ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ: ಒಳ ವರ್ಗೀಕರಣಕ್ಕೆ ಕೇಂದ್ರದ ಬೆಂಬಲ

Published 8 ಫೆಬ್ರುವರಿ 2024, 0:30 IST
Last Updated 8 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ನವದೆಹಲಿ: ಒಳಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಒಳ ವರ್ಗೀಕರಣ ತರುವುದಕ್ಕೆ ತನ್ನ ಬೆಂಬಲ ಇದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಬುಧವಾರ ತಿಳಿಸಿದೆ.

ಮೀಸಲಾತಿ ನೀತಿಯಲ್ಲಿ ತನಗೆ ಬದ್ಧತೆ ಇದೆ, ನೂರಾರು ವರ್ಷಗಳ ಕಾಲ ತಾರತಮ್ಯ ಅನುಭವಿಸಿದವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಕ್ರಮ ಇದು ಎಂದು ಹೇಳಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ಏಳು ನ್ಯಾಯಮೂರ್ತಿಗಳ ಸಂವಿಧಾನ ಪೀಠವು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಒಳ ವರ್ಗೀಕರಣ ತರುವ ಅಧಿಕಾರವು ರಾಜ್ಯಗಳಿಗೆ ಇಲ್ಲ ಎಂದು 2004ರ ತೀರ್ಪಿನ ಸಿಂಧುತ್ವವನ್ನು ಪರಿಶೀಲಿಸುತ್ತಿದೆ.

ಒಳ ವರ್ಗೀಕರಣವು ಮೀಸಲಾತಿಯ ಉದ್ದೇಶವನ್ನು ಮುಂದಕ್ಕೆ ಒಯ್ಯಲು ನೆರವಾಗುತ್ತದೆ ಎಂದು ಕೇಂದ್ರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ. ಇ.ವಿ. ಚಿನ್ನಯ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ.

‘ಶತಮಾನಗಳ ಕಾಲ ತಾರತಮ್ಯ ಕಂಡಿರುವ ಹಿಂದುಳಿದ ವರ್ಗಗಳಿಗೆ ಬೆಂಬಲವಾಗಿ ನಿಲ್ಲುವುದು, ಅವಕಾಶಗಳಲ್ಲಿ ಸಮಾನತೆಯನ್ನು ತರುವುದು ಮೀಸಲಾತಿಯ ಹಿಂದಿನ ಉದ್ದೇಶ’ ಎಂದು ಮೆಹ್ತಾ ವಿವರಿಸಿದ್ದಾರೆ. ಪರಿಶಿಷ್ಟ ಜಾತಿಗಳಲ್ಲಿ ಉಪ ವರ್ಗೀಕರಣವು ಸಂವಿಧಾನದ 14ನೆಯ ವಿಧಿಗೆ ವಿರುದ್ಧವಾಗಿದೆ ಎಂದು ಚಿನ್ನಯ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.

2004ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌, ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಇರುವ ಜಾತಿಗಳನ್ನು ಅಲ್ಲಿಂದ ತೆಗೆಯುವ ಅಧಿಕಾರ ಇರುವುದು ಸಂಸತ್ತಿಗೆ ಮಾತ್ರವೇ ವಿನಾ ವಿಧಾನ ಮಂಡಲಗಳಿಗೆ ಅಲ್ಲ ಎಂದು ಹೇಳಿತ್ತು.

ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳಲ್ಲಿ ಒಳ ವರ್ಗೀಕರಣಕ್ಕೆ ಅವಕಾಶ ಕಲ್ಪಿಸಬಹುದೇ, ಇಂತಹ ಒಳ ವರ್ಗೀಕರಣಕ್ಕೆ ರಾಜ್ಯಗಳಿಗೆ ಅವಕಾಶ ಕಲ್ಪಿಸುವ ಕಾನೂನನ್ನು ವಿಧಾನಸಭೆಗಳು ರೂಪಿಸಬಹುದೇ ಎಂಬ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್‌ ಪರಿಶೀಲನೆಗೆ ಒಳಪಡಿಸಿದೆ.

‘ಅವಕಾಶಗಳಲ್ಲಿನ ಸಮಾನತೆಯ ಪರಿಕಲ್ಪನೆಯು ಎರಡು ಹಂತಗಳಲ್ಲಿ ಕಾರ್ಯರೂಪಕ್ಕೆ ಬರುತ್ತದೆ. ಮೊದಲನೆಯ ಹಂತವು ಸಾಮಾನ್ಯ ವರ್ಗ ಹಾಗೂ ಹಿಂದುಳಿದ ವರ್ಗಗಳ ನಡುವೆ; ಎರಡನೆಯ ಹಂತವು, ಹಿಂದುಳಿದ ವರ್ಗಗಳ ನಡುವೆ ಕಾರ್ಯರೂಪಕ್ಕೆ ಬರುತ್ತದೆ. ಚಿನ್ನಯ್ಯ ಪ್ರಕರಣದಲ್ಲಿ ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳನ್ನು ಒಂದೇ ಕಡೆ ಸೇರಿಸಿರುವುದು ಅವಕಾಶಗಳ ಸಮಾನತೆಯ ಖಾತರಿಗೆ ಅಡ್ಡಿ’ ಎಂದು ಮೆಹ್ತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT