ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ: ನಾಗರ ಶೈಲಿಯ ವಾಸ್ತುಶಿಲ್ಪದ ರಾಮಮಂದಿರಕ್ಕೆ ಪೂರ್ವ ದಿಕ್ಕಿನಿಂದ ಪ್ರವೇಶ

Published 27 ಡಿಸೆಂಬರ್ 2023, 11:02 IST
Last Updated 27 ಡಿಸೆಂಬರ್ 2023, 11:02 IST
ಅಕ್ಷರ ಗಾತ್ರ

ಅಯೋಧ್ಯೆ: ‘ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರವು ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ಪೂರ್ವ ದಿಕ್ಕಿನಿಂದ ಪ್ರವೇಶಿಸಬಹುದಾದ ಈ ದೇಗುಲಕ್ಕೆ ಒಟ್ಟು 32 ಮೆಟ್ಟಿಲುಗಳಿವೆ’ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ ತಿಳಿಸಿದರು.

‘ಒಟ್ಟು ಮೂರು ಅಂತಸ್ತಿನ ದೇವಾಲಯದ ಕಟ್ಟಡದ ಪ್ರವೇಶ ಪೂರ್ವ ದಿಕ್ಕಿಗಿದ್ದರೆ, ಹೊರಹೋಗುವ ಬಾಗಿಲು ದಕ್ಷಿಣಕ್ಕಿದೆ. ನಾಗರ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯ 380 ಅಡಿ ಉದ್ದ (ಪೂರ್ವ–ಪಶ್ಚಿಮಕ್ಕೆ), 250 ಅಡಿ ಅಗಲ ಹಾಗೂ 161 ಅಡಿ ಎತ್ತರವಿದೆ. ಪ್ರತಿ ಅಂತಸ್ತಿನಲ್ಲೂ 20 ಅಡಿ ಎತ್ತರದ ಸ್ತಂಭಗಳಿದ್ದು, ಇವುಗಳ ಒಟ್ಟು ಸಂಖ್ಯೆ 392’ ಎಂದು ಹೇಳಿದರು.

ದೇವಾಲಯದ ಮುಖ್ಯ ಆವರಣದೊಳಗೆ ಆಯತಾಕಾರದ ಪರದಿ ಇದ್ದು, ಇದಕ್ಕೆ ಪೆರ್ಕೋಟಾ ಎಂದು ಕರೆಯಲಾಗುತ್ತದೆ. ಇದು ದಕ್ಷಿಣ ಭಾರತದ ದೇವಾಲಯಗಳ ಶೈಲಿಯಾಗಿದ್ದು, ಉತ್ತರ ಭಾರತದಲ್ಲಿ ಈವರೆಗೂ ಇರಲಿಲ್ಲ. ಪೆರ್ಕೋಟಾ ಒಟ್ಟು 14 ಅಡಿ ಅಗಲ ಇದ್ದು, ಇದರ ಪರಿಧಿ 732 ಅಡಿ ಇದೆ. ಇದರ ನಾಲ್ಕೂ ದಿಕ್ಕಿನಲ್ಲೂ ಸೂರ್ಯ ಭಗವಾನ್, ಮಾತಾ ಭಗವತಿ, ಗಣೇಶ ಮತ್ತು ಶಿವನಿಗೆ ಮೀಸಲಿಡಲಾಗಿದೆ‘ ಎಂದು ರಾಯ್ ವಿವರಿಸಿದರು.

‘ಉತ್ತರ ದಿಕ್ಕಿನಲ್ಲಿ ದೇವಿ ಅನ್ನಪೂರ್ಣಾ ದೇವಾಲಯ ನಿರ್ಮಾಣವಾಗಲಿದೆ. ದಕ್ಷಿಣಕ್ಕೆ ಹನುಮಾನ್‌ ದೇಗುಲ ಇರಲಿದೆ. ದೇವಾಲಯದ ಆವರಣದಲ್ಲಿ ಇನ್ನೂ ಏಳು ಗುಡಿಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಮಹರ್ಷಿ ವಾಲ್ಮೀಕಿ, ಮಹರ್ಷಿ ವಸಿಷ್ಠ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯ, ನಿಷಾದ್ ರಾಜ್, ಮಾತಾ ಶಬರಿ, ದೇವಿ ಅಹಲ್ಯಾ ಗುಡಿಯ ನಿರ್ಮಾಣದ ಯೋಜನೆ ಇದೆ’ ಎಂದು ಚಂಪತ್ ರಾಯ್ ಹೇಳಿದರು.

‘ಜಟಾಯು ಪ್ರತಿಮೆಯನ್ನು ಕುಬೇರ ಮೂಲೆಯಲ್ಲಿ ಸ್ಥಾಪಿಸಲಾಗಿದೆ. ಈ ದಿಕ್ಕಿನಲ್ಲಿರುವ ಐತಿಹಾಸಿಕ ಪುರಾತನ ಶಿವ ದೇಗುಲದ ಪಕ್ಕದಲ್ಲಿ ಸ್ಥಾಪಿಸಲಾಗಿದೆ. ದೇವಾಲಯದ ಪ್ರತಿಷ್ಠಾಪನೆಯು ಜ. 22ರ ಮಧ್ಯಾಹ್ನ 12ರಿಂದ 12.15ರವರೆಗೆ ನಡೆಯಲಿದೆ’ ಎಂದು ತಿಳಿಸಿದರು.

‘ದೇವಾಲಯದ ಸಂಕೀರ್ಣದಲ್ಲಿ ಹಿರಿಯರು ಹಾಗೂ ದುರ್ಬಲರ ಪ್ರವೇಶಕ್ಕೆ ಲಿಫ್ಟ್‌ ಹಾಗೂ ಎರಡು ರ‍್ಯಾಂಪ್‌ಗಳನ್ನು ಸ್ಥಾಪಿಸಲಾಗಿದೆ. ಯಾತ್ರಾರ್ಥಿಗಳ ಯೋಗಕ್ಷೇಮ ಕೇಂದ್ರ, ಆರೋಗ್ಯ ಕೇಂದ್ರ, ಶೌಚಾಲಯ ಘಟಕ, 25 ಸಾವಿರ ಜನರ ಶೂ, ಮೊಬೈಲ್‌, ವಾಚ್‌ ಇಡಲು ಸ್ಥಳಾವಕಾಶ, ತುರ್ತು ಸಂದರ್ಭದಲ್ಲಿ ದೇಗುಲದಿಂದ ಸುರಕ್ಷಿತವಾಗಿ ಹೊರ ಬರಲು ಪ್ರತ್ಯೇಕ ಮಾರ್ಗ ನಿರ್ಮಿಸಲಾಗುತ್ತಿದೆ ಎಂದು ಚಂಪತ್ ರಾಯ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT