ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನೀರಿಗೆ ಆಗ್ರಹ: ತಮಿಳುನಾಡಿನ 8 ಜಿಲ್ಲೆಗಳಲ್ಲಿ ಬಂದ್, ವಹಿವಾಟು ಸ್ಥಗಿತ

Published 11 ಅಕ್ಟೋಬರ್ 2023, 7:38 IST
Last Updated 11 ಅಕ್ಟೋಬರ್ 2023, 7:38 IST
ಅಕ್ಷರ ಗಾತ್ರ

ಚೆನ್ನೈ: ಕರ್ನಾಟಕ ಸರ್ಕಾರವು ಕಾವೇರಿ ನೀರನ್ನು ಸಮರ್ಪಕವಾಗಿ ಬಿಡುವಂತೆ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಲು ಆಗ್ರಹಿಸಿ ತಮಿಳುನಾಡಿನ 8 ಜಿಲ್ಲೆಗಳಲ್ಲಿ ಇಂದು ಬಂದ್‌ಗೆ ಕರೆ ನೀಡಲಾಗಿದೆ.

ತಮಿಳುನಾಡಿನ ತಿರುಚಿರಪಳ್ಳಿ, ತಾಂಜಾವೂರು, ನಾಗಪಟ್ಟಣಂ ಮತ್ತು ತಿರುವಾರೂರು ಸೇರಿದಂತೆ 8 ಜಿಲ್ಲೆಗಳಲ್ಲಿ ಬಂದ್‌ ಹಮ್ಮಿಕೊಂಡಿದ್ದು, ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಕಾವೇರಿ ಕೊಳ್ಳದ ರಕ್ಷಣಾ ಆಂದೋಲನ ಮತ್ತು ರೈತ ಸಂಘಗಳು ಜಂಟಿಯಾಗಿ ಬಂದ್‌ಗೆ ಕರೆ ನೀಡಿದ್ದು, ಕಾವೇರಿ ಕೊಳ್ಳದ 8 ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಗಪಟ್ಟಣಂ ಜಿಲ್ಲೆಯೊಂದರಲ್ಲೇ ಸುಮಾರು 12,000 ಅಂಗಡಿಗಳನ್ನು ಮುಚ್ಚಲಾಗಿದೆ ಎಂದು ವರದಿಯಾಗಿದೆ.

ಸುಪ್ರೀಂಕೋರ್ಟ್‌ ನಿರ್ದೇಶನದಂತೆ ತಮಿಳುನಾಡಿಗೆ ಅಗತ್ಯವಿರುವ ಕಾವೇರಿ ನೀರು ಹರಿಸಲು ಕರ್ನಾಟಕಕ್ಕೆ ಸೂಚಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಸೋಮವಾರ ಅಂಗೀಕರಿಸಿತ್ತು.

ನಿರ್ಣಯ ಮಂಡಿಸಿದ್ದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ‘ಕರ್ನಾಟಕ ‘ಕೃತಕ ಬಿಕ್ಕಟ್ಟು’ ಸೃಷ್ಟಿಸಿದೆ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ನೀರು ಬಿಡುಗಡೆ ಮಾಡುತ್ತಿಲ್ಲ’ ಎಂದು ಆರೋಪಿಸಿದ್ದರು.

ಸೆಪ್ಟೆಂಬರ್ 28ರಿಂದ ಅಕ್ಟೋಬರ್ 15ರವರೆಗೆ ಬಿಳಿಗುಂಡ್ಲು ಮಾಪನ ಕೇಂದ್ರಕ್ಕೆ ಪ್ರತಿನಿತ್ಯ 3,000 ಕ್ಯೂಸೆಕ್ ನೀರು ಬೀಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಆದೇಶಿಸಿತ್ತು. ಆದರೆ, ಕರ್ನಾಟಕದಲ್ಲಿ ಭೀಕರ ಬರಗಾಲ ಇರುವುದಾಗಿ ಉಲ್ಲೇಖಿಸಿ ತಮಿಳುನಾಡಿಗೆ ನೀರು ಹರಿಸಲು ಕರ್ನಾಟಕ ಸರ್ಕಾರ ನಿರಾಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT