ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಭಾರತ್‌ ಜೋಡೊ ನ್ಯಾಯ ಯಾತ್ರೆ ಆರಂಭ: ಸಾಗುವ ಹಾದಿಯ ವಿವರ ಇಲ್ಲಿದೆ

Published 13 ಜನವರಿ 2024, 15:24 IST
Last Updated 13 ಜನವರಿ 2024, 20:14 IST
ಅಕ್ಷರ ಗಾತ್ರ

ನವದೆಹಲಿ: ಒಂದೆಡೆ ರಾಮಮಂದಿರ ಉದ್ಘಾಟನೆಯ ಅಬ್ಬರ, ಮತ್ತೊಂದೆಡೆ ಲೋಕಸಭಾ ಚುನಾವಣೆ ತಯಾರಿಯ ಭರಾಟೆ ಮಧ್ಯೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಭಾನುವಾರ ಮಣಿಪುರದಿಂದ ಮುಂಬೈವರೆಗೆ 6,713 ಕಿ.ಮೀ ದೂರದ ‘ಭಾರತ್‌ ಜೋಡೊ ನ್ಯಾಯ ಯಾತ್ರೆ’ (ಬಿಜೆಎನ್‌ವೈ) ಆರಂಭಿಸಲಿದ್ದಾರೆ.

ಕನ್ಯಾಕುಮಾರಿಯಿಂದ ಶ್ರೀನಗರದವರೆಗಿನ 4,000 ಕಿ.ಮೀ ಪಾದಯಾತ್ರೆಯನ್ನು ಪೂರ್ಣಗೊಳಿಸಿದ ಬಹುತೇಕ ಒಂದು ವರ್ಷದ ಬಳಿಕ ಈ ಯಾತ್ರೆ ಕೈಗೊಂಡಿದ್ದು, ಒಟ್ಟಾರೆ  6,713 ಕಿ.ಮೀ ದೂರ ಕ್ರಮಿಸಲಿದ್ದಾರೆ. ಮಣಿಪುರದ ಥೌಬಲ್‌ ಜಿಲ್ಲೆಯಲ್ಲಿ ಬ್ರಿಟಿಷರ ವಿರುದ್ಧ ಮಣಿಪುರಿಗಳು ಹೋರಾಡಿದ ಸ್ಥಳ, ಕೋಂಗ್‌ಜೋಮ್‌ ಯುದ್ಧ ಸ್ಮಾರಕದ ಬಳಿಯಿಂದ ಯಾತ್ರೆ ಶುರುವಾಗಲಿದೆ.

ರಾಹುಲ್‌ ಅವರ ‘ಯಾತ್ರೆ 2.0’, ಪಾದಯಾತ್ರೆಯ ಜತೆ ಜತೆಗೆ ಬಸ್‌ ಯಾನವನ್ನೂ ಒಳಗೊಂಡಿದ್ದು, ಇದು ಚುನಾವಣಾ ಯಾತ್ರೆಯಲ್ಲ ಎಂದು ಕಾಂಗ್ರೆಸ್‌ ಹೇಳಿದೆ. ಆದರೆ, ಈ ಯಾತ್ರೆಯು ಲೋಕಸಭೆ ಚುನಾವಣೆಯ ಸಿದ್ಧತೆಯಲ್ಲಿ ಪಕ್ಷಕ್ಕೆ ನೆರವಾಗಲಿದೆ ಎಂಬ ನಿರೀಕ್ಷೆಯನ್ನು ಪಕ್ಷದ ನಾಯಕರು ಹೊಂದಿದ್ದಾರೆ. ಯಾತ್ರೆಯ ಕಾಲಕ್ಕೆ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ರಂಗದಲ್ಲಿ ಪಕ್ಷದ ಗ್ಯಾರಂಟಿಗಳ ಬಗ್ಗೆ ರಾಹುಲ್ ವಿವರಿಸುವ ಸಾಧ್ಯತೆಯೂ ಇದೆ.

‘ಪ್ರಧಾನಿ ಅವರು ಸುಳ್ಳಿನ ಕನಸುಗಳನ್ನು ಮಾರಾಟ ಮಾಡುತ್ತಿದ್ದಾರೆ ಮತ್ತು ‘ಅಮೃತ ಕಾಲ’ದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಹತ್ತು ವರ್ಷಗಳಲ್ಲಿ ದೇಶದಲ್ಲಿ ‘ಅನ್ಯಾಯದ ಕಾಲ’ ನಡೆಯುತ್ತಿದೆ. ರಾಹುಲ್‌ ಅವರ ಸಂದೇಶವು ಜನರಿಗೆ ತಲುಪುತ್ತದೆ ಎಂಬ ವಿಶ್ವಾಸ ನಮ್ಮದು’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ರಾಹುಲ್‌ ಅವರ ಲೋಕಸಭಾ ಕ್ಷೇತ್ರ ಅಮೇಠಿ, ಸೋನಿಯಾ ಅವರ ರಾಯ್‌ ಬರೇಲಿ, ಪ್ರಧಾನಿ ಮೋದಿ ಅವರ ವಾರಾಣಸಿ ಮತ್ತು ಸಿಂಧಿಯಾ ಅವರ ಭದ್ರ ಕೋಟೆ ಗುನಾ ಮೂಲಕ ಯಾತ್ರೆಯು ಹಾದು ಅಂತಿಮವಾಗಿ ಮಾರ್ಚ್‌ 20ರಂದು ಮುಂಬೈನಲ್ಲಿ ಮುಕ್ತಾಯವಾಗಲಿದೆ. 

ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರವನ್ನು ಆರಂಭದ ಸ್ಥಳವಾಗಿ ಆಯ್ಕೆ ಮಾಡುವ ಮೂಲಕ, ಯಾತ್ರೆಯು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯದ ವಿಷಯಗಳನ್ನು ಪ್ರಸ್ತಾಪಿಸಲಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಲಾಗಿದೆ. 

ಈಚಿನ ಚುನಾವಣೆಯಲ್ಲಿ ಪಕ್ಷವು ಪರಾಭವಗೊಂಡ  ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಢ ಈ ಮೂರು ರಾಜ್ಯಗಳಲ್ಲಿ ಯಾತ್ರೆ ಸಂಚರಿಸಲಿದೆ. ಭಾರತ್‌ ಜೋಡೊ ಯಾತ್ರೆ ಹಾದು ಹೋಗಿದ್ದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಎರಡನೇ ಬಾರಿಗೆ ಸಂಚರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT