ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಹಜಹಾನ್‌ ಶೇಖ್‌ ಸೇರಿ 7 ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ ಸಿಬಿಐ

Published 28 ಮೇ 2024, 9:28 IST
Last Updated 28 ಮೇ 2024, 9:28 IST
ಅಕ್ಷರ ಗಾತ್ರ

ಕೋಲ್ಕತ್ತ: ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿಯ ಉಚ್ಚಾಟಿತ ನಾಯಕ ಶಹಜಹಾನ್‌ ಶೇಖ್‌ ಸೇರಿದಂತೆ ಇತರೆ 6 ಮಂದಿ ವಿರುದ್ಧ ಸಿಬಿಐ ಇಂದು (ಮಂಗಳವಾರ) ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೀನುಗಾರಿಕೆ ವ್ಯವಹಾರದ ನೆಪದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಇ.ಡಿ ಪ್ರಕರಣದಲ್ಲಿ ಅಮಾನತುಗೊಂಡಿರುವ ಶಹಜಹಾನ್‌ ಶೇಖ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಆದೇಶ ಹೊರಡಿಸಿತ್ತು.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 5ರಂದು ಪಶ್ಚಿಮ ಬಂಗಾಳದ ಉತ್ತರ 24 ಪರಗಣದ ಸಂದೇಶ್‌ಖಾಲಿಯಲ್ಲಿರುವ ಅವರ ನಿವೇಶನವನ್ನು ಶೋಧಿಸಲು ಇ.ಡಿ ಅಧಿಕಾರಿಗಳ ಹೋದಾಗ ಅವರ ಮೇಲೆ ಗುಂಪು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 30ರಂದು ಇ.ಡಿ ಶೇಖ್ ಅವರನ್ನು ಬಂಧಿಸಿತ್ತು.

ಸಿಬಿಐ ವಿಚಾರಣೆ ನಡೆಸುವ ವೇಳೆ ಶಹಜಹಾನ್ ಶೇಖ್ ಸಹೋದರ ಶೇಖ್ ಅಲಂಗೀರ್, ಸಂದೇಶ್‌ಖಾಲಿಯ ಟಿಎಂಸಿ ವಿದ್ಯಾರ್ಥಿ ವಿಭಾಗದ ಅಧ್ಯಕ್ಷ ಮಫುಜರ್ ಮೊಲ್ಲಾ ಹಾಗೂ ಸ್ಥಳೀಯನಾದ ಸಿರಾಜುಲ್ ಮೊಲ್ಲಾ ಅವರನ್ನು ಬಂಧಿಸಿತ್ತು. ಇದರೊಂದಿಗೆ ಈ ಪ್ರಕರಣದಲ್ಲಿ ಸಿಬಿಐ ಬಂಧಿತರ ಸಂಖ್ಯೆ 14ಕ್ಕೆ ಏರಿದೆ.

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಗ್ರಾಮಸ್ಥರ ಭೂಮಿ ಕಸಿದಿರುವ ಆರೋಪವೂ ಶಹಜಹಾನ್‌ ಮೇಲಿದೆ.

ಸಂದೇ‌‌ಶ್‌ಖಾಲಿಯ ಹಲವು ಸ್ಥಳಗಳಲ್ಲಿ ಏ.24ರಂದು ‌ನಡೆ‌ದ ಶೋಧ ಕಾರ್ಯಾಚರಣೆಯಲ್ಲಿ ವಿದೇಶಿ ನಿರ್ಮಿತ ಪಿಸ್ತೂಲ್‌ ಸೇರಿದಂತೆ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಸಿಬಿಐ ವಶಪಡಿಸಿಕೊಂಡಿತ್ತು.

ಸಿಬಿಐ, ಬಾಂಬ್‌ ಪತ್ತೆ ದಳ, ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ), ಕೇಂದ್ರ ಅರೆಸೈನಿಕ ಪಡೆ ಹಾಗೂ ಪಶ್ಚಿಮ ಬಂಗಾಳದ ಪೊಲೀಸರು ಉತ್ತರ 24 ಪರಗಣ ಜಿಲ್ಲೆಯ ಸುಂದರ್ಬನ್‌ ನದಿಯ ಅಂಚಿನಲ್ಲಿರುವ ಗ್ರಾಮದಲ್ಲಿ ಶೋಧ ನಡೆಸಿದ್ದರು.

‘ವಿದೇಶಿ ನಿರ್ಮಿತ ಪಿಸ್ತೂಲ್ ಸೇರಿದಂತೆ 12 ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಫೋಟಕಗಳನ್ನು ಪತ್ತೆ ಹಚ್ಚಿದ್ದೇವೆ. ಕಾರ್ಯಾಚರಣೆ ಮುಂದುವರಿದಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಸಂಗ್ರಹಿಸಿದ್ದೇವೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT