ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್‌ಲಾಲ್ ಶರ್ಮಾ ಆಯ್ಕೆ

Published 12 ಡಿಸೆಂಬರ್ 2023, 11:02 IST
Last Updated 12 ಡಿಸೆಂಬರ್ 2023, 11:02 IST
ಅಕ್ಷರ ಗಾತ್ರ

ಜೈ‍ಪುರ: ಮತ್ತೊಂದು ಅಚ್ಚರಿಯ ತೀರ್ಮಾನ ತೆಗೆದುಕೊಂಡಿರುವ ಬಿಜೆಪಿ ವರಿಷ್ಠರು ಮೊದಲ ಬಾರಿಗೆ ಶಾಸಕರಾಗಿರುವ ಭಜನ್‌ ಲಾಲ್‌ ಶರ್ಮಾ ಅವರನ್ನು ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಮಂಗಳವಾರ ಆಯ್ಕೆ ಮಾಡಿದ್ದಾರೆ. ಇದರೊಂದಿಗೆ ಹಲವು ದಿನಗಳ ಕುತೂಹಲಕ್ಕೆ ತೆರೆಎಳೆದಂತಾಗಿದೆ. 

ಬ್ರಾಹ್ಮಣ ಸಮುದಾಯಕ್ಕೆ ಸೇರಿದ 56 ವರ್ಷದ ಭಜನ್‌ ಲಾಲ್‌ ಆಯ್ಕೆ ಮೂಲಕ, ವಿವಿಧ ರಾಜ್ಯಗಳಲ್ಲಿ ಹೊಸ ತಲೆಮಾರಿನ ನಾಯಕರನ್ನು ಬೆಳೆಸುವುದು ಪಕ್ಷದ ಆದ್ಯತೆಯಾಗಿದೆ ಎಂಬ ಸ್ಪಷ್ಟ ಸೂಚನೆಯನ್ನು ಬಿಜೆಪಿ ವರಿಷ್ಠರು ನೀಡಿದ್ದಾರೆ. ಪಕ್ಷವು ಇದಕ್ಕೂ ಮುನ್ನ ಛತ್ತೀಸಗಢ ಮತ್ತು ಮಧ್ಯ ಪ್ರದೇಶದಲ್ಲೂ ಸಿ.ಎಂ ಪಟ್ಟವನ್ನು ಹೊಸಬರಿಗೆ ನೀಡಿತ್ತು.

ಕೇಂದ್ರದ ವೀಕ್ಷಕರ ಸಮ್ಮುಖದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯು, ಭಜನ್‌ ಲಾಲ್‌ ಅವರನ್ನು ನಾಯಕನಾಗಿ ಆಯ್ಕೆ ಮಾಡಿತು. ದಿಯಾ ಕುಮಾರಿ ಮತ್ತು ಪ್ರೇಮಚಂದ್ ಬೈರವ ಅವರು ಉಪಮುಖ್ಯಮಂತ್ರಿ ಆಗಲಿದ್ದಾರೆ. ಈ ಮೂವರೂ ಆಡಳಿತದಲ್ಲಿ ಅನನುಭವಿಗಳಾಗಿದ್ದು, ಈ ಹಿಂದೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿಲ್ಲ.

ಸ್ಪೀಕರ್‌ ಆಗಿ ವಾಸುದೇವ ದೇವ್ನಾನಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವೀಕ್ಷಕರಲ್ಲಿ ಒಬ್ಬರಾದ, ಕೇಂದ್ರ ಸಚಿವ ರಾಜನಾಥ್‌ ಸಿಂಗ್ ಪ್ರಕಟಿಸಿದರು.

ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಬೆನ್ನಲ್ಲೇ ಭಜನ್‌ ಲಾಲ್‌, ರಾಜಭವನಕ್ಕೆ ತೆರಳಿ  ಸರ್ಕಾರ ರಚನೆಯ ಹಕ್ಕು ಮಂಡಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಬೆಂಬಲ ಇರುವ ಅವರು, ಬಿಜೆಪಿಯ ‘ಭದ್ರಕೋಟೆ’ ಸಂಗಾನೆರ್‌ ಕ್ಷೇತ್ರದಿಂದ ಕಾಂಗ್ರೆಸ್‌ನ ಪುಷ್ಪೇಂದ್ರ ಭಾರದ್ವಾಜ್ ವಿರುದ್ಧ 48,081 ಮತಗಳಿಂದ ಗೆದ್ದಿದ್ದಾರೆ. 

ಸತತ ನಾಲ್ಕು ಅವಧಿಯಿಂದ ಬಿಜೆಪಿ ರಾಜಸ್ಥಾನ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಹಿರಿಯ ನಾಯಕಿ ವಸುಂಧರಾ ರಾಜೇ ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಭಜನ್‌ ಲಾಲ್‌ ಹೆಸರನ್ನು ಸೂಚಿಸಿದರು. 

ಉಪ‍ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಜೈಪುರ ರಾಜಮನೆತನದ ದಿಯಾ ಕುಮಾರಿ ಶಾಸಕಿಯಾಗಿರುವುದು ಇದು ಎರಡನೇ ಬಾರಿ. 52 ವರ್ಷದ ಅವರು 2013 ರಲ್ಲಿ ಮೊದಲ ಸಲ ಆಯ್ಕೆಯಾಗಿದ್ದರು. ಈ ಬಾರಿ ವಿದ್ಯಾಧರ ನಗರ ಕ್ಷೇತ್ರದಿಂದ 71,368 ಮತಗಳ ಅಂತರದಿಂದ ಗೆದ್ದಿದ್ದಾರೆ. 2019 ರಲ್ಲಿ ರಾಜಸಮಂದ್‌ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. 

ದಲಿತ ಸಮುದಾಯಕ್ಕೆ ಸೇರಿದ 54 ವರ್ಷದ ಪ್ರೇಮಚಂದ್‌, ದುದು ವಿಧಾನಸಭಾ ಕ್ಷೇತ್ರದಿಂದ 35,743 ಮತಗಳ ಅಂತರದಿಂದ ಗೆದ್ದಿದ್ದಾರೆ. ಜೈಪುರದ ರಾಜಸ್ಥಾನ ವಿಶ್ವವಿದ್ಯಾಲಯದಿಂದ ಅವರು ಪಿಎಚ್‌.ಡಿ ಪದವಿ ಪಡೆದಿದ್ದಾರೆ. 

ರಾಜಸ್ಥಾನದ ಒಟ್ಟು ಜನಸಂಖ್ಯೆ 7.82 ಕೋಟಿ ಆಗಿದ್ದು, ಅದರಲ್ಲಿ ಬ್ರಾಹ್ಮಣ ಸಮುದಾಯದವರು ಒಂದು ಕೋಟಿಯಷ್ಟು ಇದ್ದಾರೆ. ರಾಜಕೀಯದಲ್ಲಿ ಸೂಕ್ತ ಪ್ರಾತಿನಿಧ್ಯ ದೊರೆತಿಲ್ಲ ಎಂಬ ಅಸಮಾಧಾನವನ್ನು ಅವರು ಹೊಂದಿದ್ದರು. ಜಾತಿ ಸಮೀಕರಣ ಮತ್ತು ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ವರಿಷ್ಠರು ಭಜನ್‌ ಲಾಲ್‌ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ದಿಯಾ ಅವರ ಆಯ್ಕೆಯ ಹಿಂದೆ ರಾಜಸ್ಥಾನದ ಒಟ್ಟು ಜನಸಂಖ್ಯೆಯ ಶೇ 10 ರಷ್ಟು ಬರುವ ರಜಪೂತ ಸಮುದಾಯದವನ್ನು ಹಾಗೂ ಬೈರವ ಅವರ ಆಯ್ಕೆಯಿಂದ ಶೇ 17 ರಷ್ಟಿರುವ ಪರಿಶಿಷ್ಟ ಜಾತಿಯನ್ನು ಒಲಿಸಿಕೊಳ್ಳುವ ಪ್ರಯತ್ನವನ್ನು ಪಕ್ಷವು ಮಾಡಿದೆ.

‘ಜನರು ಬಿಜೆಪಿ ಮೇಲೆ ಇಟ್ಟಿರುವ ನಿರೀಕ್ಷೆಗಳನ್ನು ರಾಜಸ್ಥಾನದ ಎಲ್ಲ ಶಾಸಕರು ಖಂಡಿತವಾಗಿಯೂ ಈಡೇರಿಸುವರು ಎಂದು ಭರವಸೆ ನೀಡುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಜಸ್ಥಾನದ ಎಲ್ಲಾ ಕ್ಷೇತ್ರಗಳಲ್ಲಿ ಸಮಗ್ರ ಅಭಿವೃದ್ಧಿಯನ್ನು ನಾವು ಖಚಿತಪಡಿಸುತ್ತೇವೆ’ ಎಂದು ಭಜನ್‌ ಲಾಲ್‌ ಪ್ರತಿಕ್ರಿಯಿಸಿದ್ದಾರೆ. 

ರಾಜಸ್ಥಾನದ 199 ವಿಧಾನಸಭಾ ಕ್ಷೇತ್ರಗಳಿಗೆ ಈಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 115 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್‌ಗೆ 69 ಸ್ಥಾನಗಳು ದೊರೆತಿದೆ. ಕಾಂಗ್ರೆಸ್‌ ಅಭ್ಯರ್ಥಿಯ ನಿಧನದಿಂದಾಗಿ ಕರ್ಣಪುರ ಕ್ಷೇತ್ರದ ಚುನಾವಣೆ ನಡೆದಿರಲಿಲ್ಲ. ಅಲ್ಲಿ ಜ.5 ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT