ನವದೆಹಲಿ: ‘ಸದೃಢ ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಸಾಂವಿಧಾನಿಕ ಕರ್ತವ್ಯಗಳ ಪಾಲನೆಯೇ ದೇಶದ ಪ್ರಜೆಗಳ ಪರಮೋಚ್ಚ ಆದ್ಯತೆಯಾಗಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸಂವಿಧಾನ ದಿನದ ಅಂಗವಾಗಿ ದೇಶದ ನಾಗರಿಕರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ನನ್ನ ದೇಶ ನನಗೆ ಬಹಳಷ್ಟು ನೀಡಿದೆ ಎಂಬ ಧನ್ಯತಾಭಾವದಿಂದ ನಾವು ಕರ್ತವ್ಯಗಳನ್ನು ನಿರ್ವಹಿಸಬೇಕು. ಕರ್ತವ್ಯ ಪಾಲನೆಯಿಂದ ಹಕ್ಕುಗಳಿಗೆ ಮಹತ್ವ ಬರುತ್ತದೆ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸಿದಾಗ ದೇಶದ ಸಾಮಾಜಿಕ, ಆರ್ಥಿಕ ಅಡಿಪಾಯವೂ ಬಲಗೊಳ್ಳುತ್ತದೆ. ಆ ಮೂಲಕ ರಾಷ್ಟ್ರನಿರ್ಮಾಣಕ್ಕೆ ನಮ್ಮ ಕೊಡುಗೆಯನ್ನು ನೀಡಬೇಕು’ ಎಂದರು.

‘ಪ್ರತಿ ವರ್ಷ ನವೆಂಬರ್ 26ರಂದು, 18 ವರ್ಷ ಪೂರೈಸಿರುವ, ಮೊದಲ ಬಾರಿ ಮತದಾನ ಮಾಡಿದ ಯುವ ಮತದಾರರನ್ನು ಕಾಲೇಜುಗಳಲ್ಲಿ ಸನ್ಮಾನಿಸುವ ಮೂಲಕ ಸಂವಿಧಾನದ ದಿನವನ್ನು ಸಂಭ್ರಮದಿಂದ ಆಚರಿಸಬೇಕು’ ಎಂದು ಹೇಳಿದರು.

ಸಂವಿಧಾನ ರಚನೆಯಲ್ಲಿ ರಾಜೇಂದ್ರ ಪ್ರಸಾದ್ ಮತ್ತು ಬಿ.ಆರ್. ಅಂಬೇಡ್ಕರ್ ಮತ್ತಿತರರ ಕೊಡುಗೆ ಮಹತ್ವದ್ದು. ಅದರಂತೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಲ್ಲಭಭಾಯಿ ಪಟೇಲ್, ಬಿರ್ಸಾ ಮುಂಡಾ, ಮಹಾತ್ಮಾ ಗಾಂಧಿ ಅವರ ನಾಯಕತ್ವವೂ ಅನನ್ಯವಾದುದು ಎಂದು ಸ್ಮರಿಸಿದರು.

‘ಈ ಮಹಾನ್ ವ್ಯಕ್ತಿಗಳು ಸಾಗಿಬಂದ ಹಾದಿ ಮತ್ತು ಅವರು ನಿರ್ಮಿಸಿರುವ ಮೈಲಿಗಲ್ಲುಗಳು ನಮಗೆ ನಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ನೆನಪಿಸುತ್ತವೆ. ಸಂವಿಧಾನದ 51ಎ ವಿಧಿಯಲ್ಲಿ ಪ್ರಾಥಮಿಕ ಕರ್ತವ್ಯಗಳ ಕುರಿತು ವಿವರಿಸಲಾಗಿದೆ. ‘ವಿಕಸಿತ ಭಾರತ’ದತ್ತ ನಾವು ಹೆಜ್ಜೆ ಹಾಕುವಾಗ, ಕರ್ತವ್ಯ ಪಾಲನೆಯೇ ನಮ್ಮ ಆದ್ಯತೆಯಾಗಬೇಕು. ಇದು ದೇಶದ ಮುಂದಿನ ಹಲವು ತಲೆಮಾರುಗಳ ಬದುಕನ್ನು ರೂಪಿಸುತ್ತದೆ’ ಎಂದರು.

‘ನಮ್ಮ ಪ್ರತಿಯೊಂದು ಕಾರ್ಯದಲ್ಲೂ ರಾಷ್ಟ್ರೀಯ ಹಿತಾಸಕ್ತಿ ಇದ್ದಾಗ ಅದು ನಮ್ಮ ಸಂವಿಧಾನವನ್ನು ಬಲಪಡಿಸುತ್ತದೆ. ಆ ಮೂಲಕ ಸಂವಿಧಾನದ ನಿರ್ಮಾತೃಗಳು ಕಂಡ ಕನಸು ನನಸಾಗುತ್ತದೆ’ ಎಂದು ಪ್ರಧಾನಿ ಹೇಳಿದರು.

ವಿವಿಧ ದೇಶಗಳ ನ್ಯಾಯಾಧೀಶರು ಭಾಗಿ: ಸುಪ್ರೀಂ ಕೋರ್ಟ್ನಲ್ಲಿ ಬುಧವಾರ ನಡೆದ ಸಂವಿಧಾನ ದಿನ ಆಚರಣೆಯಲ್ಲಿ, ಭೂತಾನ್ನ ಮುಖ್ಯ ನ್ಯಾಯಮೂರ್ತಿ ಲ್ಯೋಂಪೊ ನೋರ್ಬೂ ತ್ಸೇರಿಂಗ್, ಕೀನ್ಯಾದ ಮುಖ್ಯ ನ್ಯಾಯಮೂರ್ತಿ ಮಾರ್ಥಾ ಕೆ. ಕೊಮಿ, ಮಾರಿಷಸ್ನ ಮುಖ್ಯ ನ್ಯಾಯಮೂರ್ತಿ ರೆಹನಾ ಬೀಬಿ ಮುಂಗ್ಲಿ ಗುಲ್ಬುಲ್ ಮತ್ತು ಶ್ರೀಲಂಕಾದ ಮುಖ್ಯ ನ್ಯಾಯಮೂರ್ತಿ ಪ್ರೀತಿ ಪದ್ಮನ್ ಸುರಸೇನ ಭಾಗವಹಿಸಿದ್ದರು.

ವಸಾಹತುಶಾಹಿ ಮನಸ್ಥಿತಿಯನ್ನು ತ್ಯೆಜಿಸಿ ರಾಷ್ಟ್ರೀಯ ಚಿಂತನೆಯನ್ನು ಮೈಗೂಡಿಸಿಕೊಳ್ಳಲು ಸಂವಿಧಾನ ಮಾರ್ಗದರ್ಶಿಯಾಗಿದೆ..
– ದ್ರೌಪದಿ ಮುರ್ಮು, ರಾಷ್ಟ್ರಪತಿ

ಪ್ರಧಾನಿ ತಮ್ಮ ಕರ್ತವ್ಯಗಳನ್ನು ಪಾಲಿಸುತ್ತಿದ್ದಾರಾ?

ಪ್ರಧಾನಿ ಮೋದಿ ಅವರು ದೇಶದ ಜನರಿಗಾಗಿ ತಮ್ಮ ಕರ್ತವ್ಯಗಳನ್ನು ಪಾಲಿಸುತ್ತಿದ್ದಾರೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಸಂವಿಧಾನವನ್ನು ಪಾಲಿಸುವುದು ಅದರ ಅನ್ವಯ ನಡೆದುಕೊಳ್ಳುವುದು ದೇಶ ಭಾಷೆ ಜಾತಿ ಪ್ರಾದೇಶಿಕ ಭಿನ್ನತೆಗಳನ್ನು ಮೀರಿ ದೇಶದ ಜನರಲ್ಲಿ ಮಾನವೀಯತೆ ವೈಜ್ಞಾನಿಕ ಮನೋಭಾವ ಸಾಮರಸ್ಯ ಸಹೋದರತೆ ಮೂಡಿಸುವುದು ಪ್ರಧಾನಿಯಾಗಿ ಮೋದಿ ಅವರು ಪಾಲಿಸಬೇಕಿರುವ ನಾಲ್ಕು ಪ್ರಾಥಮಿಕ ಸಾಂವಿಧಾನಿಕ ಕರ್ತವ್ಯ. ಆದರೆ ಇದನ್ನು ಅವರು ಪಾಲಿಸುತ್ತಿರುವುದು ಸಂಶಯಾಸ್ಪದ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ‘ಎಕ್ಸ್’ನಲ್ಲಿ ಹೇಳಿದ್ದಾರೆ.

ಆರ್ಎಸ್ಎಸ್ –ಬಿಜೆಪಿ ವಿರುದ್ಧ ವಾಗ್ದಾಳಿ

‘ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಅತ್ಯಂತ ವ್ಯವಸ್ಥಿತವಾಗಿ ಸಂವಿಧಾನದ ತತ್ವಗಳನ್ನು ಬುಡಮೇಲು ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಸಂವಿಧಾನದ ಮೇಲೆ ದಾಳಿ ನಡೆಸಿ ಅದನ್ನು ದುರ್ಬಲಗೊಳಿಸಲು ಆರ್ಎಸ್ಎಸ್ ಯತ್ನಿಸುತ್ತಿದ್ದು ಪ್ರಧಾನಿ ಮತ್ತು ಗೃಹ ಸಚಿವರು ಇದರ ಚುಕ್ಕಾಣಿ ಹಿಡಿದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ನ.26ರಂದು ಸಂವಿಧಾನ ದಿನ ಆಚರಿಸುವ ಬದಲು ‘ಸಂವಿಧಾನ ರಕ್ಷಣಾ ದಿನ’ ಆಚರಿಸಲಾಗುವುದು ಎಂದು ವಿರೋಧ ಪಕ್ಷಗಳು ಹೇಳಿವೆ.

‘ಸಂವಿಧಾನ ರಚನೆಯಲ್ಲಿ ಆರ್ಎಸ್ಎಸ್ಗೆ ಯಾವುದೇ ಪಾತ್ರ ಇಲ್ಲ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಹೇಳಿದ್ದಾರೆ.

ಸಂವಿಧಾನದ ಮೂಲ ತತ್ವಗಳಾದ ನ್ಯಾಯ ಸಮಾನತೆ ಸ್ವಾತಂತ್ರ್ಯ ಜಾತ್ಯತೀತೆ ಸಮಾಜವಾದ ಸಹೋದರತ್ವ ರಕ್ಷಿಸಿ ಪ್ರಜಾಪ್ರಭುತ್ವದ ಸ್ವಾತಂತ್ರ್ಯ ಎತ್ತಿ ಹಿಡಿಯಬೇಕು.
– ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಸಂವಿಧಾನದ ಪಾವಿತ್ರ್ಯ ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ಮಹತ್ವದ್ದು. ಕೋರ್ಟ್ಗಳು ಸಂವಿಧಾನದ ಕಾವಲುಗಾರ ಇದ್ದಂತೆ.
– ಸೂರ್ಯ ಕಾಂತ್, ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ

ಸಂವಿಧಾನವನ್ನು ಅಕ್ಷರಶಃ ಪಾಲಿಸಿದರೆ ಭಾರತವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಲಿದೆ.
– ಓಂ ಬಿರ್ಲಾ, ಲೋಕಸಭೆ ಸ್ಪೀಕರ್

ಸಂವಿಧಾನದ ಆತ್ಮವು ಭಾರತವು ಒಂದೇ ಎಂದು ಸಾಬೀತುಪಡಿಸಿದೆ. ಇದು ಶಾಶ್ವತವಾಗಿ ಮುಂದುವರಿಯಲಿದೆ. ವಿಕಸಿತ ಭಾರತಕ್ಕಾಗಿ ಕೈಜೋಡಿಸಿ.
– ಪಿ. ರಾಧಾಕೃಷ್ಣನ್, ಉಪರಾಷ್ಟ್ರಪತಿ

‘ಸಂವಿಧಾನವು ಬಡವರ ಗುರಾಣಿ’

‘ಸಂವಿಧಾನವು ಬಡವರ ಗುರಾಣಿ’ ಎಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಸಂವಿಧಾನದ ಮೇಲೆ ಯಾವುದೇ ದಾಳಿಗೆ ಅವಕಾಶ ಕೊಡುವುದಿಲ್ಲ’ ಎಂದು ಶಪಥ ಮಾಡುವಂತೆ ದೇಶದ ಜನರನ್ನು ಒತ್ತಾಯಿಸಿದ್ದಾರೆ. ‘ಸಂವಿಧಾನದ ಮೇಲೆ ನಡೆಯುವ ಯಾವುದೇ ದಾಳಿಯ ವಿರುದ್ಧ ಎದ್ದು ನಿಲ್ಲುವ ಮೊದಲ ವ್ಯಕ್ತಿ ನಾನು’ ಎಂದೂ ಅವರು ಹೇಳಿದ್ದಾರೆ.

‘ಭಾರತದ ಸಂವಿಧಾನವು ಕೇವಲ ಒಂದು ಪುಸ್ತಕವಲ್ಲ. ಇದು ದೇಶದ ಪ್ರತಿಯೊಬ್ಬ ಪ್ರಜೆಗೂ ಲಭಿಸಿರುವ ಪವಿತ್ರ ವಾಗ್ದಾನ. ಯಾವುದೇ ಜಾತಿ ಧರ್ಮ ಭಾಷೆ ಪ್ರದೇಶಕ್ಕೆ ಸೇರಿದವರಿರಲಿ ಬಡವನಿರಲಿ ಶ್ರೀಮಂತನೇ ಆಗಿರಲಿ ಎಲ್ಲರಿಗೂ ಸಮಾನತೆ ಗೌರವ ಮತ್ತು ನ್ಯಾಯ ಸಿಗುತ್ತದೆ ಎಂಬ ಭರವಸೆಯನ್ನು ಸಂವಿಧಾನ ಒದಗಿಸಿದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಸಂವಿಧಾನವು ಅವಕಾಶ ವಂಚಿತರ ಬಡವರ ರಕ್ಷಣಾ ಕವಚ. ಇದು ದೇಶದ ಪ್ರತಿಯೊಬ್ಬ ಪ್ರಜೆಯ ಧ್ವನಿ. ಸಂವಿಧಾನವನ್ನು ಎಲ್ಲಿಯವರೆಗೆ ರಕ್ಷಿಸಲಾಗುತ್ತದೆಯೋ ಅಲ್ಲಿಯವರೆಗೆ ಪ್ರತಿಯೊಬ್ಬ ಭಾರತೀಯರ ಹಕ್ಕುಗಳಿಗೂ ರಕ್ಷಣೆ ಸಿಗುತ್ತದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.