ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಬಾಂಡ್‌: ಚುನಾವಣಾ ವೇಳಾಪಟ್ಟಿ ಪ್ರಕಟಿಸದಂತೆ ಮಾಜಿ ಅಧಿಕಾರಿಗಳು ಪತ್ರ

ಚುನಾವಣಾ ಬಾಂಡ್‌ ಕುರಿತು ಎಸ್‌ಬಿಐ ಮಾಹಿತಿ ನೀಡುವವರಿಗೆ ಚುನಾವಣೆ ಘೋಷಿಸಬೇಡಿ
Published 9 ಮಾರ್ಚ್ 2024, 12:52 IST
Last Updated 9 ಮಾರ್ಚ್ 2024, 12:52 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣಾ ಬಾಂಡ್‌ ಕುರಿತ ವಿವರಗಳನ್ನು ಎಸ್‌ಬಿಐ ಹಂಚಿಕೊಳ್ಳುವವರೆಗೂ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಿಸದಂತೆ 79 ಮಾಜಿ ಅಧಿಕಾರಿಗಳು ಚುನಾವಣಾ ಆಯೋಗಕ್ಕೆ ಶನಿವಾರ ಪತ್ರ ಬರೆದು ಒತ್ತಾಯಿಸಿದ್ದಾರೆ.

ಈ ಕುರಿತ ವಿವರಗಳನ್ನು ಸಲ್ಲಿಸುವುದಕ್ಕೆ ಜೂನ್ 30ರವರೆಗೂ ಸಮಯ ನೀಡಬೇಕು ಎಂದು ಎಸ್‌ಬಿಐ ಸುಪ್ರೀಂ ಕೋರ್ಟ್‌ ಅನ್ನು ಕೋರಿರುವುದು, ಕೆಲ ಶಂಕಾಸ್ಪದ ವ್ಯವಹಾರಗಳನ್ನು ಮರೆ ಮಾಚಲು ಮತ್ತು ಕೇಂದ್ರ ಸರ್ಕಾರವನ್ನು ಟೀಕೆಗಳಿಂದ ರಕ್ಷಿಸಲು ಪ್ರಯತ್ನಿಸಿದಂತಿದೆ ಎಂದು ಮಾಜಿ ಅಧಿಕಾರಿಗಳು ಪತ್ರದಲ್ಲಿ ಹೇಳಿದ್ದಾರೆ.

‘ಕಾನ್‌ಸ್ಟಿಟ್ಯೂಷನಲ್‌ ಕಂಡಕ್ಟ್‌ ಗ್ರೂಪ್‌’ ಹೆಸರಿನಲ್ಲಿ 79 ಮಾಜಿ ಅಧಿಕಾರಿಗಳು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಮತ್ತು ಚುನಾವಣಾ ಆಯುಕ್ತ ಅರುಣ್‌ ಗೋಯಲ್‌ ಅವರಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ, ‘ಈ ಕುರಿತು ಎಸ್‌ಬಿಐ ಅಗತ್ಯ ಮಾಹಿತಿ ಒದಗಿಸುವವರೆಗೂ 2024ರ ಸಾರ್ವತ್ರಿಕ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸುವುದಿಲ್ಲ ಎಂಬುದನ್ನು ಆಯೋಗ ಸ್ಪಷ್ಟಪಡಿಸಬೇಕು’ ಎಂದು ಕೋರಿದ್ದಾರೆ. 

‘ಆಯೋಗ ನಿಷ್ಕ್ರಿಯವಾದರೆ, ಭಾರತೀಯ ಮತದಾರರ ಮಾಹಿತಿ ಹಕ್ಕನ್ನು ಗೌರವಿಸುವ ಮತ್ತು ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಯಬೇಕು ಎಂಬ ಸಂವಿಧಾನದ ಆಶಯಕ್ಕೆ ಧಕ್ಕೆಯಾಗುತ್ತದೆ. ಅಲ್ಲದೆ ಪ್ರಜಾಪ್ರಭುತ್ವ ಸತ್ತಂತಾಗುತ್ತದೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. 

ಶಿವಶಂಕರ್‌ ಮೆನನ್‌, ಜಿ.ಕೆ.ಪಿಳ್ಳೈ, ಮೀರನ್‌ ಸಿ. ಬೋರ್ವಾಂಕರ್‌, ವಜಾಹತ್‌ ಹಬೀಬುಲ್ಲಾ, ಕೆ.ಪಿ.ಫಾಬಿಯನ್‌, ಕೆ.ಸುಜಾತಾ ರಾವ್‌ ಇತರರು ಪತ್ರಕ್ಕೆ ಸಹಿ ಹಾಕಿದ್ದಾರೆ. ನ್ಯಾಯಾಲಯ ಕೇಳಿದ ಮಾಹಿತಿಯನ್ನು 10 ನಿಮಿಷಗಳಲ್ಲಿ ನೀಡಬಹುದು ಎಂದು ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್‌ ಚಂದ್ರ ಗಾರ್ಗ್‌ ಅವರು ನೀಡಿದ್ದ ಹೇಳಿಕೆಯನ್ನೂ ಅಧಿಕಾರಿಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT