ಧರ್ಮಶಾಲಾ: ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈಲಾಮಾ ಅವರ ಭದ್ರತಾ ನಾಯಿ ₹1,550ಗೆ ಮಾರಾಟವಾಗಿದೆ.
ದಲೈಲಾಮಾ ಅವರ ಭದ್ರತೆಗಾಗಿ ಸುಮಾರು ಒಂದು ದಶಕದಿಂದ ನಿಯೋಜಿಸಲಾಗಿದ್ದ ‘ಡುಕಾ’ ಎಂಬ ಸ್ನಿಫರ್ ಲ್ಯಾಬ್ರಡಾರ್ ನಾಯಿಯನ್ನು ಹರಾಜಿಗೆ ಹಾಕಲಾಯಿತು ಎಂದು ಹಿಮಾಚಲ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಈ ಹರಾಜಿನಲ್ಲಿ ‘ಡುಕಾ’ ₹1,550ಕ್ಕೆ ಮಾರಾಟವಾಗಿದೆ. ಪೊಲೀಸ್ ಸಿಬ್ಬಂದಿ ರಾಜೀವ್ ಕುಮಾರ್ ‘ಡುಕಾ’ವನ್ನು ಪಡೆದುಕೊಂಡಿದ್ದಾರೆ.
12 ವರ್ಷಗಳ ಹಿಂದೆ ಅಂದರೆ 2010ರಲ್ಲಿ ₹1.23 ಲಕ್ಷ ಕೊಟ್ಟು, ಸೇನಾ ತರಬೇತಿ ಸೆಂಟರ್‌ನಿಂದ ‘ಡುಕಾ’ವನ್ನು ಖರೀದಿಸಲಾಗಿತ್ತು. ಆಗಾ ಅದರ ವಯಸ್ಸು 7 ತಿಂಗಳಿತ್ತು ಎಂದರು.
ದಲೈಲಾಮಾ ಅವರ ಅಧಿಕೃತ ನಿವಾಸದಲ್ಲಿ ಗಸ್ತು ತಿರುಗಲು ಮತ್ತು ಬಾಂಬ್ ಸ್ಫೋಟಕಗಳನ್ನು, ಪತ್ತೆಹಚ್ಚಲು ಪೊಲೀಸರು ಡುಕಾನನ್ನು ಬಳಸುತ್ತಿದ್ದರು.
‘ಡುಕಾ’ ನಾಯಿ ವಿಶೇಷವಾಗಿ ಬಾಂಬ್ ಸ್ಫೋಟಕ ಪತ್ತೆಹಚ್ಚುವ ತರಬೇತಿ ಪಡೆದಿತ್ತು ಎಂದು ದಲೈ ಲಾಮಾ ಅವರ ಭದ್ರತೆಯಲ್ಲಿ ನಿಯೋಜನೆಗೊಂಡಿರುವ ಉಪ ಪೊಲೀಸ್ ವರಿಷ್ಠಾಧಿಕಾರಿ ನಿತಿನ್ ಚೌಹಾಣ್ ತಿಳಿಸಿದ್ದಾರೆ.
‘ಡುಕಾ’ ದಲೈಲಾಮಾ ಅವರ ಅತ್ಯಂತ ವಿಶ್ವಾಸಾರ್ಹ ನಾಯಿ. ಆದರೆ ಇದೀಗ ಡುಕಾ ತನ್ನ ಶ್ರವಣ ಶಕ್ತಿ ಕಳೆದುಕೊಂಡಿದೆ.
ಇದೀಗ ದಲೈಲಾಮಾ ಅವರ ಭದ್ರತಾ ಜವಾಬ್ದಾರಿಯನ್ನು ಒಂಬತ್ತು ತಿಂಗಳ ನಾಯಿ ‘ಟಾಮಿ’ಗೆ ನೀಡಲಾಗಿದೆ. ಟಾಮಿ ಪಂಜಾಬ್ ಹೋಮ್ ಗಾರ್ಡ್ಸ್ ಕ್ಯಾನೈನ್ ಟ್ರೈನಿಂಗ್ ಮತ್ತು ಬ್ರೀಡಿಂಗ್ ಇನ್‌ಸ್ಟಿಟ್ಯೂಟ್‌ನಿಂದ ತರಬೇತಿ ಪಡೆದಿದೆ. ₹3 ಲಕ್ಷ ಕೊಟ್ಟು ಟಾಮಿಯನ್ನು ಖರೀದಿಸಲಾಗಿದೆ ಎಂದು ಹೇಳಿದ್ದಾರೆ.
ಧರ್ಮಶಾಲಾ ಉಪನಗರ ಮೆಕ್ಲಿಯೋಡ್‌ಗಂಜ್‌ನಲ್ಲಿ ದಲೈ ಲಾಮಾ ನೆಲೆಸಿದ್ದಾರೆ. ಟೆಬೆಟನ್ನರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಪ್ರದೇಶವಾಗಿದೆ.
ಭಾರತದಲ್ಲಿ ಮೂರು ಹಂತದ ಭದ್ರತೆಯನ್ನು ಪಡೆದಿರುವ ದಲೈಲಾಮಾ, ಹೆಚ್ಚು ಭದ್ರತೆಯುಳ್ಳ ವ್ಯಕ್ತಿಗಳಲ್ಲಿ ಒಬ್ಬರು.