ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ಈ ನೆಲದ ಕಾನೂನು, ಅದರ ಅನುಷ್ಠಾನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್ ಶಾ

Published 27 ಡಿಸೆಂಬರ್ 2023, 2:41 IST
Last Updated 27 ಡಿಸೆಂಬರ್ 2023, 2:41 IST
ಅಕ್ಷರ ಗಾತ್ರ

ಕೋಲ್ಕತ್ತ: ಈ ನೆಲದ ಕಾನೂನು ಆಗಿರುವ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಅನುಷ್ಠಾನಗೊಳ್ಳುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದಾರೆ.

ನಗರದಲ್ಲಿ ನಡೆದ ರಾಜ್ಯ ಬಿಜೆಪಿಯ ಸಾಮಾಜಿಕ ಮಾಧ್ಯಮ ಮತ್ತು ಐಟಿ ವಿಭಾಗದ ಆಂತರಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾ, ಸಿಎಎ ಜಾರಿಗೊಳಿಸುವುದು ತಮ್ಮ ಪಕ್ಷದ ಬದ್ಧತೆಯ ವಿಚಾರ ಎಂದಿದ್ದಾರೆ.

ಇದೇ ವೇಳೆ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವು ರಾಜ್ಯದ 35ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು 42 ಲೋಕಸಭೆ ಕ್ಷೇತ್ರಗಳಿದ್ದು, ಬಿಜೆಪಿ 2019ರಲ್ಲಿ 18 ಸ್ಥಾನಗಳಲ್ಲಿ ಗೆದ್ದಿತ್ತು.

'ಮುಂದಿನ ವಿಧಾನಸಭಾ ಚುನಾವಣೆಯ ನಂತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚಿಸಲು ನಾವೆಲ್ಲ ಕೆಲಸ ಮಾಡಬೇಕಿದೆ. ಬಿಜೆಪಿ ಸರ್ಕಾರ ರಚನೆಯಾದರೆ, ಒಳನುಸುಳುವಿಕೆ, ಗೋವುಗಳ ಕಳ್ಳಸಾಗಣೆಗೆ ಕಡಿವಾಣ ಬೀಳಲಿದೆ. ಧಾರ್ಮಿಕವಾಗಿ ದೌರ್ಜನ್ಯಕ್ಕೊಳಗಾದವರಿಗೆ ಸಿಎಎ ಮೂಲಕ ಪೌರತ್ವ ಸಿಗಲಿದೆ' ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಎಎ ವಿಷಯದ ಬಗ್ಗೆ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದೂ ಶಾ ಆರೋಪಿಸಿದ್ದಾರೆ.

'ಸಿಎಎ ಜಾರಿಯಾಗುತ್ತದೆಯೇ, ಇಲ್ಲವೇ ಎಂಬ ವಿಚಾರವಾಗಿ ಅವರು (ಮಮತಾ ಬ್ಯಾನರ್ಜಿ) ಇಲ್ಲಿನ ಜನರನ್ನು, ನಿರಾಶ್ರಿತರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಸಿಎಎ ಈ ನೆಲದ ಕಾನೂನು. ಅದು ಜಾರಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಇದು ನಮ್ಮ ಪಕ್ಷದ ಬದ್ಧತೆಯ ವಿಚಾರವಾಗಿದೆ' ಎಂದು ಪ್ರತಿಪಾದಿಸಿದ್ದಾರೆ.

2019ರಲ್ಲಿ ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ಸಿಎಎ ಅನ್ನು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ವಿರೋಧಿಸುತ್ತಾ ಬಂದಿದೆ.

ಈ ಕಾನೂನಿನ ಜಾರಿ ವಿಚಾರವು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೇರಲು ನೆರವಾಗಲಿದೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಲ್ಲಿ ಧಾರ್ಮಿಕವಾಗಿ ಕಿರುಕುಳ ಅನುಭವಿಸಿದ ಹಿಂದೂ, ಸಿಖ್‌, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್‌ನಂತಹ ಅಲ್ಪಸಂಖ್ಯಾತ ಸಮುದಾಯದವರು 2014ರ ಡಿಸೆಂಬರ್ 31 ರಂದು ಅಥವಾ ಅದಕ್ಕೂ ಮೊದಲು ಭಾರತ ಪ್ರವೇಶಿಸಿದ್ದರೆ, ಅವರಿಗೆ ದೇಶದ ಪೌರತ್ವ ನೀಡಲು ಸಿಎಎ ಅನುವು ಮಾಡಿಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT