ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದಿತ ದೆಹಲಿ ಮಸೂದೆ ಅಂಗೀಕಾರ

‘ಇಂಡಿಯಾ’ ಸದಸ್ಯರ ಸಭಾತ್ಯಾಗ: ಮತ್ತೊಬ್ಬ ಎಎಪಿ ಸಂಸದ ಅಮಾನತು
Published 4 ಆಗಸ್ಟ್ 2023, 0:28 IST
Last Updated 4 ಆಗಸ್ಟ್ 2023, 0:28 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ಆಡಳಿತ ಸೇವೆಗಳಿಗೆ ಸಂಬಂಧಿಸಿದ ಅಧಿಕಾರವನ್ನು ತನ್ನಲ್ಲಿಯೇ ಉಳಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಂಡಿಸಿದ ‘ರಾಷ್ಟ್ರ ರಾಜಧಾನಿ ಪ್ರದೇಶ ದೆಹಲಿ ಸರ್ಕಾರದ (ತಿದ್ದುಪಡಿ) ಮಸೂದೆ’ಗೆ ಲೋಕಸಭೆಯಲ್ಲಿ ಗುರುವಾರ, ‘ಇಂಡಿಯಾ’ ಮೈತ್ರಿಕೂಟದ ಸದಸ್ಯರ ಸಭಾತ್ಯಾಗದ ನಡುವೆಯೇ ಅಂಗೀಕಾರದ ಮುದ್ರೆ ಬಿದ್ದಿದೆ.

ಸಂಸತ್‌ನ ಕೆಳಮನೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮಂಡಿಸಿದ ಈ ಮಸೂದೆಗೆ ಬಿಜು ಜನತಾದಳ, ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಹಾಗೂ ಟಿಡಿಪಿ ಬೆಂಬಲ ನೀಡಿದವು. ಸೋಮವಾರ ಈ ಮಸೂದೆಯು ರಾಜ್ಯಸಭೆಯಲ್ಲಿ ಮಂಡನೆಯಾಗಲಿದ್ದು, ಅಲ್ಲಿಯೂ ನಿರಾಯಾಸವಾಗಿ ಅಂಗೀಕಾರವಾಗುವ ನಿರೀಕ್ಷೆ ಇದೆ. ಮಸೂದೆ ಅನ್ವಯ ದೆಹಲಿ ಸರ್ಕಾರದ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಯ ಮೇಲೆ ಕೇಂದ್ರವು ಸಂಪೂರ್ಣ ಹಿಡಿತ ಹೊಂದಲಿದೆ.

ಮಸೂದೆಗೆ ಸಂಬಂಧಿಸಿದಂತೆ ನಾಲ್ಕು ಗಂಟೆಗಳ ಕಾಲ ಚರ್ಚೆ ನಡೆಯಿತು. ‘ಇಂಡಿಯಾ’ ಸದಸ್ಯರ ಟೀಕೆಗಳಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರತಿಕ್ರಿಯಿಸಿದರು. ಬಳಿಕ ಧ್ವನಿಮತದ ಮೂಲಕ ಒಪ್ಪಿಗೆ ನೀಡಲಾಯಿತು. ಬಳಿಕ ಸದನವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.

ಅಮಿತ್‌ ಶಾ ಅವರು, ಸಂವಿಧಾನಕ್ಕೆ ಅಡಿಪಾಯ ಹಾಕಲು ಶ್ರಮಿಸಿದ ದೇಶದ ಮೊದಲ ಪ್ರಧಾನಿ ಜವಾಹರ್‌ ಲಾಲ್‌ ನೆಹರೂ, ಡಾ.ಬಿ.ಆರ್‌. ಅಂಬೇಡ್ಕರ್‌, ಕಾಂಗ್ರೆಸ್‌ ನಾಯಕರಾದ ಸಿ. ರಾಜಗೋಪಾಲಚಾರಿ, ಸರ್ದಾರ್‌ ಪಟೇಲ್‌ ಅವರ ಸೇವೆಯನ್ನು ಸ್ಮರಿಸಿ ಮಸೂದೆ ಮಂಡಿಸಿದರು.

ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ, ‘ನೆಹರೂ ಹಾಗೂ ಕಾಂಗ್ರೆಸ್‌ ಪಕ್ಷವನ್ನು ಅಮಿತ್‌ ಶಾ ಅವರು ಹೊಗಳುತ್ತಿದ್ದಾರೆ. ನನಗೆ ಇದನ್ನು ನಂಬಲಾಗುತ್ತಿಲ್ಲ’ ಎಂದರು.

ಸಂವಿಧಾನದ ಆಶಯ ಪಾಲನೆ:

ಅಮಿತ್ ಶಾ ಅವರು, ದೇಶದ ರಾಜಧಾನಿಯಲ್ಲಿ ಅಧಿಕಾರಶಾಹಿಯು ಯಾರ ನಿಯಂತ್ರಣದಲ್ಲಿ ಇರಬೇಕು ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ ಈಗಾಗಲೇ ಸ್ಪಷ್ಟವಾಗಿ ಹೇಳಿದೆ. ಅದರ ಅನ್ವಯವೇ ಸರ್ಕಾರ ಮಸೂದೆ ಮಂಡಿಸಿದೆ ಎಂದು ಬಲವಾಗಿ ಸಮರ್ಥಿಸಿಕೊಂಡರು. 

ಕೇಂದ್ರಾಡಳಿತ ಪ್ರದೇಶವಾದ ದೆಹಲಿಗೆ ಸಂಬಂಧಿಸಿದ ಯಾವುದೇ ವಿಷಯಗಳ ಮೇಲೆ ಕಾನೂನು ರಚಿಸಲು ಸಂಸತ್‌ಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಂವಿಧಾನದಲ್ಲಿಯೂ ಇದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಶಾ ಹೇಳಿದರು.

ಒಮ್ಮೆ ಮಸೂದೆ ಅಂಗೀಕಾರವಾದರೆ ‘ಇಂಡಿಯಾ’ದ ಒಗ್ಗಟ್ಟು ಕೂಡ ಕುಸಿದು ಬೀಳಲಿದೆ ಎಂದು ಭವಿಷ್ಯ ನುಡಿದ ಅವರು, ‘ಕೇಜ್ರಿವಾಲ್‌ ಸರ್ಕಾರ ಸಾಂವಿಧಾನಿಕ ನಿಯಮಾವಳಿ ಅನ್ವಯ ಕಾರ್ಯ ನಿರ್ವಹಿಸುತ್ತಿಲ್ಲ. ವಿಧಾನಸಭಾ ಅಧಿವೇಶನವನ್ನೂ ಸರಿಯಾಗಿ ನಡೆಸುತ್ತಿಲ್ಲ. ಸಚಿವ ಸಂಪುಟ ಸಭೆಗಳು ಕೂಡ ನಿಯಮಿತವಾಗಿ ನಡೆಯುತ್ತಿಲ್ಲ ಎಂದು ಟೀಕಿಸಿದರು.

ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣ ಕುರಿತು ಕೇಂದ್ರ ಹೊರಡಿಸಿದ್ದ ಸುಗ್ರೀವಾಜ್ಞೆ ವಿರುದ್ಧ ಸಂಸತ್‌ನ ಹೊರಗೆ ಹಾಗೂ ಒಳಗೆ ಎಎಪಿ ಸರ್ಕಾರವು ಹೋರಾಟ ನಡೆಸಿತ್ತು. ಇದಕ್ಕೆ ‘ಇಂಡಿಯಾ’ ಸದಸ್ಯರು ಕೈಜೋಡಿಸಿದ್ದರು.

ಸಾರ್ವಜನಿಕ ಭದ್ರತೆ, ಪೊಲೀಸ್‌ (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ಭೂಮಿಗೆ ಸಂಬಂಧಿಸಿದ ವಿಷಯಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಸೇವೆಗಳ ವಿಚಾರದಲ್ಲಿ  ದೆಹಲಿ ಸರ್ಕಾರವು ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರ ಹೊಂದಿದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಇದರ ವಿರುದ್ಧ ಕೇಂದ್ರವು ಸುಗ್ರೀವಾಜ್ಞೆ ಹೊರಡಿಸಿತ್ತು. ಈಗ ಇದಕ್ಕೆ ಕಾಯ್ದೆಯ ರೂಪ ನೀಡಲು ಮುಂದಾಗಿದ್ದು, ಮಸೂದೆಗೆ ಕೆಳಮನೆಯು ಒಪ್ಪಿಗೆ ನೀಡಿದೆ.  

ಎಎಪಿ ಸಂಸದ ಅಮಾನತು:

ಚರ್ಚೆ ವೇಳೆ ಎಎಪಿ ಸಂಸದ ಸುಶೀಲ್ ಕುಮಾರ್ ರಿಂಕು ಅವರು, ಸ್ಪೀಕರ್‌ ಕುರ್ಚಿಯತ್ತ ಮಸೂದೆಯ ಪ್ರತಿಯನ್ನು ಎಳೆದರು. ಅಶಿಸ್ತಿನ ವರ್ತನೆ ತೋರಿದ ಆರೋಪದ ಮೇಲೆ ಮುಂಗಾರು ಅಧಿವೇಶನದ ಮುಂದಿನ ಅವಧಿವರೆಗೆ ರಿಂಕು ಅವರನ್ನು ಅಮಾನತುಗೊಳಿಸಿ ಸ್ಪೀಕರ್‌ ಓಂ ಬಿರ್ಲಾ ಆದೇಶ ಹೊರಡಿಸಿದ್ದಾರೆ.

ರಾಜ್ಯಸಭೆಯಲ್ಲಿಯೂ ಅಶಿಸ್ತಿನ ವರ್ತನೆ ತೋರಿದ ಆರೋಪದ ಮೇಲೆ ಎಎಪಿ ಸಂಸದ ಸಂಜಯ್ ಸಿಂಗ್‌ ಅವರನ್ನು ಅಮಾನತುಗೊಳಿಸಲಾಗಿದೆ.

ದೆಹಲಿ ಜನರ ಬೆನ್ನಿಗೆ ಇರಿದ ಕೇಂದ್ರ’

‘ಮಸೂದೆಗೆ ಅಂಗೀಕಾರ ಪಡೆಯುವ ಮೂಲಕ ಕೇಂದ್ರ ಸರ್ಕಾರವು, ದೆಹಲಿ ನಾಗರಿಕರ ಬೆನ್ನಿಗೆ ಇರಿದಿದೆ. ಮೋದಿ ಮತ್ತು ಬಿಜೆಪಿ ಹೇಳುವ ಮಾತುಗಳನ್ನು ಜನರು ನಂಬಬಾರದು’ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

‘ಮಸೂದೆಯು ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದು, ಅವರನ್ನು ಗುಲಾಮಗಿರಿ ವ್ಯವಸ್ಥೆ‌ಗೆ ದೂಡುತ್ತಿದೆ. ಮಸೂದೆಗೆ ಸಂಬಂಧಿಸಿದಂತೆ ಸರ್ಕಾರ ಸಮರ್ಥನೀಯವಾದ ಒಂದೂ ವಾದ ಮಂಡಿಸಿಲ್ಲ. ಈಗಾಗಲೇ, ಜನರು ಅಸಹಾಯಕರಾಗಿದ್ದಾರೆ. ಮತ್ತೆ ಅವರನ್ನು ಅದೇ ಕೂ‍ಪಕ್ಕೆ ದೂಡುತ್ತದೆ’ ಎಂದು ಟ್ವೀಟ್‌ನಲ್ಲಿ ದೂರಿದ್ದಾರೆ.

****'ಸಾಂವಿಧಾನಿಕ ಮೌಲ್ಯ ಹೊಂದಿರುವ ಈ ಮಸೂದೆಯಿಂದ ದೆಹಲಿ ನಾಗರಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ವಿಪಕ್ಷಗಳು ಇದಕ್ಕೆ ಸಹಕಾರ ನೀಡಬೇಕು

-ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT