ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

INDIA ಕೂಟದವರ ಐಫೋನ್‌ ಹ್ಯಾಕಿಂಗ್ ಪ್ರಯತ್ನ: ಆ್ಯಪಲ್‌ನಿಂದ ಎಚ್ಚರಿಕೆಯ ಸಂದೇಶ

Published 31 ಅಕ್ಟೋಬರ್ 2023, 7:47 IST
Last Updated 31 ಅಕ್ಟೋಬರ್ 2023, 7:48 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ ಅವರ ಐಫೋನ್‌ಗಳ ಸಂಭಾವ್ಯ ಹ್ಯಾಕಿಂಗ್ ಪ್ರಯತ್ನ ನಡೆದಿದೆ ಎಂದು ಆ್ಯಪಲ್‌ ಕಂಪನಿಯು ಈ ಇಬ್ಬರಿಗೆ ಎಸ್‌ಎಂಎಸ್‌ ಹಾಗೂ ಇಮೇಲ್‌ ಸಂದೇಶ ಕಳುಹಿಸಿ ಎಚ್ಚರಿಸಿದೆ. ಇದನ್ನು ಈ ಇಬ್ಬರು ನಾಯಕರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಾಕಷ್ಟು ಭದ್ರತಾ ಸೌಲಭ್ಯದೊಂದಿಗೆ ಐಫೋನ್‌ಗಾಗಿ ಕಂಪನಿ ಬಿಡುಗಡೆ ಮಾಡಿರುವ ಹೊಸ 17.1 ಐಒಎಸ್‌ ಅನ್ನು ಅಪ್‌ಗ್ರೇಡ್ ಮಾಡಿಕೊಳ್ಳುವಂತೆಯೂ ಹಾಗೂ ಲಾಕ್‌ಡೌನ್‌ ಮೋಡ್‌ ಅನ್ನು ಆಯ್ಕೆ ಮಾಡಿಕೊಳ್ಳುವಂತೆಯೂ ಸಂದೇಶದಲ್ಲಿ ಸಲಹೆ ನೀಡಲಾಗಿದೆ.

ತರೂರ್ ಹಾಗೂ ಮೋಯಿತ್ರಾ ಮಾತ್ರವಲ್ಲದೇ ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ‘ದ ಕೆಲವರ ಐಫೋನ್‌ಗಳ ಹ್ಯಾಕಿಂಗ್‌ಗೂ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಇದರಲ್ಲಿ ರಾಜ್ಯಸಭಾ ಸದಸ್ಯೆ ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ, ಎಐಎಂಐಎಂನ ಸಂಸದ ಅಸಾದುದ್ದೀನ್ ಓವೈಸಿ, ಎಎಪಿಯ ಸಂಸದ ರಾಘವ ಛಡ್ಡಾ ಹಾಗೂ ಕಾಂಗ್ರೆಸ್‌ ವಕ್ತಾರ ಪವನ್ ಖೇರಾ ಅವರಿಗೂ ಈ ಎಚ್ಚರಿಕೆಯ ಸಂದೇಶ ಬಂದಿದೆ ಎಂದು ವರದಿಯಾಗಿದೆ.

2021ರಲ್ಲಿ ಬಹಿರಂಗಗೊಂಡ ಪೆಗಾಸಸ್‌ ಬೇಹುಗಾರಿಕಾ ಹಗರಣದ ನಂತರ ಆ್ಯಪಲ್‌ ಕಂಪನಿಯು ತನ್ನ ಐಒಎಸ್‌ 16ರಿಂದ ಲಾಕ್‌ಡೌನ್‌ ಮೋಡ್ ಎಂಬ ಸೌಲಭ್ಯವನ್ನು ಪರಿಚಯಿಸಿತು. ಇದರ ಮೂಲಕ ಚಿತ್ರಗಳನ್ನು ಹೊರತುಪಡಿಸಿ ಇತರ ಯಾವುದೇ ಅಟಾಚ್‌ಮೆಂಟ್‌ಗಳನ್ನು ಇದು ಹ್ಯಾಕರ್‌ಗಳಿಗೆ ಸಿಗದಂತೆ ಕಾಪಾಡುವ ಸೌಲಭ್ಯ ಹೊಂದಿದೆ ಎಂದೆನ್ನಲಾಗಿದೆ.

ಬಳಕೆದಾರರು ಸುರಕ್ಷತೆಯ ಖಾತ್ರಿಪಡಿಸದಿದ್ದರೆ ಜಾವಾಸ್ಕ್ರಿಪ್ಟ್‌ ಇರುವ ಕೆಲ ಅಂತರ್ಜಾಲ ತಾಣಗಳನ್ನೂ ಇದು ತೆರೆಯದಂತೆ ನಿಯಂತ್ರಿಸುತ್ತದೆ. ವೈರ್‌ ಮೂಲಕ ಐಫೋನ್‌ನಿಂದ ಯಾವುದೇ ಮಾಹಿತಿ ವರ್ಗಾವಣೆಗೊಳ್ಳುವುದನ್ನೂ ಲಾಕ್‌ಡೌನ್ ಮೋಡ್ ತಡೆಯುತ್ತದೆ. ಕಾಂಟಾಕ್ಟ್‌ ಲಿಸ್ಟ್‌ನಲ್ಲಿರುವ ವ್ಯಕ್ತಿಗಳನ್ನು ಹೊರತುಪಡಿಸಿ ಇತರ ಅಪರಿಚಿತ ಸಂಖ್ಯೆಗಳ ಕರೆಗಳು ಫೋನ್‌ಗೆ ಬಾರದು.

ಇಸ್ರೇಲ್ ಮೂಲದ ಎನ್‌ಎಸ್‌ಒ ಸಮೂಹವು ಅಭಿವೃದ್ಧಿಪಡಿಸಿದ ಬೇಹುಗಾರಿಕಾ ಕುತಂತ್ರಾಂಶವನ್ನು ಜಾಗತಿಕ ಮಟ್ಟದಲ್ಲಿ ಕೆಲ ಸರ್ಕಾರಿ ಪ್ರಾಯೋಜಿತ ಸಂಸ್ಥೆಗಳು ಹಾಗೂ ಖಾಸಗಿ ಬೇಹುಗಾರಿಕಾ ಸಂಸ್ಥೆಗಳು ಬಳಸಿಕೊಂಡಿದ್ದವು. ಒಂದು ಬಾರಿ ಈ ಕುತಂತ್ರಾಂಶ ಫೋನ್‌ ಒಳಗೆ ಪ್ರವೇಶಿಸಿದ ನಂತರ ಕರೆ, ಕ್ಯಾಮೆರಾ, ಮೊಬೈಲ್ ಇರುವ ಸ್ಥಳದ ನಿಖರ ಮಾಹಿತಿಯನ್ನು ನಿರಂತರವಾಗಿ ರವಾನಿಸುತ್ತಿರುತ್ತವೆ. ಟೆಕ್ಸ್ಟ್‌ ಸಂದೇಶ, ಇಮೇಲ್‌, ವೈಯಕ್ತಿಕ ಮಾಹಿತಿ, ಪಾಸ್‌ವರ್ಡ್‌, ಸಂಪರ್ಕ ಸಂಖ್ಯೆಗಳು, ಬೆರಳಚ್ಚು, ಮುಖದ ಗುರುತು ಇತ್ಯಾದಿಗಳನ್ನೂ ಇವು ದಾಖಲಿಸುವ ಸಾಮರ್ಥ್ಯ ಹೊಂದಿವೆ.

ಪೆಗಾಸಸ್‌ನ ಹೊಸ ಮಾದರಿಯ ಕುತಂತ್ರಾಂಶವು ಕ್ಲೌಡ್‌ನಲ್ಲಿ ಇಟ್ಟಿರುವ ದಾಖಲೆಗಳನ್ನು ಹೊರ ತೆಗೆಯಬಲ್ಲ ಸಾಮರ್ಥ್ಯವೂ ಇದೆ ಎನ್ನಲಾಗಿದೆ. ಇದಕ್ಕಾಗಿ ಆ್ಯಪಲ್ ಕಂಪನಿ ಪರಿಚಯಿಸಿದ ಲಾಕ್‌ಡೌನ್‌ ಮೋಡ್‌ ಮೂಲಕ ಐಫೋನ್, ಐಪ್ಯಾಡ್‌, ಮ್ಯಾಕ್‌ ಯಂತ್ರಗಳಲ್ಲಿರುವ ಮಾಹಿತಿಯನ್ನು ರಕ್ಷಿಸಿಕೊಳ್ಳಬಹುದಾಗಿದೆ.

ಯಾರಿಗೆಲ್ಲ ಎಚ್ಚರಿಕೆ ಸಂದೇಶಗಳು...

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖಂಡ ಕೆ.ಸಿ.ವೇಣುಗೋಪಾಲ್, ಸಿಪಿಎಂನ ಸೀತಾರಾಮ್‌ ಯೆಚೂರಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರಿಗೆ ಐಫೋನ್‌ನಲ್ಲಿನ ಮಾಹಿತಿಯನ್ನು ಕಳುವು ಮಾಡಲು ಯತ್ನಿಸಲಾಗುತ್ತಿರುವ ಕುರಿತು ಆ್ಯಪಲ್‌ ಕಂಪನಿಯು ಎಚ್ಚರಿಕೆ ಸಂದೇಶ ರವಾನಿಸಿದೆ.

ಅಸಾದುದ್ದೀನ್‌ ಒವೈಸಿ (ಎಐಎಂಐಎಂ), ರಾಘವ ಛಡ್ಡಾ (ಎಎಪಿ), ಪ್ರಿಯಾಂಕಾ ಚತುರ್ವೇದಿ (ಶಿವಸೇನಾ–ಯುಬಿಟಿ), ಟಿ.ಎಸ್‌.ಸಿಂಗ್‌ ದೇವ್, ಪವನ್‌ ಖೇರಾ, ಎ.ರೇವಂತ ರೆಡ್ಡಿ, ಸುಪ್ರಿಯಾ ಶ್ರೀನಾತೆ (ಕಾಂಗ್ರೆಸ್‌), ಕೆ.ಟಿ.ರಾಮ ರಾವ್ (ಬಿಆರ್‌ಎಸ್‌) ಅವರಿಗೂ ಸಂದೇಶ ಕಳುಹಿಸಲಾಗಿದೆ.

ಪತ್ರಕರ್ತರಾದ ಸಿದ್ಧಾರ್ಥ ವರದರಾಜನ್, ಶ್ರೀರಾಮ್ ಕರ‍್ರಿ, ರವಿ ನಾಯರ್ ಹಾಗೂ ರೇವತಿ, ಆಬ್ಸರ್ವರ್ ರಿಸರ್ಚ್‌ ಫೌಂಡೇಷನ್ ಅಧ್ಯಕ್ಷ ಸಮೀರ್‌ ಸರನ್ ಅವರಿಗೂ ಈ ರೀತಿಯ ಸಂದೇಶವನ್ನು ಆ್ಯಪಲ್‌ ಕಂಪನಿ ರವಾನಿಸಿದೆ.

ತನಿ‌ಖೆಗೆ ಆದೇಶ

‘ದೇಶದ ಎಲ್ಲ ಪ್ರಜೆಗಳ ಖಾಸಗಿತನ ಮತ್ತು ಸುರಕ್ಷತೆಯನ್ನು ಸಂರಕ್ಷಣೆ ಮಾಡುವ ತನ್ನ ಹೊಣೆಗಾರಿಕೆಯನ್ನು ಸರ್ಕಾರ ‌ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಐಫೋನ್‌ಗಳಲ್ಲಿನ ಮಾಹಿತಿಯನ್ನು ಕಳ್ಳತನ ಮಾಡುವ ಯತ್ನಗಳು ನಡೆದಿವೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಿ, ಮೂಲ ಪತ್ತೆ ಹಚ್ಚಲಾಗುವುದು’ ಎಂದು ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಸ್ಪಂದನಾ ತಂಡ (ಸಿಇಆರ್‌ಟಿ–ಐಎನ್‌) ತನಿಖೆ ನಡೆಸುವುದು’ ಎಂದೂ ತಿಳಿಸಿದ್ದಾರೆ. ‘ಈ ಕುರಿತ ತನಿಖೆಗೆ ಸಹಕರಿಸುವಂತೆ ಆ್ಯಪಲ್‌ ಕಂಪನಿಯನ್ನು ಕೋರಿದ್ದೇವೆ. ‘ಸರ್ಕಾರಿ ಪ್ರಾಯೋಜಿತ ದಾಳಿ’ ಆರೋಪಗಳ ಕುರಿತ ವಾಸ್ತವ ಹಾಗೂ ನಿಖರ ಮಾಹಿತಿ ಒದಗಿಸುವಂತೆಯೂ ಕೇಳಿದ್ದೇವೆ’ ಎಂದು ಅವರು ಪೋಸ್ಟ್‌‌ನಲ್ಲಿ ಹೇಳಿದ್ದಾರೆ.

ನನಗೂ ಆ್ಯಪಲ್‌ ಕಂಪನಿಯಿಂದ ಸಂದೇಶ ಬಂದಿದೆ. ಸಂದೇಶವನ್ನು ಪರಿಶೀಲಿಸಿದ್ದು, ಅದು ಅಧಿಕೃತ ಎಂಬುದು ಸಹ ದೃಢಪಟ್ಟಿದೆ
ಶಶಿ ತರೂರ್‌, ಕಾಂಗ್ರೆಸ್ ಸಂಸದ
ನನ್ನಂಥ ತೆರಿಗೆದಾರನ ಹಣದಲ್ಲಿ ಅಧಿಕಾರಿಗಳು ಇಂತಹ ಕೆಲಸದಲ್ಲಿ ತೊಡಗುವಂತೆ ಮಾಡಿರುವುದು ಖುಷಿ ತಂದಿದೆ. ಇದಕ್ಕಿಂತ ಮುಖ್ಯ ಕೆಲಸ ಇಲ್ಲವೇ? ಮೋದಿ ಅವರೇ ಈ ರೀತಿ ಏಕೆ ಮಾಡುತ್ತಿರುವಿರಿ?
ಪವನ್‌ ಖೇರಾ, ಕಾಂಗ್ರೆಸ್‌ ವಕ್ತಾರ
ನನ್ನ ಸಂಸದೀಯ ಕಾರ್ಯಗಳಿಗಾಗಿ, ಮೋದಿ ಸರ್ಕಾರದ ಸರ್ವಾಧಿಕಾರಿ ಧೋರಣೆಗಳನ್ನು ಪ್ರಶ್ನಿಸುವುದಕ್ಕಾಗಿ ಸ್ಮಾರ್ಟ್‌ಫೋನ್‌ ಬಳಸುತ್ತೇನೆ. ನನ್ನ ಹಲವು ಪ್ರಕರಣಗಳಿಗೆ ಸಂಬಂಧಿಸಿ ವಕೀಲರೊಂದಿಗೆ ಚರ್ಚೆ ನಡೆಸುವುದಕ್ಕೂ ಬಳಸುವೆ. ನನ್ನ ಸ್ಮಾರ್ಟ್‌ಫೋನ್‌ ಮಾತ್ರವಲ್ಲ, ದೇಶದ ಪ್ರಜಾತಾಂತ್ರಿಕ ಮೌಲ್ಯಗಳೂ ದಾಳಿಗೆ ಒಳಗಾಗಿವೆ
ರಾಘವ್‌ ಛಡ್ಡಾ, ಎಎಪಿ ರಾಜ್ಯಸಭಾ ಸದಸ್ಯ

ಐಫೋನ್‌ ಅಥವಾ ಐಪ್ಯಾಡ್‌ನಲ್ಲಿ ಲಾಕ್‌ಡೌನ್ ಮೋಡ್ ಆನ್ ಮಾಡುವುದು ಹೇಗೆ?

  • ಸಾಧನದಲ್ಲಿ ಸೆಟ್ಟಿಂಗ್‌ ಆ್ಯಪ್‌ ತೆರೆಯಿರಿ

  • ಪ್ರೈವಸಿ ಅಂಡ್ ಸೆಕ್ಯೂರಿಟಿ ಆಯ್ಕೆ ಮಾಡಿಕೊಳ್ಳಿ

  • ಅದರಲ್ಲಿರುವ ಲಾಕ್‌ಡೌನ್ ಮೋಡ್ ಅನ್ನು ಆನ್‌ ಮಾಡಿ

  • ಟರ್ನ್ ಆನ್‌ ಎಂಬುದನ್ನು ಆಯ್ಕೆ ಮಾಡಿ, ರಿಸ್ಟಾರ್ಟ್ ಮಾಡಿ. ನಂತರ ಫೋನ್ ಆನ್‌ ಮಾಡಿ ಪಾಸ್‌ವರ್ಡ್ ಹಾಕಿ ತೆರೆಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT