ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬದ್ಲಾಪುರ ಪ್ರತಿಭಟನೆ ರಾಜಕೀಯ ಪ್ರೇರಿತ: ಪ್ರತಿಭಟಿಸಿದವರು ಹೊರಗಿನವರು; ಶಿಂದೆ ಗರಂ

Published : 21 ಆಗಸ್ಟ್ 2024, 10:55 IST
Last Updated : 21 ಆಗಸ್ಟ್ 2024, 10:55 IST
ಫಾಲೋ ಮಾಡಿ
Comments

ಮುಂಬೈ: ಠಾಣೆ ಜಿಲ್ಲೆಯ ಬದ್ಲಾಪುರ ರೈಲು ನಿಲ್ದಾಣದಲ್ಲಿ ರೈಲು ತಡೆ ನಡೆಸಿರುವುದು ರಾಜಕೀಯ ಪ್ರೇರಿತ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರಲ್ಲಿ ಹೆಚ್ಚಿನವರು ಹೊರಗಿನವರಾಗಿದ್ದರು. ಕೇವಲ ರಾಜ್ಯ ಸರ್ಕಾರವನ್ನು ಕೆಣಕುವುದಷ್ಟೇ ಅವರ ಉದ್ದೇಶವಾಗಿತ್ತು ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿರುವವರಿಗೆ ನಾಚಿಕೆಯಾಗಬೇಕು ಎಂದು ವಿಪಕ್ಷ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರತಿಭಟನಾಕಾರರು ಸ್ಥಳೀಯ ನಿವಾಸಿಗಳಲ್ಲದ ಕಾರಣ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ. ಪ್ರತಿಭಟನೆಯಲ್ಲಿ ಭಾಗಿಯಾದ ಸ್ಥಳೀಯ ನಿವಾಸಿಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದರು ಎಂದು ತಿಳಿಸಿದ್ದಾರೆ.

ಬದ್ಲಾಪುರ ಪ್ರದೇಶದಲ್ಲಿ ನರ್ಸರಿಗೆ ಹೋಗುವ ಮೂರು ಹಾಗೂ ನಾಲ್ಕು ವರ್ಷದ ಇಬ್ಬರು ಬಾಲಕಿಯರ ಮೇಲೆ 23 ವರ್ಷದ ಸ್ವಚ್ಛತಾ ಕಾರ್ಮಿಕನೊಬ್ಬ ಲೈಂಗಿಕ ದೌರ್ಜನ್ಯ ‌ಎಸಗಿರುವುದು ರಾಜ್ಯದಾದ್ಯಂತ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ದೌರ್ಜನ್ಯವನ್ನು ಖಂಡಿಸಿ, ಪೋಷಕರು, ಸಾರ್ವಜನಿಕರು ಮಂಗಳವಾರ ಬದ್ಲಾಪುರ ರೈಲು ನಿಲ್ದಾಣದಲ್ಲಿ ರೈಲು ತಡೆ ನಡೆಸುವ ಮೂಲಕ ಆಕ್ರೋಶ ಹೊರಹಾಕಿದ್ದರು.

ಪ್ರತಿಭಟನೆಯಿಂದಾಗಿ ಸುಮಾರು 10 ಪ್ರಮುಖ ರೈಲು ಮಾರ್ಗಗಳನ್ನು ಬದಲಿಸಲಾಗಿತ್ತು. ಪ್ರಯಾಣಿಕರ ಅನುಕೂಲಕ್ಕೆ ಬಸ್‌ ಸೌಕರ್ಯ ನೀಡಲಾಗಿತ್ತು. ರೈಲು ತಡೆ ನಿಲ್ಲಿಸಲು ಪೊಲೀಸರು ಹಾಗೂ ಮುಖ್ಯಮಂತ್ರಿ ಅವರ ಮನವಿಯ ಬಳಿಕವೂ ಪ್ರತಿಭಟನೆಯನ್ನು ಜನರು ನಿಲ್ಲಿಸಲಿಲ್ಲ. ಸುಮಾರು ಆರು ತಾಸು ಪ್ರತಿಭಟನೆ ನಡೆದಿತ್ತು.

ಪ್ರತಿಭಟನೆಯ ವೇಳೆ ಬದ್ಲಾಪುರ ರೈಲು ನಿಲ್ದಾಣ ಮತ್ತು ಪಟ್ಟಣದ ಇತರೆಡೆ ನಡೆದ ಕಲ್ಲು ತೂರಾಟ ಘಟನೆಗಳಲ್ಲಿ ರೈಲ್ವೆ ಪೊಲೀಸರು ಸೇರಿದಂತೆ ಕನಿಷ್ಠ 25 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಹಿಂಸಾಚಾರ ಸಂಬಂಧ 72 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.

ಏನಿದು ಘಟನೆ?

‘ಆಗಸ್ಟ್‌ 12 ಮತ್ತು 13ರಂದು ಈ ಘಟನೆ ನಡೆದಿದೆ. ಬೆಳಿಗ್ಗೆಯ ಮೊದಲ ತರಗತಿ ಮುಗಿದ ಬಳಿಕ ಬಾಲಕಿಯರು ಶೌಚಾಲಯಲಕ್ಕೆ ತೆರಳಿದ್ದಾರೆ. ಈ ವೇಳೆ ಆರೋಪಿಯು ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ’ ಎಂದು ಮಾಧ್ಯಮಗಳು ವರದಿ ಪ್ರಕಟಿಸಿವೆ.

‘ಆಗಸ್ಟ್‌ 15ರಂದು ನಾಲ್ಕು ವರ್ಷದ ಬಾಲಕಿಯು ತನ್ನ ಖಾಸಗಿ ಅಂಗದಲ್ಲಿ ನೋವಾಗುತ್ತಿರುವ ಕುರಿತು ಪೋಷಕರಿಗೆ ತಿಳಿಸಿದ್ದಾಳೆ. ತುಸು ಹೆಚ್ಚು ವಿಚಾರಿಸಿದಾಗ ತನ್ನ ಸ್ನೇಹಿತೆಗೂ ಇದೇ ರೀತಿ ಆಗಿರುವುದಾಗಿ ಆಕೆ ತಿಳಿಸಿದ್ದಾಳೆ. ಪೋಷಕರು, ಮೂರು ವರ್ಷದ ಬಾಲಕಿಯ ಪೋಷಕರನ್ನು ವಿಚಾರಿಸಿದ್ದಾರೆ. ಆಗ ಅವರು, ‘ಹೌದು ನಮ್ಮ ಮಗಳೂ ಎರಡು ಮೂರು ದಿನಗಳಿಂದ ಶಾಲೆಗೆ ಹೋಗಲು ಹೆದರುತ್ತಿದ್ದಾಳೆ’ ಎಂದಿದ್ದಾರೆ’ ಎಂದು ವರದಿಗಳಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT