ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tunnel Rescue | 17 ದಿನಗಳ ಕಾರ್ಯಾಚರಣೆ: ಕಾರ್ಮಿಕರ ರಕ್ಷಣೆ; ಘಟನಾವಳಿ ಇಲ್ಲಿದೆ

Published 29 ನವೆಂಬರ್ 2023, 0:30 IST
Last Updated 29 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಉತ್ತರಕಾಶಿ: ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರನ್ನು 17 ದಿನಗಳ ರಕ್ಷಣಾ ಕಾರ್ಯಾಚರಣೆ ಬಳಿಕ ಸುರಕ್ಷಿತವಾಗಿ ಹೊರತರಲಾಗಿದೆ. ನ.12 ರಿಂದ ನಡೆದ ರಕ್ಷಣಾ ಕಾರ್ಯಾಚರಣೆಯ ಘಟನಾವಳಿ ಕೆಳಕಂಡಂತಿದೆ.

ನ.12: 

ಉತ್ತರಕಾಶಿಯ ಸಮೀಪದ ಸಿಲ್ಕ್ಯಾರಾ ಮತ್ತು ಬಡಕೋಟ್‌ ನಡುವಣ ಸುರಂಗ ಮಾರ್ಗದಲ್ಲಿ ಬೆಳಿಗ್ಗೆ 5.30ರ ವೇಳೆ ಕುಸಿತ. ಒಳಗೆ ಸಿಲುಕಿದ 41 ಕಾರ್ಮಿಕರನ್ನು ಹೊರತರಲು ಜಿಲ್ಲಾಡಳಿತದಿಂದ ರಕ್ಷಣಾ ಕಾರ್ಯಾಚರಣೆ ಆರಂಭ. 

ನ.13:

ಆಮ್ಲಜನಕ ಪೂರೈಸುವ ಪೈಪ್‌ಲೈನ್‌ ಮೂಲಕ ಕಾರ್ಮಿಕರ ಜತೆ ಸಂಪರ್ಕ ಸಾಧ್ಯ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸ್ಥಳಕ್ಕೆ ಭೇಟಿ. ಕುಸಿತ ಮತ್ತೆ ಮುಂದುವರಿದಿದ್ದರಿಂದ ಅಂದಾಜು 60 ಮೀ. ಉದ್ದದಷ್ಟು ಸುರಂಗ ಮಣ್ಣು–ಕಲ್ಲುಗಳಿಂದ ಮುಚ್ಚಿಹೋಯಿತು.

ನ.14:

ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಬಿಆರ್‌ಒ, ಎನ್‌ಎಚ್‌ಐಡಿಸಿಎಲ್‌ ಮತ್ತು ಐಟಿಬಿಪಿ ಏಜೆನ್ಸಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿ. ಅವಶೇಷಗಳ ನಡುವೆ ರಂಧ್ರ ಕೊರೆದು 800 ಮಿ.ಮೀ. ಮತ್ತು 900 ಮಿ.ಮೀ ವ್ಯಾಸದ ಕೊಳವೆಗಳನ್ನು ಅಳವಡಿಸುವ ಕೆಲಸ ಆರಂಭ.

ನ.15:

ಅವಶೇಷಗಳಡಿ ಸ್ಟೀಲ್ ಪೈಪ್‌ಗಳನ್ನು ತೂರಿಸುವ ಕಾರ್ಯ ಸಣ್ಣ ಯಂತ್ರದ ಮೂಲಕ ನಿಧಾನವಾಗಿ ನಡೆಯುತ್ತಿದ್ದ ಕಾರಣ ಅಮೆರಿಕ ನಿರ್ಮಿತ ಅತ್ಯಾಧುನಿಕ ಯಂತ್ರದ ಬಳಕೆಗೆ ಬೇಡಿಕೆಯಿಟ್ಟ ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಎನ್ಎಚ್ಐಡಿಸಿಎಲ್).

ನ.16: 

ಭಾರತೀಯ ವಾಯುಪಡೆಯ ವಿಮಾನದ ಮೂಲಕ ದೆಹಲಿಯಿಂದ ಉತ್ತರಕಾಶಿಗೆ ಸಾಗಿಸಿದ ಯಂತ್ರದ ಅಳವಡಿಕೆ ಕಾರ್ಯ ಪೂರ್ಣ. ಮಧ್ಯರಾತ್ರಿಯಿಂದ ಕೊರೆಯುವ ಕೆಲಸ ಆರಂಭ. 

ನ.17:

ಹೊಸ ಯಂತ್ರದ ಮೂಲಕ 24 ಮೀ. ಸುರಂಗ ನಿರ್ಮಾಣ. ಆರು ಮೀ. ಉದ್ದದ ನಾಲ್ಕು ಕೊಳವೆಗಳನ್ನು ತೂರಿಸಲು ಯಶಸ್ವಿ. ದೊಡ್ಡ ಗಾತ್ರದ ಕಲ್ಲು ಅಡ್ಡಬಂದ ಕಾರಣ ಐದನೇ ಕೊಳವೆ ತೂರಿಸುವ ಕೆಲಸಕ್ಕೆ ಅಡ್ಡಿ. 

ನ.18, 19:

ಸುರಂಗ ಕೊರೆಯುವ ಯಂತ್ರದಿಂದ ಉಂಟಾಗುವ ಕಂಪನದಿಂದ ಮತ್ತಷ್ಟು ಕುಸಿತ ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದರಿಂದ ರಕ್ಷಣಾ ಕಾರ್ಯಾಚರಣೆ ಸ್ಥಗಿತ. ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ಸುರಂಗದ ಮೇಲ್ಬಾಗದಿಂದ ಲಂಬವಾಗಿ ಕೊರೆಯುವ ಕಾರ್ಯ ಸೇರಿದಂತೆ ಐದು ಯೋಜನೆಗಳನ್ನು ಕಾರ್ಯಗತಗೊಳಿಸಲು ನಿರ್ಧಾರ. ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಲು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಸ್ಥಳಕ್ಕೆ ಭೇಟಿ. 

ನ.20: 

ಕಾರ್ಮಿಕರಿಗೆ ಆಹಾರ ಮತ್ತು ಇನ್ನಿತರ ಅಗತ್ಯ ವಸ್ತುಗಳನ್ನು ತಲುಪಿಸಲು ಆರು ಇಂಚು ವ್ಯಾಸದ ಪೈಪ್‌ ಅಳವಡಿಸುವ ಕಾರ್ಯ ಪೂರ್ಣ. ಉತ್ತರಾಖಂಡ ಮುಖ್ಯಮಂತ್ರಿ ಧಾಮಿ ಅವರಿಗೆ ಕರೆಮಾಡಿ ರಕ್ಷಣಾ ಕಾರ್ಯಾಚರಣೆಯ ಪ್ರಗತಿ ಬಗ್ಗೆ ಮಾಹಿತಿ ಪಡೆದುಕೊಂಡ ಪ್ರಧಾನಿ ನರೇಂದ್ರ ಮೋದಿ. 

ನ.21: 

ಸುರಂಗದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರ ಮೊದಲ ದೃಶ್ಯಾವಳಿ ಲಭ್ಯ. ಸುರಂಗದ ಒಳಕ್ಕೆ ತೂರಿಸಿರುವ ಆರು ಇಂಚು ವ್ಯಾಸದ ಪೈಪ್ ಮೂಲಕ ಕಳುಹಿಸಲಾಗಿದ್ದ ಎಂಡೊಸ್ಕೋಪಿಕ್ ಕ್ಯಾಮೆರಾ ಮೂಲಕ ದೃಶ್ಯಗಳನ್ನು ಸೆರೆಹಿಡಿಯಾಗಿತ್ತು. ಕಾರ್ಮಿಕರ ಸುರಕ್ಷತೆಯ ಬಗ್ಗೆ ಆತಂಕಗೊಂಡಿದ್ದ ಕುಟುಂಬದ ಸದಸ್ಯರು ಮತ್ತು ಸಂಬಂಧಿಗಳಲ್ಲಿ ಮೂಡಿದ ಆಶಾಭಾವನೆ. 

ನ.22:

ಅಡ್ಡವಾಗಿ ಸುರಂಗ ಕೊರೆಯುವ ಕಾರ್ಯ ಮತ್ತೆ ಆರಂಭ. 45 ಮೀ.ವರೆಗೂ ಪೈಪ್‌ಗಳ ಅಳವಡಿಕೆ. ಕಾರ್ಮಿಕರು ಸಿಲುಕಿರುವ ಸ್ಥಳ ತಲುಪಲು ಇನ್ನು 12 ಮೀ. ಕೊರೆಯಬೇಕಿದ್ದಾಗ ಯಂತ್ರಕ್ಕೆ ಕಬ್ಬಿಣದ ರಾಡ್‌ಗಳು ಅಡ್ಡ ಬಂದ ಕಾರಣ ಮೊಟಕುಗೊಂಡ ಕಾರ್ಯಾಚರಣೆ.

ನ.23:

ಕಬ್ಬಿಣದ ರಾಡ್‌ಗಳನ್ನು ತೆರವುಗೊಳಿಸಿದ ಬಳಿಕ ಮುಂದುವರಿದ ಕಾರ್ಯಾಚರಣೆ. ಆದರೆ ಸುರಂಗ ಕೊರೆಯುವ ಯಂತ್ರ ಇರಿಸಿದ್ದ ಜಾಗದಲ್ಲಿ ಬಿರುಕು ಮೂಡಿದ್ದರಿಂದ ಮತ್ತೆ ಅಡ್ಡಿ.

ನ.24:

25 ಟನ್‌ ತೂಕದ ಯಂತ್ರವನ್ನು ಮತ್ತೆ ಸ್ವಸ್ಥಾನದಲ್ಲಿರಿಸಿ ಕಾರ್ಯಾಚರಣೆ ಮುಂದುವರಿಸಿದರೂ ಸುರಂಗ ಕೊರೆಯುವ ಯಂತ್ರದ ಬ್ಲೇಡ್‌ಗಳು ಪೈಪ್‌ಗೆ ಬಡಿದ ಕಾರಣ ಕಾರ್ಯಾಚರಣೆ ಸ್ಥಗಿತ. 

ನ.25, 26:

ಅವಶೇಷಗಳಡಿ ಸಿಲುಕಿಕೊಂಡ ಯಂತ್ರದ ಬ್ಲೇಡ್‌ ಹಾಗೂ ಇತರ ಭಾಗಗಳನ್ನು ಪ್ಲಾಸ್ಮಾ ಕಟರ್‌ ಬಳಸಿ ಹೊರ ತೆಗೆಯುವಲ್ಲಿ ಯಶಸ್ವಿ. ಲಂಬವಾಗಿ ಸುರಂಗ ಕೊರೆಯುವ ಕಾರ್ಯ ಆರಂಭ. 

ನ.27:

ಯಂತ್ರಗಳನ್ನು ಬದಿಗಿಟ್ಟು ‘ರ‍್ಯಾಟ್‌ ಹೋಲ್‌ ಮೈನಿಂಗ್’ ತಂತ್ರದ ಮೂಲಕ ಸುರಂಗ ಕೊರೆಯುವ ಕೆಲಸ ಮುಂದುವರಿಕೆ. 12 ಕಾರ್ಮಿಕರು ಈ ಕಾರ್ಯಾಚರಣೆಯಲ್ಲಿ ಭಾಗಿ. ಲಂಬವಾಗಿ ಅಂದಾಜು 36 ಮೀ. ಸುರಂಗ ಕೊರೆಯುವ ಕೆಲಸ ಪೂರ್ಣ.

ನ.28: 

ರಕ್ಷಣಾ ಕಾರ್ಯಾಚರಣೆಗೆ ತೆರೆ. ರಾತ್ರಿ 7ರ ವೇಳೆಗೆ ಕಾರ್ಮಿಕರು ಸಿಲುಕಿರುವ ಸ್ಥಳ ತಲುಪಿದ ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ಸಿಬ್ಬಂದಿ. 41 ಕಾರ್ಮಿಕರನ್ನು ಹೊರತರುವಲ್ಲಿ ಯಶಸ್ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT