್ರೀಂ’ ವಿಚಾರಣೆ

ಈ ನಡುವೆ, ತಮ್ಮ ಬಂಧನ ಪ್ರಶ್ನಿಸಿ ಹೇಮಂತ್ ಸೊರೇನ್‌ ಅವರು ಇ.ಡಿ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಶುಕ್ರವಾರ ವಿಚಾರಣೆ ನಡೆಯಲಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಅರ್ಜಿಯ ವಿಚಾರಣೆಗೆ ಸಮ್ಮತಿಸಿದೆ.

ತನ್ನ ಬಂಧನವನ್ನು ‘ಕಾನೂನುಬಾಹಿರ ಮತ್ತು ನ್ಯಾಯವ್ಯಾಪ್ತಿ ಮೀರಿದ್ದು’ ಎಂದು ಆರೋಪಿಸಿರುವ ಹೇಮಂತ್‌, ಈಗಾಗಲೇ ತನಿಖಾ ಸಂಸ್ಥೆಯ ಹಿರಿಯ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಭೂ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಮಂತ್ ಸೊರೇನ್ ಅವರನ್ನು ಬುಧವಾರ ರಾತ್ರಿ ಬಂಧಿಸುವುದಕ್ಕೂ ಮೊದಲು ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಅವರ ಬಂಧನದ ನಂತರ ಜೆಎಂಎಂ ಪಕ್ಷದ ಹಿರಿಯ ನಾಯಕ ಚಂಪೈ ಸೊರೇನ್ ಅವರನ್ನು ಜೆಎಂಎಂ ಶಾಸಕಾಂಗ ಪಕ್ಷದ ಹೊಸ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

43 ಶಾಸಕರ ಬೆಂಬಲದ ಪತ್ರದೊಂದಿಗೆ ಚಂಪೈ ಸೊರೇನ್‌ ಅವರು ಬುಧವಾರ ರಾತ್ರಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿದ್ದರು. ಸರ್ಕಾರ ರಚಿಸಲು ತಮಗೆ 47 ಶಾಸಕರ ಬೆಂಬಲವಿರುವುದಾಗಿ ಹಕ್ಕು ಪ್ರತಿಪಾದಿಸಿದ್ದರು. ಜೆಎಂಎಂ ನೇತೃತ್ವದ ಮೈತ್ರಿಕೂಟದ ನಾಯಕರಿಗೆ ಗುರುವಾರ ಸಂಜೆ 5.30ಕ್ಕೆ ಭೇಟಿಯಾಗುವಂತೆ ರಾಜ್ಯಪಾಲರು ಸಮಯ ನೀಡಿದ್ದರು.

ನಾವು 43 ಶಾಸಕರ ಬೆಂಬಲದ ಪತ್ರ ಸಲ್ಲಿಸಿದ್ದೇವೆ. ಈ ಸಂಖ್ಯೆ 46-47 ತಲುಪುವ ನಿರೀಕ್ಷೆ ಇದೆ. ಯಾವುದೇ ಸಮಸ್ಯೆ ಇಲ್ಲ. ನಮ್ಮ ‘ಘಟಬಂಧನ್’ ಅಥವಾ ಮೈತ್ರಿ ತುಂಬಾ ಪ್ರಬಲವಾಗಿದೆ.
- ಚಂಪೈ ಸೊರೇನ್, ಜೆಎಂಎಂ ಶಾಸಕಾಂಗ ಪಕ್ಷದ ನಾಯಕ

ಸೊರೇನ್‌ಗೆ ನ್ಯಾಯಾಂಗ ಬಂಧನ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿರುವ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ, ಜೆಎಂಎಂ ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೇನ್ ಅವರನ್ನು ಇಲ್ಲಿನ ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ ಎಂದು ವಕೀಲರು ತಿಳಿಸಿದ್ದಾರೆ. ಸೊರೇನ್‌ ಅವರನ್ನು 10 ದಿನಗಳ ಕಸ್ಟಡಿಗೆ ನೀಡುವಂತೆ ಇ.ಡಿ ಕೋರಿತ್ತು. ಸೊರೇನ್ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ರಾಜೀವ್ ರಂಜನ್, ನ್ಯಾಯಾಲಯ ತನ್ನ ಆದೇಶವನ್ನು ಶುಕ್ರವಾರಕ್ಕೆ ಕಾಯ್ದಿರಿಸಿದ್ದು, ಆದೇಶ ಬರುವವರೆಗೆ ಜೆಎಂಎಂ ನಾಯಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT