ಮಹಾರಾಷ್ಟ್ರ: ರತ್ನಗಿರಿ–ಸಿಂಧುದುರ್ಗ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ನಾರಾಯಣ ರಾಣೆ ಅವರು ಗೆಲುವು ಸಾಧಿಸಿದ್ದು ಪ್ರಶ್ನಿಸಿ ಶಿವಸೇನಾ (ಯುಬಿಟಿ) ಅಭ್ಯರ್ಥಿ ವಿನಾಯಕ್ ರಾವುತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ರಾಣೆಗೆ ಸಮನ್ಸ್ ಜಾರಿ ಮಾಡಿದೆ.
ಲೋಕಸಭೆ ಚುನಾವಣೆಯಲ್ಲಿ ನಾರಾಯಣ ರಾಣೆ ಅವರು ಭ್ರಷ್ಟ ಮತ್ತು ಅಕ್ರಮ ಮಾರ್ಗಗಳನ್ನು ಅನುಸರಿಸಿ ಗೆಲುವು ಸಾಧಿಸಿದ್ದಾರೆ. ಹಾಗಾಗಿ ರಾಣೆ ಆಯ್ಕೆಯನ್ನು ಅಸಿಂಧು ಎಂದು ಘೋಷಿಸಬೇಕು ಮತ್ತು ಮರು ಮತದಾನ ನಡೆಸುವಂತೆ ಆದೇಶಿಸಬೇಕು ಎಂದು ಕೋರಿ ವಿನಾಯಕ್ ರಾವುತ್ ಕೋರ್ಟ್ ಮೆಟ್ಟಿಲೇರಿದ್ದರು.
ಕೇಂದ್ರ ಸಚಿವರಾಗಿದ್ದ ರಾಣೆ ಅವರು ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ ಅವರಿಗೆ ಆಪ್ತರಾಗಿರುವ ವಿನಾಯಕ್ ರಾವುತ್ ಅವರನ್ನು ಸೋಲಿಸಿದ್ದರು.