ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಸೇರಿದಂತೆ 12 ಗ್ಯಾರಂಟಿ ಘೋಷಿಸಿದ NC

Published : 19 ಆಗಸ್ಟ್ 2024, 13:21 IST
Last Updated : 19 ಆಗಸ್ಟ್ 2024, 13:21 IST
ಫಾಲೋ ಮಾಡಿ
Comments

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯತ್ವ ಹಾಗೂ ವಿಶೇಷ ಸ್ಥಾನಮಾನ ಸೇರಿದಂತೆ 12 ಗ್ಯಾರಂಟಿಗಳನ್ನೊಳಗೊಂಡ ಚುನಾವಣಾ ಪ್ರಾಣಾಳಿಕೆಯನ್ನು ನ್ಯಾಷನಲ್‌ ಕಾನ್ಫರೆನ್ಸ್ (ಎನ್‌ಸಿ) ಪಕ್ಷ ಸೋಮವಾರ ಪ್ರಕಟಿಸಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅಡಿ ಇದ್ದ ವಿಶೇಷ ಸ್ಥಾನಮಾನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2019ರಲ್ಲಿ ರದ್ದುಪಡಿಸಿತ್ತು. ಹಾಗೆಯೇ, ರಾಜ್ಯವನ್ನು ಎರಡು (ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್‌) ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು.

ಪ್ರಣಾಳಿಕೆ ಬಿಡುಗಡೆ ಮಾಡಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಎನ್‌ಸಿ ಉಪಾಧ್ಯಕ್ಷ ಒಮರ್‌ ಅಬ್ದುಲ್ಲಾ, ಈಡೇರಿಸಲು ಸಾಧ್ಯವಿರುವ ಭರವಸೆಗಳನ್ನಷ್ಟೇ ತಮ್ಮ ಪಕ್ಷ ನೀಡಿದೆ. ಈ ಪ್ರಣಾಳಿಕೆಯು, ಪಕ್ಷದ ದೂರದೃಷ್ಟಿ ಮತ್ತು ಆಡಳಿತಕ್ಕೆ ನೀಲ ನಕ್ಷೆಯಾಗಿದೆ ಎಂದು ಹೇಳಿದ್ದಾರೆ.

ರಾಜ್ಯ ವಿಭಜನೆ ನಿರ್ಧಾರ ಮತ್ತು ವಿಶೇಷ ಸ್ಥಾನಮಾನ ರದ್ದು ಕ್ರಮದ ವಿರುದ್ಧ ಮೊದಲ ಅಧಿವೇಶನದಲ್ಲೇ ನಿರ್ಣಯ ಅಂಗೀಕರಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ.

'ವಿಶೇಷ ಸ್ಥಾನಮಾನ ಹಿಂಪಡೆಯಲು ಹಾಗೂ ರಾಜ್ಯ ಸ್ಥಾನಮಾನ ಮರಳಿ ಪಡೆಯಲು ಹೋರಾಡುತ್ತೇವೆ. ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ–2019 ಅನ್ನು ಪುನರ್‌ರಚಿಸಲು ಶ್ರಮಿಸುತ್ತೇವೆ' ಎಂದು ಹೇಳಲಾಗಿದೆ.

ಎನ್‌ಸಿ ನೇತೃತ್ವದ ಹಿಂದಿನ ಸರ್ಕಾರ ಅಂಗೀಕರಿಸಿದ್ದ ರಾಜ್ಯದ ಸ್ವಾಯತ್ತತೆ ನಿರ್ಣಯವನ್ನು ಜಾರಿಗೊಳಿಸುವುದಾಗಿಯೂ ತಿಳಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 1953ಕ್ಕೂ ಮೊದಲು ಇದ್ದ ಸಂವಿಧಾನ ಪೂರ್ವ ಸ್ಥಿತಿಯನ್ನು ಪುನಃಸ್ಥಾಪಿಸಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಆಗಿನ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ನೇತೃತ್ವದ ಎನ್‌ಸಿ ಸರ್ಕಾರ 2000 ಇಸವಿಯ ಜೂನ್‌ನಲ್ಲಿ ಅಂಗೀಕರಿಸಿತ್ತು. ಅದನ್ನು ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಕೇಂದ್ರ ಸಚಿವ ಸಂಪುಟ ತಿರಸ್ಕರಿಸಿತ್ತು.

ಇಲ್ಲಿನ ವಿಧಾನಸಭೆಗೆ ಸೆಪ್ಟೆಂಬರ್‌ 18, ಸೆಪ್ಟೆಂಬರ್‌ 25 ಮತ್ತು ಅಕ್ಟೋಬರ್‌ 1ರಂದು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಸೆಪ್ಟೆಂಬರ್‌ 30ರೊಳಗೆ ಚುನಾವಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಕಳೆದ ಡಿಸೆಂಬರ್‌ನಲ್ಲಿ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತ್ತು.

ಇತರ ಭರವಸೆಗಳು

  • ಸಾರ್ವಜನಿಕ ಭದ್ರತೆ ಕಾಯ್ದೆಯ ರದ್ದತಿ

  • ಒಂದು ಲಕ್ಷ ಉದ್ಯೋಗ ಸೃಷ್ಟಿ

  • ಆರ್ಥಿಕ ದುರ್ಬಲ ವರ್ಗದ ಕುಟುಂಬಕ್ಕೆ ವರ್ಷಕ್ಕೆ ಉಚಿತ ಆರು ಎಲ್‌ಪಿಜಿ ಸಿಲಿಂಡರ್‌

  • ಮಹಿಳೆಯರಿಗೆ ಸಾರ್ವಜನಿಕ ಸಾರಿಗೆಗಳಲ್ಲಿ ಉಚಿತ ಪ್ರಯಾಣ 

  • ರಾಜಕೀಯ ಕೈದಿಗಳ ಬಿಡುಗಡೆ

  • ಕಾಶ್ಮೀರಿ ಪಂಡಿತರನ್ನು ವಾಪಸ್‌ ಕರೆಸಿ
    ಕೊಳ್ಳುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT