ನವದೆಹಲಿ: ನವ ರಾಜಕಾರಣ ಪರಿಭಾಷೆಯ ಮೂಲಕ ದೆಹಲಿ ರಾಜಕಾರಣದಲ್ಲಿ ಹೊಸ ಗಾಳಿ ಬೀಸಿದ್ದ ಆಮ್ ಆದ್ಮಿ ಪಕ್ಷದ (ಎಎಪಿ) ನಾಲ್ಕನೇ ಬಾರಿ ಗೆಲ್ಲುವ ಮಹದಾಸೆ ಭಗ್ನಗೊಂಡಿದೆ. ರಾಷ್ಟ್ರ ರಾಜಧಾನಿಯಲ್ಲಿ 27 ವರ್ಷಗಳ ರಾಜಕೀಯ ವನವಾಸದ ಬಳಿಕ ‘ತಾವರೆ’ ಅರಳಿದೆ. ದೆಹಲಿ ‘ಕಿರೀಟ’ ಗೆಲ್ಲುವ ನರೇಂದ್ರ ಮೋದಿ–ಅಮಿತ್ ಶಾ ಜೋಡಿಯ ಬಹುಕಾಲದ ಕನಸು ನನಸಾಗಿದೆ. ಹಿಂದಿ ಭಾಷಿಕ ಪ್ರದೇಶದ ಹೃದಯ ಭಾಗದಲ್ಲಿ ರಾಜಕೀಯ ಪುನರ್ಜನ್ಮ ಪಡೆಯುವ ಕಾಂಗ್ರೆಸ್ ಇರಾದೆಗೆ ಶನಿವಾರದ ಫಲಿತಾಂಶ ತಣ್ಣೀರು ಎರಚಿದೆ.

ತನ್ನ ಮೊದಲ ಚುನಾವಣೆಯಲ್ಲಿ ಅದ್ಭುತ ಜಯ ಗಳಿಸುವ ಮೂಲಕ ದೇಶದ ರಾಜಕಾರಣಕ್ಕೆ ಲಗ್ಗೆ ಇಟ್ಟ ಹನ್ನೊಂದು ವರ್ಷಗಳ ಬಳಿಕ ಅರವಿಂದ ಕೇಜ್ರಿವಾಲ್ ಅವರ ಪಕ್ಷವು ದೆಹಲಿ ‘ಕೋಟೆ’ಯನ್ನು ಬಿಜೆಪಿಗೆ ಬಿಟ್ಟುಕೊಟ್ಟಿದೆ. ಕಳೆದ ಎರಡು ಚುನಾವಣೆಗಳಲ್ಲಿ ಒಂದಂಕಿ ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದ್ದ ಕಮಲ ಪಾಳಯವು ಈ ಬಾರಿ ಮೂರನೇ ಎರಡು ಬಹುಮತದೊಂದಿಗೆ ದೆಹಲಿ ಗದ್ದುಗೆ ಹಿಡಿದಿದೆ. ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಹಿನ್ನಡೆ ಅನುಭವಿಸಿದ ಬಳಿಕ ಕಳೆದ ಎಂಟು ತಿಂಗಳಲ್ಲಿ ಬಿಜೆಪಿಯು ಮೂರನೇ ರಾಜ್ಯವನ್ನು ಗೆದ್ದುಕೊಂಡಿದೆ. ಪ್ರತಿಕೂಲ ಸನ್ನಿವೇಶದ ನಡುವೆಯೂ ಹರಿಯಾಣ, ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ತನ್ನ ‘ಚುನಾವಣೆ ಗೆಲ್ಲುವ ಕಲೆ’ಯನ್ನು ಬಿಜೆಪಿ ಪ್ರಚುರಪಡಿಸಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಪಕ್ಷದ ನೀತಿ ನಿರೂಪಣೆಯಲ್ಲಿ ಮತ್ತೆ ಹಿಡಿತ ಸಾಧಿಸಿದ ಮೇಲೆ ಕೇಸರಿ ಪಾಳಯವು ಗೆಲುವಿನ ಹಳಿಗೆ ಮರಳಿದೆ.

ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಹೋರಾಟದಿಂದ ಹುಟ್ಟಿಕೊಂಡ ಪಕ್ಷವಾದ ಎಎಪಿಯು ದಶಕದಲ್ಲೇ ಭ್ರಷ್ಟಾಚಾರದ ಕಳಂಕ ಅಂಟಿಸಿಕೊಂಡು ಸೋತು ಸುಣ್ಣವಾಗಿದೆ. ಕೇಜ್ರಿವಾಲ್ ಸೇರಿದಂತೆ ಪಕ್ಷದ ಪ್ರಮುಖ ದಂಡನಾಯಕರ ರೆಕ್ಕೆಪುಕ್ಕಗಳನ್ನು ಕಮಲ ಪಾಳಯ ಕತ್ತರಿಸಿದೆ. ಕಾಂಗ್ರೆಸ್ ಪಕ್ಷವು ಸತತ ಮೂರನೇ ಬಾರಿಗೆ ಶೂನ್ಯ ಸಂಪಾದನೆ ಮಾಡಿದರೂ ಕೇಜ್ರಿವಾಲ್ ವಿರುದ್ಧ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಯುಪಿಎ ಸರ್ಕಾರವನ್ನು ಗುರಿಯಾಗಿಸಿಕೊಂಡು ಅಣ್ಣಾ ಹಜಾರೆ ನಡೆಸಿದ ಆಂದೋಲನವು ಕಾಂಗ್ರೆಸ್ನ ಪತನಕ್ಕೆ ಕಾರಣವಾಗಿತ್ತು. ಎಎಪಿಯು ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗುಡಿಸಿ ಹಾಕಿತ್ತು. 11 ವರ್ಷಗಳಲ್ಲೇ ‘ಬ್ರ್ಯಾಂಡ್ ಕೇಜ್ರಿವಾಲ್’ ಪ್ರಭಾವಳಿಗೆ ಮಂಕು ಕವಿಯಲಾರಂಭಿಸಿದೆ. ರಾಜ್ಯದಲ್ಲಿ ಸತತ ನಾಲ್ಕನೆಯ ಸಲ ಗೆಲುವಿಗಾಗಿ ಕಡೆಯ ಗಳಿಗೆಯ ತನಕ ‘ವೀರೋಚಿತ’ ಹೋರಾಟ ನಡೆಸಿದರೂ ಕೇಜ್ರಿವಾಲ್ ಅವರಿಗೆ ಯಶಸ್ಸು ಸಿಕ್ಕಿಲ್ಲ.

ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಮತ ಕೊಟ್ಟು ವಿಧಾನಸಭಾ ಚುನಾವಣೆಯಲ್ಲಿ ಕೇಜ್ರಿವಾಲ್ ಪಕ್ಷಕ್ಕೆ ಮತ ಚಲಾಯಿಸುತ್ತಿದ್ದ ‘ಬಲಪಂಥೀಯ’ ಮತದಾರರು ಮತ್ತೆ ಕೇಸರಿ ಪಾಳಯಕ್ಕೆ ಮರಳಿದ್ದಾರೆ. 2020ರಲ್ಲಿ ಶೇ 53.57 ರಷ್ಟಿದ್ದ ಎಎಪಿಯ ಮತ ಪ್ರಮಾಣ ಈ ಸಲ ಶೇ 43.7ಕ್ಕೆ ಇಳಿಯಿತು. ಬಡವರು, ಮಹಿಳೆಯರು ಹಾಗೂ ಮಧ್ಯಮ ವರ್ಗದ ನಿರ್ಣಾಯಕ ಮತದಾರರು ತಮ್ಮ ನಿಷ್ಠೆ ಬದಲಾಯಿಸಿದರು. ರಾಜಧಾನಿಯಲ್ಲಿ ಶೇ 46ರಷ್ಟಿರುವ ಪ್ರಬಲ ಜಾತಿಯವರ ಜತೆಗೆ ಶೇ 66ರಷ್ಟಿರುವ ಮಧ್ಯಮ ವರ್ಗದವರು ಬಿಜೆಪಿ ಪರ ಬಲವಾಗಿ ನಿಂತರು. ಮತದಾನಕ್ಕೆ ಐದು ದಿನಗಳ ಮೊದಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ‘ಆದಾಯ ತೆರಿಗೆ ವಿನಾಯಿತಿ’ ಘೋಷಣೆಯೂ ಬಿಜೆಪಿಗೆ ಭರಪೂರ ಫಸಲನ್ನು ಕೊಟ್ಟಿತು.

ಎಎಪಿ ಎಡವಿದ್ದೆಲ್ಲಿ?

ಅಬಕಾರಿ ನೀತಿ ಜಾರಿಯ ಹಗರಣವು ಈ ಚುನಾವಣೆಯಲ್ಲಿ ಎಎಪಿಗೆ ಬಹುದೊಡ್ಡ ಪೆಟ್ಟು ನೀಡಿತು. ಈ ಹಗರಣದಲ್ಲಿ ಅರವಿಂದ ಕೇಜ್ರಿವಾಲ್, ಮನೀಷ್ ಸಿಸೋಡಿಯಾ, ಸಂಜಯ್ ಸಿಂಗ್ ಜೈಲುಪಾಲಾದರು. ಈ ಹಗರಣವು ಪಕ್ಷದ ಸ್ವಚ್ಛ ಇಮೇಜ್ಗೆ ಬಲವಾದ ಪೆಟ್ಟು ಕೊಟ್ಟಿತು. ಕೇಜ್ರಿವಾಲ್ ಅವರು ಜೈಲಿನಲ್ಲಿದ್ದೇ ಸುಮಾರು ಆರು ತಿಂಗಳು ಆಡಳಿತ ನಡೆಸಿದರು. ಆ ಅವಧಿಯಲ್ಲಿ ಆಡಳಿತ ಯಂತ್ರ ಬಹುತೇಕ ಸ್ತಬ್ಧಗೊಂಡಿತು.

ಜೈಲಿನಿಂದ ಹೊರಬಂದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆತಿಶಿ ಅವರು ಮುಖ್ಯಮಂತ್ರಿಯಾದರೂ ‘ಉತ್ಸವಮೂರ್ತಿ’ಯಂತೆ ಇದ್ದರು. ಲೆಫ್ಟಿನೆಂಟ್ ಗವರ್ನರ್ ಅವರು ನಿತ್ಯ ಬರೆದ ಪತ್ರಗಳಿಗೆ, ತನಿಖಾ ಆದೇಶಗಳಿಗೆ ಉತ್ತರ ಹಾಗೂ ಸ್ಪಷ್ಟೀಕರಣ ನೀಡುವುದೇ ಸಂಪುಟದ ಸದಸ್ಯರಿಗೆ ದೊಡ್ಡ ಕಾಯಕವಾಯಿತು. ಆಡಳಿತದಲ್ಲಿ ರಾಜ್ಯದ ಅಧಿಕಾರಿಗಳ ಅಸಹಕಾರವು ಬಲುದೊಡ್ಡ ಪೆಟ್ಟು ನೀಡಿತು. ಕೇಜ್ರಿವಾಲ್ ತಂಡ ‘ಗ್ಯಾರಂಟಿ’ಗಳನ್ನು ಘೋಷಿಸಿದಾಗ ಅಂತಹ ಯೋಜನೆಯೇ ಚಾಲ್ತಿಯಲ್ಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ಕೊಟ್ಟರು. ಯಾವುದೇ ಹಂತದಲ್ಲಿ ಪಕ್ಷದ ಪರವಾದ ಅಲೆಯನ್ನು ಸೃಷ್ಟಿಸುವಲ್ಲಿ ಎಎಪಿ ನಾಯಕರು ಸಫಲರಾಗಲಿಲ್ಲ.

ಹರಿಯಾಣದ ಬಿಜೆಪಿ ಸರ್ಕಾರವು ಯಮುನಾ ನದಿಗೆ ವಿಷ ಹಾಕಿದೆ ಎಂಬುದು ಸೇರಿದಂತೆ ಹಲವು ಆರೋಪ ಮಾಡುವ ಮೂಲಕ ಕೇಜ್ರಿವಾಲ್ ಚುನಾವಣಾ ಕಣದಲ್ಲಿ ಅಸಹಾಯಕ ಮೂರ್ತಿಯಂತೆ ಕಂಡರು. ಬಿಜೆಪಿ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ಹಾಗೂ ಉಚಿತ ನೀರಿನ ಯೋಜನೆ ನಿಲ್ಲಿಸಲಿದೆ ಎಂದು ಎಎಪಿ ನಾಯಕರು ಪ್ರಚಾರ ಮಾಡಿದರೂ ಜನರು ನಂಬಲಿಲ್ಲ. ಅದೇ ಸಂದರ್ಭದಲ್ಲಿ ಉಚಿತ ಯೋಜನೆಗಳ ಮಹಾಪೂರವೇ ಇರುವ ಸಂಕಲ್ಪ ಪತ್ರವನ್ನು ಬಿಜೆಪಿ ಪ್ರಕಟಿಸಿತು. ಉಚಿತ ಯೋಜನೆಗಳ ಕಾರಣಕ್ಕೆ ಎಎಪಿ ಜತೆಗಿದ್ದ ಮತದಾರರು ಈ ಸಲ ಕಮಲ ಪಾಳಯಕ್ಕೆ ಜಿಗಿದರು.

ಡಿಸೆಂಬರ್ ಹಾಗೂ ಜನವರಿಯಲ್ಲಿನ ವಿಪರೀತ ಮಾಲಿನ್ಯದಿಂದ ಜನರು ಬಳಲಿದ್ದರು. ನಗರದ ಮಾಲಿನ್ಯವನ್ನು ತಹಬದಿಗೆ ತರುವುದಾಗಿ ಎಎಪಿಯು ಹಿಂದಿನ ಚುನಾವಣೆಗಳಲ್ಲಿ ಭರವಸೆ ನೀಡಿತ್ತು. ಮಾಲಿನ್ಯ ನಿಯಂತ್ರಣ ಸೇರಿದಂತೆ ಮೂರು ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ ಎಂದು ಕೇಜ್ರಿವಾಲ್ ಅವರೇ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದರು. ಹಿಂದಿನ ಚುನಾವಣೆಗಳಲ್ಲಿ ಕೇಜ್ರಿವಾಲ್ ಅವರಿಗೆ ಹೆಗಲು ಕೊಟ್ಟಿದ್ದ ನಾಯಕರೆಲ್ಲ ದುರ್ಬಲರಾಗಿದ್ದರು. ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಬಾರಿ ಪಕ್ಷವು ಕೇಜ್ರಿವಾಲ್ ಅವರನ್ನು ಹೆಚ್ಚು ಅವಲಂಬಿಸಬೇಕಾಯಿತು.

ಕಾಂಗ್ರೆಸ್ ವಿರೋಧಿ ರಾಜಕಾರಣದಿಂದಲೇ ಪ್ರವರ್ಧಮಾನಕ್ಕೆ ಬಂದ ಪಕ್ಷ ಎಎಪಿ. 2024ರ ಲೋಕಸಭಾ ಚುನಾವಣೆಯಲ್ಲಿ ಎಎಪಿ–ಕಾಂಗ್ರೆಸ್ ಮೈತ್ರಿ ಮಾಡಿಕೊಂಡವು. ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮುರಿದುಕೊಂಡವು. ಇದು ಸಹ ಮತದಾರರಿಗೆ ತಪ್ಪು ಸಂದೇಶ ರವಾನಿಸಿತು. 2020ರಲ್ಲಿ ಹಿಂದೂ–ಮುಸ್ಲಿಂ ಗಲಭೆಯಲ್ಲಿ 53 ಮಂದಿ ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಎಎಪಿ ನಾಯಕರು ಮೃದು ಹಿಂದುತ್ವ ಧೋರಣೆ ತಳೆದಿದ್ದರು. ಇದರಿಂದ ಮುಸ್ಲಿಮರು ಬೇಸತ್ತಿದ್ದರು. ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಲ್ಲಿ ಪಕ್ಷ ಸೋಲಲು ಇದೂ ಕಾರಣ.

2020ರಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಮೇಲೆ ಕೇಜ್ರಿವಾಲ್ ಅವರು ರಾಷ್ಟ್ರ ರಾಜಕಾರಣದ ಕಡೆಗೆ ಗಮನ ಕೇಂದ್ರೀಕರಿಸಿದರು. ಗುಜರಾತ್, ಗೋವಾ, ಪಂಜಾಬ್, ಹಿಮಾಚಲ ಪ್ರದೇಶ, ಹರಿಯಾಣದಂತಹ ರಾಜ್ಯಗಳ ಕಡೆಗೆ ದೃಷ್ಟಿ ನೆಟ್ಟರು. ಪರಿಣಾಮವಾಗಿ, ದೆಹಲಿ ಸರ್ಕಾರದ ಆಡಳಿತದಲ್ಲಿ ಅವರ ಹಿಡಿತ ಕಡಿಮೆಯಾಯಿತು. 2020ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಐದೇ ಸ್ಥಾನಗಳನ್ನು ಗೆದ್ದರೂ ಶೇ 12ರಷ್ಟು ಮತಗಳನ್ನು ಪಡೆಯಿತು. ಅದಾದ ಸ್ವಲ್ಪ ಸಮಯದಲ್ಲೇ ಅಬಕಾರಿ ನೀತಿ ಹಗರಣದ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಆದೇಶಿಸಿದರು. ಅಲ್ಲಿಂದಲೇ ಕೇಜ್ರಿವಾಲ್ ಪಕ್ಷದ ಇಳಿಹಾದಿ ಆರಂಭವಾಯಿತು.

ಇತ್ತೀಚಿನ ವರ್ಷಗಳಲ್ಲಿ ದೆಹಲಿ ರಾಜಕಾರಣದಲ್ಲಿ ಮೂರು ಮುಖ್ಯ ಪಕ್ಷಗಳು ಏಳುಬೀಳುಗಳನ್ನು ಕಂಡಿವೆ. ಕಾಂಗ್ರೆಸ್ ಪತನದ ಲಾಭವನ್ನು ಎಎಪಿ ಹಾಗೂ ಬಿಜೆಪಿ ಪಡೆದುಕೊಂಡಿದ್ದವು. ಈ ಸಲ ಎಎಪಿಯ ಜೋಳಿಗೆಯಲ್ಲಿದ್ದ ಒಂದಷ್ಟು ಮತಗಳನ್ನು ಕಾಂಗ್ರೆಸ್ ಕಸಿದುಕೊಂಡಿದೆ. ಎಎಪಿಯ ಆಡಳಿತ ವಿರೋಧಿ ಅಲೆಯ ಭರಪೂರ ಲಾಭ ಪಡೆದ ಬಿಜೆಪಿಯು ಯಶಸ್ಸಿನ ಭಾರಿ ಅಲೆಯಲ್ಲಿ ತೇಲಿದೆ.

ಬಿಜೆಪಿ ಗೆಲುವಿಗೆ ಕಾರಣಗಳೇನು?

ಸ್ಥಳೀಯ ವಿಚಾರಗಳು ಹಾಗೂ ದೆಹಲಿಯ ಸಮಸ್ಯೆಗಳಿಗೆ ಮಹತ್ವ ನೀಡಿಕೆ

ಎಎಪಿಯ ಪ್ರಮುಖ ಅಭ್ಯರ್ಥಿಗಳ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಕ್ಷೇತ್ರದಲ್ಲಿ ಕಟ್ಟಿ ಹಾಕುವ ಪ್ರಯತ್ನದಲ್ಲಿ ಯಶಸ್ಸು

ಎಎಪಿಯ ಪ್ರಮುಖ ನಾಯಕರನ್ನು ಸೆಳೆದುಕೊಂಡು ಟಿಕೆಟ್ ನೀಡಿಕೆ

ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಹಲವಾರು ಪ್ರಮುಖ ನಾಯಕರನ್ನು ಕಣಕ್ಕಿಳಿಸದೆ ಪ್ರಚಾರದ ಹೊಣೆ

‘ಉತ್ತಮ ದೆಹಲಿ–ಉತ್ತಮ ಭಾರತ’ ಘೋಷಣೆಯಡಿ ಆರ್ಎಸ್ಎಸ್ ಕಾರ್ಯಕರ್ತರು ತಳಮಟ್ಟದಲ್ಲಿ ನಡೆಸಿದ ‘ದೆಹಲಿ ಉಳಿಸಿ ಅಭಿಯಾನ’

ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ ಸೇರಿದಂತೆ ಬಿಜೆಪಿ ನಾಯಕರ ಅಬ್ಬರದ ಪ್ರಚಾರ. ಕೇಂದ್ರ ಸಚಿವರು ಹಾಗೂ ಎನ್ಡಿಎ ಮೈತ್ರಿಕೂಟದ ಸಂಸದರಿಂದ ಮನೆ ಮನೆಗೆ ತೆರಳಿ ‘ತನು ಮನ ಧನ’ದ ಪ್ರಚಾರ

ಎಎಪಿ ಸರ್ಕಾರದ ಲೋಪಗಳನ್ನು ಲೆಫ್ಟಿನೆಂಟ್ ಗವರ್ನರ್ ನಿರಂತರವಾಗಿ ಬೊಟ್ಟು ಮಾಡಿ ತೋರಿಸಿದ್ದು

ದೆಹಲಿ ಚುನಾವಣೆಗೆ ಮೊದಲು ಪ್ರಕಟಿಸಿದ ಬಜೆಟ್ ಘೋಷಣೆಗಳು

ಬಿಜೆಪಿ ಅಧಿಕಾರಕ್ಕೆ ಬಂದರೆ ಉಚಿತ ಯೋಜನೆಗಳನ್ನು ಸುತಾರಂ ನಿಲ್ಲಿಸುವುದಿಲ್ಲ ಎಂದು ಪಕ್ಷದ ನಾಯಕರು ಘೋಷಿಸಿದ್ದು. ಉಚಿತ ಯೋಜನೆಗಳ ಸಂಕಲ್ಪ ಪತ್ರ ಪ್ರಕಟಣೆ

ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸದೇ ಎಲ್ಲ ನಾಯಕರು ಒಗ್ಗಟ್ಟಿನಿಂದ ಪ್ರಚಾರದಲ್ಲಿ ತೊಡಗುವಂತೆ ಮಡಿದ ಕಾರ್ಯತಂತ್ರ

ಮತದಾರರ ತೀರ್ಪನ್ನು ವಿನಯದಿಂದ ಸ್ವೀಕರಿಸುತ್ತೇವೆ. ಹೊಸ ಸರ್ಕಾರವು ದೆಹಲಿಯ ಜನರ ನಿರೀಕ್ಷೆಗಳನ್ನು ಈಡೇರಿಸುವುದಾಗಿ ಭಾವಿಸುತ್ತೇವೆ.
ಅರವಿಂದ ಕೇಜ್ರಿವಾಲ್, ಎಎಪಿ ಸಂಚಾಲಕ

ಜನಾದೇಶ ಸ್ವೀಕರಿಸುತ್ತೇವೆ. ದೆಹಲಿಯ ಜನರ ಹಕ್ಕುಗಳಿಗಾಗಿ ಹಾಗೂ ಮಾಲಿನ್ಯ, ಬೆಲೆ ಏರಿಕೆ, ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ.
ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ಆಮ್ ಆದ್ಮಿ ಪಕ್ಷವು (ಎಎಪಿ) ಅಬಕಾರಿ ನೀತಿಯ ಕಾರಣದಿಂದಾಗಿ ಹಾಗೂ ಹಣಕ್ಕೆ ಹೆಚ್ಚು ಗಮನ ನೀಡಿದ ಪರಿಣಾಮವಾಗಿ ಮುಳುಗಿದೆ.
ಅಣ್ಣಾ ಹಜಾರೆ, ಸಾಮಾಜಿಕ ಕಾರ್ಯಕರ್ತ

ಎಎಪಿ ಮತ್ತು ಅದರ ಸಂಚಾಲಕ ಅರವಿಂದ ಕೇಜ್ರಿವಾಲ್ ‘ದುರಹಂಕಾರ’ವೇ ಪಕ್ಷದ ಸೋಲಿಗೆ ಕಾರಣ. ರಾವಣನ ದುರಹಂಕಾರವೂ ಉಳಿಯಲಿಲ್ಲ.
ಸ್ವಾತಿ ಮಾಲಿವಾಲ್, ರಾಜ್ಯಸಭಾ ಸದಸ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.