ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೆಹಲಿ ಚಲೋ’ ಬೆನ್ನಲ್ಲೇ ಬೆಳೆ ಸಾಲದ ಮೇಲಿನ ಬಡ್ಡಿ ಮನ್ನಾ ಘೋಷಿಸಿದ ಹರಿಯಾಣ ಸಿಎಂ

Published 23 ಫೆಬ್ರುವರಿ 2024, 11:10 IST
Last Updated 23 ಫೆಬ್ರುವರಿ 2024, 11:10 IST
ಅಕ್ಷರ ಗಾತ್ರ

ಚಂಡೀಗಢ: ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆ ಮತ್ತು ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ‘ದೆಹಲಿ ಚಲೋ’ ಪ್ರತಿಭಟನೆ ಕೈಗೊಂಡಿರುವ ಬೆನ್ನಲ್ಲೇ ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್ ಅವರು ಇಂದು (ಶುಕ್ರವಾರ) ಬೆಳೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ.

ಇಂದು ಹರಿಯಾಣ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ ಅವರು, ‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ (ಪಿಎಸಿಎಸ್) ರೈತರು ಪಡೆದಿರುವ ಬೆಳೆ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.

ಎಂಎಫ್‌ಎಂಬಿನಲ್ಲಿ (ಮೇರಿ ಫಸಲ್ ಮೇರಾ ಬಯೋರಾ) ನೋಂದಾಯಿಸಿರುವ ರೈತರು 2023ರ ಸೆಪ್ಟೆಂಬರ್ 30ವರೆಗೆ ಬೆಳೆ ಸಾಲವನ್ನು ಪಡೆದಿದ್ದು, 2024ರ ಮೇ 31ರೊಳಗೆ ಮೂಲ ಮೊತ್ತವನ್ನು ಪಾವತಿಸಿದರೆ ಅಂತಹ ರೈತರ ಬೆಳೆ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

‘ನಮ್ಮ ಸರ್ಕಾರ ರೈತರ ಕಲ್ಯಾಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. ಅದರಂತೆ 14 ಪ್ರಮುಖ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡಲಾಗುತ್ತಿದೆ’ ಎಂದು ಪ್ರತಿಪಾದಿಸಿದರು.

ಇದೇ ವೇಳೆ ಕರ್ತವ್ಯದ ವೇಳೆ ಮೃತಪಟ್ಟ ಸೈನಿಕರ ಕುಟುಂಬಸ್ಥರಿಗೆ ನೀಡುವ ಪರಿಹಾರದ ಮೊತ್ತವನ್ನು ₹1 ಕೋಟಿಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.

‘2023-24ನೇ ಸಾಲಿನಲ್ಲಿ ₹1,70,490.84 ಕೋಟಿ ಮೊತ್ತದ ಬಜೆಟ್‌ ಅನ್ನು ಮಂಡಿಸಲಿದ್ದೇನೆ. 2024-25ನೇ ಸಾಲಿನಲ್ಲಿ ₹1,89,876.61 ಕೋಟಿ ಮೊತ್ತದ ಬಜೆಟ್ ಅನ್ನು ಮಂಡಿಸಲಿದ್ದೇನೆ. ಇದು ಈ ಬಾರಿಯ ಬಜೆಟ್‌ ಮೊತ್ತಗಿಂತ ಶೇ 11.37ರಷ್ಟು ಹೆಚ್ಚಿರಲಿದೆ’ ಎಂದು ಖಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ನಾನೊಬ್ಬ ರೈತನ ಮಗನಾಗಿದ್ದೇನೆ. ರೈತರ ನೋವು ನನಗೂ ಅರ್ಥವಾಗುತ್ತದೆ. ರೈತರ ಪರವಾಗಿ ಯೋಜನೆ ಘೋಷಣೆ ಮಾಡಿರುವುದು ವಿರೋಧ ಪಕ್ಷದವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ’ ಎಂದು ಖಟ್ಟರ್ ಗುಡುಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT