ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಬಾಂಡ್‌ | ಶಂಕಾಸ್ಪದ ವ್ಯವಹಾರ ಮರೆಮಾಚಲು ಎಸ್‌ಬಿಐ ಯತ್ನ: ಕಾಂಗ್ರೆಸ್‌

ಬಿಜೆಪಿಯಿಂದ ಬ್ಯಾಂಕ್‌ನ ದುರ್ಬಳಕೆ ಆರೋಪ, ಗಡುವು ವಿಸ್ತರಣೆ ಬೇಡ ಎಂದು ಆಗ್ರಹ
Published 5 ಮಾರ್ಚ್ 2024, 13:27 IST
Last Updated 5 ಮಾರ್ಚ್ 2024, 13:27 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ‘ಶಂಕಾಸ್ಪದ ವ್ಯವಹಾರ’ಗಳನ್ನು ಮರೆಮಾಚಲು ಕೇಂದ್ರವು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಅನ್ನು ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಚುನಾವಣಾ ಬಾಂಡ್‌ಗಳ ವಹಿವಾಟು ಕುರಿತ ಸಮಗ್ರ ವಿವರಗಳನ್ನು ಸಲ್ಲಿಸಲು ನಿಗದಿಪಡಿಸಿರುವ ಗಡುವು ವಿಸ್ತರಿಸಬೇಕು ಎಂದು ಕೋರಿ ಎಸ್‌ಬಿಐ, ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿರುವುದನ್ನು ಉಲ್ಲೇಖಿಸಿ ಕಾಂಗ್ರೆಸ್‌ ಈ ವಾಗ್ದಾಳಿ ನಡೆಸಿದೆ.

ಚುನಾವಣಾ ಬಾಂಡ್‌ ವಿವರಗಳನ್ನು ಮಾರ್ಚ್ 6ರ ಒಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಎಸ್‌ಬಿಐಗೆ ಆದೇಶಿಸಿತ್ತು. ಮೇಲ್ಮನವಿ ಸಲ್ಲಿಸಿದ್ದ ಎಸ್‌ಬಿಐ ಜೂನ್ 30ರವರೆಗೆ ಗಡುವು ವಿಸ್ತರಿಸಲು ಮನವಿ ಮಾಡಿತ್ತು.

‘ಎಕ್ಸ್‌’ ಜಾಲತಾಣದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಚುನಾವಣಾ ಬಾಂಡ್‌ ಎಂಬುದು ಪಾರದರ್ಶಕವಲ್ಲದ, ಪ್ರಜಾಸತ್ತಾತ್ಮಕವಲ್ಲದ ಹಾಗೂ ಸಮಾನ ಹೋರಾಟದ ವೇದಿಕೆಯನ್ನು ಹಾಳುಗೆಡವುವ ಯೋಜನೆಯಾಗಿದೆ ಎಂಬುದು ಕಾಂಗ್ರೆಸ್ ಪಕ್ಷದ ಸ್ಪಷ್ಟ ನಿಲುವಾಗಿದೆ’ ಎಂದು ಹೇಳಿದ್ದಾರೆ.

ಚುನಾವಣಾ ಬಾಂಡ್‌ಗಳು ಮೋದಿ ನೇತೃತ್ವದ ಸರ್ಕಾರದ ‘ಕಪ್ಪು ಹಣವನ್ನು ಪರಿವರ್ತಿಸುವ ಯೋಜನೆ’ಯಾಗಿದೆ. ಇದು ಅಸಾಂವಿಧಾನಿಕ ಎಂದು ಘೋಷಿಸಿರುವ ಸುಪ್ರೀಂ ಕೋರ್ಟ್‌ ಇದನ್ನು ರದ್ದುಪಡಿಸಿದ್ದು, ವಿವರ ಸಲ್ಲಿಸುವಂತೆಯೂ ಎಸ್‌ಬಿಐಗೆ ಸೂಚಿಸಿತ್ತು. ಪ್ರಸಕ್ತ ಲೋಕಸಭೆ ಅವಧಿ ಜೂನ್‌ 16ಕ್ಕೆ ಮುಗಿಯಲಿದ್ದು, ಆ ಬಳಿಕ ಅಂದರೆ ಲೋಕಸಭೆ ಚುನಾವಣೆ ನಂತರ ಈ ವಿವರ ಬಹಿರಂಗಗೊಳ್ಳಬೇಕು ಎಂದು ಬಿಜೆಪಿ ಬಯಸುತ್ತಿದೆ ಎಂದು ಟೀಕಿಸಿದ್ದಾರೆ.

ಅಕ್ರಮ ಚುನಾವಣಾ ಬಾಂಡ್ ಯೋಜನೆಯ ಬಹುದೊಡ್ಡ ಫಲಾನುಭವಿ ಬಿಜೆಪಿಯೇ ಆಗಿದೆ. ಈಗ ಸುಪ್ರೀಂ ಕೋರ್ಟ್‌ ತೀರ್ಪನ್ನು ತುಳಿಯಲು ಮೋದಿ ಸರ್ಕಾರ ಎಸ್‌ಬಿಐ ಅನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ಅವರು, ಇಂಥಹದೊಂದು ಬೆಳವಣಿಗೆಯನ್ನು ತಾನು ಅಂದಾಜು ಮಾಡಿದ್ದಾಗಿ ಹೇಳಿದ್ದಾರೆ. 

ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕರಾಗಿರುವ ಗೌರವ್ ಗೊಗೋಯಿ ಅವರು, ಎಸ್‌ಬಿಐ ಸಲ್ಲಿಸಿರುವ ಮೇಲ್ಮನವಿಯು ಸುಪ್ರೀಂ ಕೋರ್ಟ್‌ ಆದೇಶದ ಉದ್ದೇಶವನ್ನೇ ಹಾಳುಗೆಡವಲಿದೆ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT