ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ: ನಿತೀಶ್‌ ಕುಮಾರ್ ನಡೆಗೆ ‘ಇಂಡಿಯಾ’ ಮೈತ್ರಿಕೂಟ ಖಂಡನೆ

Published 29 ಜನವರಿ 2024, 14:23 IST
Last Updated 29 ಜನವರಿ 2024, 14:23 IST
ಅಕ್ಷರ ಗಾತ್ರ

ನವದೆಹಲಿ/ಕಿಶನ್‌ಗಂಜ್‌/ಪುಣೆ: ‘ಇಂಡಿಯಾ’ ಮೈತ್ರಿಕೂಟದಿಂದ ನಿರ್ಗಮಿಸಿದ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ನಡೆಯನ್ನು ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳಾದ ಎಎಪಿ, ಶಿವಸೇನಾ (ಯುಬಿಟಿ) ತೀವ್ರವಾಗಿ ಖಂಡಿಸಿವೆ.

‘ನಿತೀಶ್‌ ನಡೆಯನ್ನು ತಪ್ಪು ಎಂದು ನಾನು ಭಾವಿಸುತ್ತೇನೆ. ಅವರು ‘ಇಂಡಿಯಾ’ ಮೈತ್ರಿಕೂಟ ಬಿಡಬಾರದಿತ್ತು. ಅವರ ನಡವಳಿಕೆ ಪ್ರಜಾಪ್ರಭುತ್ವಕ್ಕೆ ಮಾರಕ’ ಎಂದು ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

‘ಆಯಾ ಕುಮಾರ್‌, ಗಯಾ ಕುಮಾರ್‌’:

ಜೆಡಿಯು ವರಿಷ್ಠ ನಿತೀಶ್‌ ಕುಮಾರ್‌ ಅವರ ನಡೆಯು ‘ಇಂಡಿಯಾ’ ಮೈತ್ರಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದನ್ನು ‘ಆಯಾ ರಾಮ್‌, ಗಯಾ ರಾಮ್‌’ ಎನ್ನುವ ಬದಲಿಗೆ, ‘ಆಯಾ ಕುಮಾರ್‌, ಗಯಾ ಕುಮಾರ್‌’ ಎನ್ನಬಹುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್ ವ್ಯಂಗ್ಯವಾಡಿದರು.

ಬಿಹಾರದ ಕಿಶನ್‌ಗಂಜ್‌ನಲ್ಲಿ ಕಾಂಗ್ರೆಸ್‌ನ ‘ಭಾರತ್ ಜೋಡೊ ನ್ಯಾಯ್‌ ಯಾತ್ರೆ’ ವೇಳೆ ಸುದ್ದಿಗಾರರ ಜೊತೆ ಮಾತನಾಡಿ, ‘ಕುಮಾರ್‌ ಅವರ ಈ ದ್ರೋಹಕ್ಕೆ, ಪ್ರಧಾನಿಯೇ ಸೂತ್ರದಾರ’ ಎಂದು ದೂರಿದರು. 

ಮಣಿಪುರದ ತೌಬಲ್‌ನಲ್ಲಿ ಜನವರಿ 14ರಿಂದ ಕಾಂಗ್ರೆಸ್‌ ‘ಭಾರತ್‌ ಜೋಡೊ ನ್ಯಾಯ್‌ ಯಾತ್ರೆ’ ಪ್ರಾರಂಭವಾಗುವ ವೇಳೆಗೆ, ಕಾಂಗ್ರೆಸ್‌ನ ನಾಯಕ ಮಿಲಿಂದ್‌ ದೇವ್ರಾ ಅವರನ್ನು ಪಕ್ಷ ಬಿಡುವಂತೆ ಮಾಡಲಾಯಿತು. ಇದೀಗ ಯಾತ್ರೆಯು ಬಿಹಾರ ಪ್ರವೇಶಿಸುವ ಸಮಯ ಎದುರಾಗಿದ್ದರಿಂದ ಅವರು (ಬಿಜೆಪಿ) ಒತ್ತಡಕ್ಕೆ ಸಿಲುಕಿದ್ದಾರೆ. ಹೀಗಾಗಿಯೇ ಅವರು ‘ನೆಗೆದಾಡುವ ನಾಯಕ’ನಿಗೆ (ನಿತೀಶ್‌ ಕುಮಾರ್‌) ನೆಗೆಯುವಂತೆ ಹೇಳಿದ್ದಾರೆ. ಅವರೂ ಅದೇ ರೀತಿ ನೆಗೆದಿದ್ದಾರೆ’ ಎಂದು ಜೈರಾಮ್‌ ಪ್ರತಿಕ್ರಿಯಿಸಿದರು.

ಪರಿಣಾಮ ಬೀರದು: ನಿತೀಶ್‌ ಅವರು ಎನ್‌ಡಿಎ ತೆಕ್ಕೆಗೆ ಮರಳಿರುವುದರಿಂದ ‘ಇಂಡಿಯಾ’ ಮೈತ್ರಿಕೂಟದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್‌ ರಾವುತ್‌ ಸೋಮವಾರ ಹೇಳಿದ್ದಾರೆ.

ನಿತೀಶ್‌ ಅವರನ್ನು ‘ಇಂಡಿಯಾ’ ಮೈತ್ರಿ ಕೂಟದ ಸಂಚಾಲಕರನ್ನಾಗಿ ನೇಮಿಸಲು ಕಾಂಗ್ರೆಸ್ ಒಲವು ಹೊಂದಿತ್ತು. ಆದರೆ ಅವರು ಮೈತ್ರಿ ತೊರೆದ ರೀತಿ ದುರದೃಷ್ಟಕರ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ ರಾವುತ್‌, ನಿತೀಶ್‌ ಅವರನ್ನು ‘ಪಲ್ಟು ರಾಮ್‌’ ಎಂದು ಕರೆದರು.

‘ನಿತೀಶ್‌ ನಿರ್ಗಮನದಿಂದ ಇಂಡಿಯಾ ಮೈತ್ರಿಯಲ್ಲಿ ಬಿರುಕು ಮೂಡಬಹುದು ಎಂದು ಯಾರಾದರೂ ಭಾವಿಸಿದ್ದರೆ, ಅದರು ಸರಿಯಲ್ಲ. ಅಂತಹವರು ತೊರೆದರೆ ಸಂಘಟನೆ ಇನ್ನೂ ಗಟ್ಟಿಯಾಗುತ್ತದೆ. ಮೈತ್ರಿ ಇನ್ನಷ್ಟು ಬಲವಾಗುತ್ತದೆ’ ಎಂದರು.

ನಿತೀಶ್‌ ಬೆನ್ನಿಗೆ ಎನ್‌ಡಿಎ ಮಿತ್ರ ಪಕ್ಷ

ಲಖನೌ: ಎನ್‌ಡಿಎ ಸೇರಿದ ಜೆಡಿಯು ಅಧ್ಯಕ್ಷ ನಿತೀಶ್‌ ಅವರ ನಿರ್ಧಾರ ಸರಿಯಾಗಿದ್ದು, ಬಿಹಾರದ ಜನರ ಅಭಿವೃದ್ಧಿ ದೃಷ್ಟಿಯಿಂದ ಅವರು ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ಮಿತ್ರ ಪಕ್ಷವಾದ ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಎ) ಮುಖ್ಯಸ್ಥ ರಾಮದಾಸ್‌ ಅಠವಳೆ ತಿಳಿಸಿದ್ದಾರೆ.

ವಿರೋಧ ಪಕ್ಷಗಳು ನಿತೀಶ್‌ ಅವರನ್ನು ‘ಪಲ್ಟು ರಾಮ್‌’ (ನಿಷ್ಠೆ ಬದಲಿಸುವವನು), ಅವಕಾಶವಾದಿ ಎಂದೆಲ್ಲ ಕರೆಯುತ್ತಿವೆ, ಅದು ಸರಿಯಲ್ಲ. ವಾಸ್ತವವಾಗಿ ಕಾಂಗ್ರೆಸ್ ಪಕ್ಷವೇ ಅವಕಾಶವಾದಿ ಎಂದು ಅವರು ಜರಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸೇರುವ ನಿತೀಶ್‌ ಅವರನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ. ನಿತೀಶ್‌ ನಡೆಯು ಕಾಂಗ್ರೆಸ್‌ಗೆ ಸವಾಲಾಗಿ ಪರಿಣಮಿಸಿದೆ ಎಂದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಶವಾಗುತ್ತದೆ ಎಂಬುದು ಸ್ವತಃ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೂ ಗೊತ್ತಿದೆ ಎಂದು ಅವರು ಹೇಳಿದರು.

‘ಇಂಡಿಯಾ’ ಆಟ ಮುಗಿದಿದೆ: ಕೇಂದ್ರದಲ್ಲಿ ಮೂರನೇ ಬಾರಿಗೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ತಡೆಯಲು ‘ಇಂಡಿಯಾ’ ಮೈತ್ರಿಕೂಟದಿಂದ ಸಾಧ್ಯವಿಲ್ಲ. ಭಾರತ್‌ ಜೋಡೊ ನ್ಯಾಯ್‌ ಯಾತ್ರೆಯೂ ವಿಫಲವಾಗಿದ್ದು, ‘ಇಂಡಿಯಾ’ ಬಣದ ಆಟ ಮುಗಿದಿದೆ’ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT