ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು: 2 ಪಟಾಕಿ ಘಟಕಗಳಲ್ಲಿ ಸ್ಫೋಟ: 14 ಸಾವು

Published 17 ಅಕ್ಟೋಬರ್ 2023, 16:27 IST
Last Updated 17 ಅಕ್ಟೋಬರ್ 2023, 16:27 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ಎರಡು ಪ್ರತ್ಯೇಕ ಪಟಾಕಿ ಘಟಕಗಳಲ್ಲಿ ಮಂಗಳವಾರ ಹಠಾತ್‌ ಸ್ಫೋಟ ಸಂಭವಿಸಿ ಒಟ್ಟು 14 ಮಂದಿ ಮೃತಪಟ್ಟು ಇತರ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ವಿರುಧುನಗರ ಜಿಲ್ಲೆಯ ಶ್ರೀವಿಲ್ಲಿಪುತ್ತೂರು ಸಮೀಪದ ಪಟಾಕಿ ಘಟಕದಲ್ಲಿ 13 ಹಾಗೂ ಶಿವಕಾಶಿ ಜಿಲ್ಲೆಯ ಕಿಚನಾಯಕನಪಟ್ಟಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ.

ಶ್ರೀವಿಲ್ಲಿಪುತ್ತೂರು ಸಮೀಪದ ಪಟಾಕಿ ಘಟಕದಲ್ಲಿ 15 ಕಾರ್ಮಿಕರು ಪಟಾಕಿಗಳ ಪ್ಯಾಕಿಂಗ್‌ ಕಾರ್ಯದಲ್ಲಿ ತೊಡಗಿದ್ದಾಗ ಸ್ಫೋಟ ಸಂಭವಿಸಿದೆ. ಈ ಅವಘಡದಲ್ಲಿ 13 ಮಂದಿ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿ ಘಟಕದ ಮಾಲೀಕನನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ವಿ.ಪಿ.ಜಯಶೀಲನ್ ತಿಳಿಸಿದ್ದಾರೆ.

ಗಾಯಗೊಂಡವರನ್ನು ಶ್ರೀವಿಲ್ಲಿಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

‘ಕೋಣೆಯೊಂದರಲ್ಲಿ ಪಟಾಕಿಗಳ ದಾಸ್ತಾನು ಮಾಡಲಾಗಿತ್ತು. ಇದಕ್ಕೆ ಪರವಾನಗಿ ಪಡೆದಿರಲಿಲ್ಲ. ಅಲ್ಲದೇ, ಅವಘಡ ಸಂಭವಿಸಿದ ಸ್ಥಳದಲ್ಲಿ ಪ್ಯಾಕಿಂಗ್ ಕೈಗೊಳ್ಳಲು ಕೂಡ ಪರವಾನಗಿ ಹೊಂದಿರಲಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಶಿವಕಾಶಿ ಜಿಲ್ಲೆ ಕಿಚನಾಯಕನಪಟ್ಟಿಯಲ್ಲಿನ ಘಟಕದಲ್ಲಿ ಪಟಾಕಿ ತಯಾರಿಸಲು ರಾಸಾಯನಿಕಗಳನ್ನು ಮಿಶ್ರಣ ಮಾಡುವಾಗ ಸ್ಫೋಟ ಸಂಭವಿಸಿ, ಒಬ್ಬ ಕಾರ್ಮಿಕ ಮೃತಪಟ್ಟಿದ್ದಾನೆ.

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು, ಈ ಅವಘಡಗಳಲ್ಲಿ ಮೃತಪಟ್ಟವರ ಕುಟುಂಬಕ್ಕೆ ₹ 3 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₹ 1 ಲಕ್ಷ ಪರಿಹಾರ ಘೋಷಿಸಿದ್ದಾರೆ. 

ಶಿವಕಾಶಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾವಿರಕ್ಕೂ ಹೆಚ್ಚು ಪಟಾಕಿ ತಯಾರಿಕೆ ಘಟಕಗಳಿವೆ. ದೇಶ‌ದಲ್ಲಿನ ಬೇಡಿಕೆಯ ಶೇ 90ರಷ್ಟು ಪಟಾಕಿಗಳು ಈ ಜಿಲ್ಲೆಯಲ್ಲಿನ ಘಟಕಗಳಿಂದಲೇ ಪೂರೈಕೆಯಾಗುತ್ತವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT