ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ | ನಿತೀಶ್ ಕುಮಾರ್ ನೇತೃತ್ವ NDA ಸರ್ಕಾರದ ವಿಶ್ವಾಸ ಮತಯಾಚನೆ ಫೆ. 12ಕ್ಕೆ

Published 1 ಫೆಬ್ರುವರಿ 2024, 15:54 IST
Last Updated 1 ಫೆಬ್ರುವರಿ 2024, 15:54 IST
ಅಕ್ಷರ ಗಾತ್ರ

ಪಟ್ನಾ: ಬಿಹಾರದಲ್ಲಿ ಹೊಸದಾಗಿ ಸರ್ಕಾರ ರಚಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರವು ಬಜೆಟ್‌ ಅಧಿವೇಶನದ ಮೊದಲ ದಿನವಾದ ಫೆ. 12ರಂದು ವಿಶ್ವಾಸ ಮತಯಾಚಿಸಲಿದೆ ಎಂದು ವರದಿಯಾಗಿದೆ.

ವಾರದ ಹಿಂದೆಯಷ್ಟೇ ಅಸ್ತಿತ್ವಕ್ಕೆ ಬಂದ ಸರ್ಕಾರಕ್ಕೆ ಈ ವಿಶ್ವಾಸಮತ ಯಾಚಿಸಲು ಈ ಮೊದಲು ಫೆ. 10 ದಿನಾಂಕ ನಿಗದಿಯಾಗಿತ್ತು. ಫೆ. 12ರಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾತನಾಡಲಿದ್ದಾರೆ. ಇದಾದ ನಂತರ ವಿಶ್ವಾಸ ಮತಯಾಚನೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

18 ತಿಂಗಳ ಹಿಂದೆ ಆರ್‌ಜೆಡಿ ಜತೆಗೂಡಿ ರಚಿಸಿದ್ದ ಮಹಾಘಟಬಂಧನ್ ಸರ್ಕಾರವನ್ನು ತೊರೆದ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಎನ್‌ಡಿಎ ಜೊತೆ ಕೈಜೋಡಿಸಿದ್ದರು. ಜ. 28ರಂದು ಬಿಹಾರದ ಮುಖ್ಯಮಂತ್ರಿಯಾಗಿ 9ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದರು. 

ಸದ್ಯ ವಿಧಾನಸಭಾಧ್ಯಕ್ಷ ಆರ್‌ಜೆಡಿಯ ಅವಧ್ ಬಿಹಾರಿ ಚೌಧರಿ ಇದ್ದಾರೆ. ಸರ್ಕಾರ ಬದಲಾಗಿದ್ದರಿಂದ ಈ ಹುದ್ದೆಗೂ ಚುನಾವಣೆ ನಡೆಯಲಿದ್ದು, ನಂತರವೇ ವಿಶ್ವಾಸಮತ ಯಾಚನೆ ನಡೆಯಲಿದೆ. ಅವಧ್ ಅವರು ಈವರೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಹೀಗಾಗಿ ಮೊದಲು ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಲಿದೆ. ಹೀಗಾಗಿ ಈ ಬಾರಿಯ ಬಜೆಟ್ ಅಧಿವೇಶನ ಕೋಲಾಹಲದಿಂದ ಕೂಡಿರಲಿದೆ ಎಂದು ಮೂಲಗಳು ಹೇಳಿವೆ.

ಈ ಮೊದಲು ಫೆ. 12ರಂದು ಬಜೆಟ್ ಮಂಡಿಸಲು ದಿನಾಂಕ ನಿಗದಿಯಾಗಿತ್ತು. ಆದರೆ ಈಗ ಫೆ. 13ರಂದು ಬಜೆಟ್‌ ಮಂಡನೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT