ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡೋದರಾದಲ್ಲಿ ಕಣ್ಣಿಗೆ ಬೀಳುವಂತಿಲ್ಲ ಮೀನು, ಮೊಟ್ಟೆ, ಮಾಂಸದ ಖಾದ್ಯಗಳು: ವರದಿ

Last Updated 12 ನವೆಂಬರ್ 2021, 10:15 IST
ಅಕ್ಷರ ಗಾತ್ರ

ವಡೋದರಾ: ಎಲ್ಲರಿಗೂ ಕಾಣುವಂತೆ ಮಾಂಸಾಹಾರ ಖಾದ್ಯಗಳನ್ನು ಮಾರಾಟ ಮಾಡದಂತೆ ಗುಜರಾತ್‌ನ ವಡೋದರಾದಲ್ಲಿ ಮೌಖಿಕ ಸೂಚನೆ ಹೊರಡಿಸಲಾಗಿದೆ. ಮಾಂಸದಿಂದ ತಯಾರಿಸಿರುವ ತಿಂಡಿ, ತಿನಿಸುಗಳನ್ನು ಗಾಡಿಗಳಲ್ಲಿ ಹಾಗೂ ಆಹಾರ ಮಳಿಗೆಗಳಲ್ಲಿ ಎಲ್ಲರಿಗೂ ಕಾಣುವಂತೆ ಇಡುವಂತಿಲ್ಲ. ಅಂತಹ ಖಾದ್ಯಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚಿರಬೇಕು. ಈ ಕ್ರಮವು ಮೊಟ್ಟೆಯಿಂದ ತಯಾರಿಸಿರುವ ಆಹಾರಗಳಿಗೂ ಅನ್ವಯಿಸುವುದಾಗಿ ವರದಿಯಾಗಿದೆ.

ವಡೋದರಾ ಮುನ್ಸಿಪಲ್‌ ಕಾರ್ಪೊರೇಷನ್‌ ಸ್ಥಾಯಿ ಸಮಿತಿಯ ಮುಖ್ಯಸ್ಥ ಹಿತೇಂದ್ರ ಪಟೇಲ್‌ ಅವರು ಮಾಂಸಾಹಾರ ಮಾರಾಟದ ಸಂಬಂಧ ಮೌಖಿಕ ಸೂಚನೆ ನೀಡಿದ್ದಾರೆ. 'ಮೀನು, ಮಾಂಸ ಮತ್ತು ಮೊಟ್ಟೆಯಿಂದ ತಯಾರಿಸಿದ ಖಾದ್ಯಗಳನ್ನು ಮಾರಾಟ ಮಾಡುವ ತಿಂಡಿ ಗಾಡಿಗಳು, ಮಳಿಗೆಗಳಲ್ಲಿ ಆಹಾರವನ್ನು ಸ್ವಚ್ಛತೆ ದೃಷ್ಟಿಯಿಂದಾಗಿ ಸೂಕ್ತ ರೀತಿಯಲ್ಲಿ ಮುಚ್ಚಿರಬೇಕು. ಮುಖ್ಯ ರಸ್ತೆಗಳಲ್ಲಿ ಅಂಥ ಗಾಡಿಗಳನ್ನು ತೆಗೆಸಬೇಕು' ಎಂದು ಹಿತೇಂದ್ರ ಸೂಚಿಸಿರುವುದಾಗಿ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿವೆ.

ಗುಜರಾತ್‌ನ ರಾಜ್‌ಕೋಟ್‌ನ ಮೇಯರ್‌ ಇತ್ತೀಚೆಗಷ್ಟೇ ಮಾಂಸದಿಂದ ತಯಾರಿಸಿದ ತಿನಿಸುಗಳ ಮಾರಾಟದ ಕುರಿತು ಸೂಚನೆ ಹೊರಡಿಸಿದ್ದರು. ಮುಖ್ಯ ರಸ್ತೆಗಳಿಂದ ದೂರ, ನಿಗದಿತ ವಲಯಗಳಲ್ಲಿ ಮಾತ್ರವೇ ಮಾಂಸಾಹಾರ ಮಾರಾಟ ಮಾಡುವಂತೆ ಸೂಚಿಸಲಾಗಿತ್ತು. ಅದರ ಬೆನ್ನಲ್ಲೇ ವಡೋದರಾದಿಂದಲೂ ಹೊಸ ಸೂಚನೆ ಹೊರಬಂದಿದೆ.

'ಹಲವು ವರ್ಷಗಳಿಂದ ತೆರೆದ ರೀತಿಯಲ್ಲೇ ಮಾಂಸಾಹಾರ ಮಾರಾಟ ಮಾಡಲಾಗುತ್ತಿದೆ. ಈಗ ಅದನ್ನು ಸರಿಪಡಿಸಿಕೊಳ್ಳುವ ಸಮಯ ಬಂದಿದೆ. ರಸ್ತೆಗಳಲ್ಲಿ ಓಡಾಡುವಾಗ ಮಾಂಸದ ಪದಾರ್ಥಗಳು ಸಾರ್ವಜನಿಕವಾಗಿ ಕಣ್ಣಿಗೆ ಬೀಳುವಂತೆ ಇರಬಾರದು, ಅವು ನಮ್ಮ ಧಾರ್ಮಿಕ ಭಾವನೆಗಳಿಗೂ ಸಂಬಂಧಿಸಿದಾಗಿದೆ,...' ಎಂದು ಹಿತೇಂದ್ರ ಪಟೇಲ್‌ ಹೇಳಿರುವುದಾಗಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT