ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಬಾಂಡ್: ಚುನಾವಣಾ ಆಯೋಗಕ್ಕೆ ಬಗೆಬಗೆಯ ಉತ್ತರ

Published 19 ಮಾರ್ಚ್ 2024, 23:30 IST
Last Updated 19 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣಾ ಬಾಂಡ್‌ಗಳ ವಿವರ ನೀಡುವಂತೆ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಮಾಡಿರುವ ಮನವಿಗೆ ಪ್ರತಿಯಾಗಿ ಬಗೆಬಗೆಯ ಉತ್ತರಗಳು ಬರುತ್ತಿವೆ. ಕೆಲವು ಸಂದರ್ಭಗಳಲ್ಲಿ ಕೇಳದೆ ಇರುವ ಪ್ರಶ್ನೆಗಳಿಗೂ ಉತ್ತರ ಬರುತ್ತಿದೆ.

ಪಕ್ಷವೊಂದು ತನ್ನ ನೋಂದಣಿ ರದ್ದುಪಡಿಸುವಂತೆ ಕೋರಿದೆ, ಇನ್ನೊಂದು ಪಕ್ಷವು ತನ್ನ ಮುಖ್ಯಸ್ಥ ಪ್ರತಿ ಮೂರು ತಿಂಗಳಿಗೊ‌ಮ್ಮೆ ₹500ನ್ನು ಪಕ್ಷದ ನಿಧಿಗೆ ಖುದ್ದಾಗಿ ನೀಡುತ್ತಿದ್ದಾರೆ ಎಂದು ಹೇಳಿದೆ.

ಚುನಾವಣಾ ಬಾಂಡ್ ಮೂಲಕ ಹಣ ಪಡೆದುಕೊಳ್ಳದೆ ಇರುವುದಕ್ಕೆ ಕಾರಣ ಏನು ಎಂಬುದನ್ನು ಕೆಲವು ಪಕ್ಷಗಳು ಆಯೋಗಕ್ಕೆ ತಿಳಿಸಿವೆ. ಇನ್ನು ಕೆಲವು ಪಕ್ಷಗಳು ಮಾಹಿತಿ ನೀಡಲು ತಮ್ಮಿಂದ ಆಗುತ್ತಿಲ್ಲ ಎಂದು ತಿಳಿಸಿವೆ.

ತಾನು ಹೊಸ ಪಕ್ಷ, ಚುನಾವಣೆಯಲ್ಲಿ ತಾನು ಮತ ಗಳಿಸಿಲ್ಲದ ಕಾರಣ ಹಂಚಿಕೊಳ್ಳಲು ತನ್ನಲ್ಲಿ ಯಾವ ವಿವರವೂ ಇಲ್ಲ ಎಂದು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ ಹೇಳಿದೆ. ಸರ್ವಜನ ಲೋಕಶಕ್ತಿ ಪಕ್ಷವು ತಾನು ಇದುವರೆಗೆ ದೇಣಿಗೆ ಸ್ವೀಕರಿಸಿಲ್ಲ ಎಂದು ತಿಳಿಸಿದೆ.

ಹತಾಶೆಯನ್ನು ತೋಡಿಕೊಂಡಿರುವ ಭಾರತ್ ಕಾ ಕಿಸಾನ್ ಮಜ್ದೂರ್ ಪಕ್ಷವು, ತನಗೆ ಉದ್ಯಮಿಗಳಿಂದಾಗಲಿ ಬಂಡವಾಳಶಾಹಿಗಳಿಂದಾಗಲಿ ಬೆಂಬಲ ಇಲ್ಲ ಎಂದು ಹೇಳಿದೆ. ಹೀಗಾಗಿ ಚುನಾವಣಾ ಬಾಂಡ್ ಮೂಲಕ ತನಗೆ ಹಣ ಬಂದಿಲ್ಲ ಎಂದು ತಿಳಿಸಿದೆ.

ತಮಿಳುನಾಡು ಮೂಲದ ತಮಿಳರ್ ದೇಶಿಯ ಮುನ್ನಾಣಿ ಪಕ್ಷವು ತನ್ನ ನಾಯಕರಿಗೆ ಆರೋಗ್ಯ ಸರಿ ಇಲ್ಲದ ಕಾರಣ ನಿಗದಿತ ಅವಧಿಯೊಳಗೆ ಮಾಹಿತಿ ನೀಡಲು ಆಗುತ್ತಿಲ್ಲ ಎಂದು ತಿಳಿಸಿದೆ. ಅಲ್ಲದೆ, 2023ರ ಸೆಪ್ಟೆಂಬರ್ 30ರವರೆಗೆ ತಾನು ಬಾಂಡ್ ಮೂಲಕ ದೇಣಿಗೆ ಪಡೆದಿಲ್ಲ ಎಂಬುದನ್ನೂ ತಿಳಿಸಿದೆ.

ಎಂಎನ್‌ಕೆ ಪಕ್ಷವು ತನ್ನ ಅಧ್ಯಕ್ಷ ಎಸ್. ಸತ್ಯಮೂರ್ತಿ ಅವರು ಪ್ರತಿ ಮೂರು ತಿಂಗಳಿಗೆ ಒಮ್ಮೆ ₹500ನ್ನು ಪಕ್ಷದ ನಿಧಿಗೆ ನೀಡುತ್ತಾರೆ ಎಂದು ಹೇಳಿದೆ. ಪಕ್ಷದ ವಿಸರ್ಜನೆಗೆ ಈಗಾಗಲೇ ನಿರ್ಣಯ ಕೈಗೊಂಡಿರುವ ಕನ್ನಡನಾಡು ಪಕ್ಷವು ತನಗೆ ನೀಡಿರುವ ಮಾನ್ಯತೆಯನ್ನು ಹಿಂಪಡೆಯಬೇಕು ಎಂದು ಆಯೋಗವನ್ನು ಕೋರಿದೆ.

ಆಸ್ರಾ ಲೋಕಮಂಚ ಪಕ್ಷ, ಭಾರತೀಯ ಸಾರ್ಥಕ ಪಕ್ಷ, ರಾಷ್ಟ್ರೀಯ ಭ್ರಷ್ಟಾಚಾರ ಮುಕ್ತಿ ಪಕ್ಷ ತಾವು ಚುನಾವಣಾ ಬಾಂಡ್ ಮೂಲಕ ದೇಣಿಗೆ ಪಡೆಯುವ ಅರ್ಹತೆ ಹೊಂದಿಲ್ಲ ಎಂಬುದನ್ನು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT