ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದಲ್ಲಿ ಭಾರತೀಯ ಯುವಕರ ಒತ್ತೆ: ಕೇಂದ್ರದ ವಿರುದ್ಧ ಕಾಂಗ್ರೆಸ್‌ ಕಿಡಿ

Published 1 ಮಾರ್ಚ್ 2024, 14:07 IST
Last Updated 1 ಮಾರ್ಚ್ 2024, 14:07 IST
ಅಕ್ಷರ ಗಾತ್ರ

ನವದೆಹಲಿ: ರಷ್ಯಾದ ಸೇನೆಯಲ್ಲಿ 20 ಭಾರತೀಯರು ಸಹಾಯಕ ಸಿಬ್ಬಂದಿಯಾಗಿ ಒತ್ತೆಯಾಳುಗಳ ರೀತಿ ಕೆಲಸ ಮಾಡುತ್ತಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದೆ.

ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದೊಂದಿಗೆ ‘ಮೃತ ಕಾಲ’ ಮತ್ತೆ ಮೇಲುಗೈ ಸಾಧಿಸಿದೆ. ಇದರಿಂದಾಗಿ ಅನ್ಯದಾರಿ ಇಲ್ಲದೆ, ಭಾರತೀಯ ಯುವಕರು ಅಲ್ಲಿ ಒತ್ತೆಯಾಳುಗಳಾಗಿ ದುಡಿಯುತ್ತಿದ್ದಾರೆ ಎಂದು ಅದು ಆರೋಪಿಸಿದೆ.  

ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್, ‘ರಷ್ಯಾದಲ್ಲಿ ಭಾರತೀಯರನ್ನು ಒತ್ತೆಯಾಳುಗಳಾಗಿ ಇರಿಸಲಾಗಿದೆ. ಅಲ್ಲಿ ನಾಗರಿಕ ಕೆಲಸ ಮಾಡುತ್ತಿದ್ದ ಗುಜರಾತ್‌ನ ಒಬ್ಬ ವ್ಯಕ್ತಿಯ ಹತ್ಯೆಯಾಗಿದೆ. ಆತನ ಸಾವಿನ ಬಗ್ಗೆ ಸರ್ಕಾರ ಯಾಕೆ ಬಾಯಿಬಿಡುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ದೇಶದ ಯುವಕರು ತಮ್ಮ ದೇಶಕ್ಕಾಗಿ ಹುತಾತ್ಮರಾದರೆ ಅದು ದೇಶಪ್ರೇಮ. ಆದರೆ, ಭಾರತೀಯ ಯುವಕರು ಬೇರೆ ದೇಶಕ್ಕಾಗಿ ಹೋರಾಡಲು ಏಕೆ ಹೋಗಬೇಕು? ದೇಶದಲ್ಲಿ ಯುವಕರ ಭವಿಷ್ಯದ ಜತೆ ಆಟವಾಡುತ್ತಿರುವುದರಿಂದ ಈ ಪರಿಸ್ಥಿತಿ ಬಂದಿದೆ. ದೇಶದಲ್ಲಿ ನಿರುದ್ಯೋಗ ದರ ಕಳೆದ 10 ವರ್ಷಗಳಲ್ಲಿ ದ್ವಿಗುಣವಾಗಿದೆ. ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಲಕ್ಷಗಟ್ಟಲೆ ಹುದ್ದೆಗಳು ಖಾಲಿ ಇವೆ. ಸರ್ಕಾರಿ ವಲಯಗಳ ಸ್ಥಿತಿಯೂ ತೀರಾ ಹದಗೆಟ್ಟಿದೆ’ ಎಂದು ಕನ್ಹಯ್ಯಾ ಆರೋಪಿಸಿದರು.

‘ದೇಶದಲ್ಲಿ ಯುವಕರಿಗೆ ‘ಮೃತ ಕಾಲ’ (ವಿನಾಶಕಾರಿ ಸಮಯ) ಇರುವುದರಿಂದ ಭಾರತೀಯ ಯುವಕರನ್ನು ರಷ್ಯಾದಲ್ಲಿ ಒತ್ತೆಯಾಳಾಗಿ ಇರಿಸಲಾಗಿದೆ. ಮೋದಿ ಸರ್ಕಾರವು ಪ್ರತಿ ವರ್ಷ 2 ಕೋಟಿ ಉದ್ಯೋಗಗಳನ್ನು ನೀಡಿದ್ದರೆ, ಯುವಕರು ಉದ್ಯೋಗ ಅರಸಿ ವಿದೇಶಕ್ಕೆ ಹೋಗಬೇಕಾಗಿರಲಿಲ್ಲ’ ಎಂದು ಕನ್ಹಯ್ಯಾ ಟೀಕಿಸಿದ್ದಾರೆ.

‘ರಷ್ಯಾದಲ್ಲಿ ಕಾಯಂ ಸೇನೆ ಇಲ್ಲ. ಅದೇ ಮಾದರಿಯ ‘ಅಗ್ನಿವೀರ್’ ಅನ್ನು ದೇಶಕ್ಕೆ ಪರಿಚಯಿಸಿ, ಗುತ್ತಿಗೆ ಮೇಲೆ ಸೈನಿಕರನ್ನು ನೇಮಕ ಮಾಡಲಾಗುತ್ತಿದೆ. ನಿರುದ್ಯೋಗದಿಂದಾಗಿ ದೇಶದಲ್ಲಿ ಪ್ರತಿ ಗಂಟೆಗೆ ಇಬ್ಬರು ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೇಶದ ಯುವಕರ ಅಸಹಾಯಕತೆಯ ಲಾಭ ಪಡೆದು ಇಸ್ರೇಲ್‌ಗೆ ಕೂಲಿ ಕೆಲಸಕ್ಕೆ ಕಳುಹಿಸಲಾಗಿದೆ. ಯುವಕರ ಬದುಕಿನೊಂದಿಗೆ ಆಟವಾಡಲಾಗುತ್ತಿದೆ’ ಎಂದು ಅವರು ಆರೋಪಿಸಿದರು.

ಭಾರತದಲ್ಲಿ ನಿರುದ್ಯೋಗ ಪರಿಸ್ಥಿತಿ ಎಷ್ಟೊಂದು ಭೀಕರವಾಗಿದೆಯೆಂದರೆ ಯುವಕರು ವಿದೇಶಗಳಲ್ಲಿ ಸೈನಿಕ ಕೆಲಸ ಅರಸುವ ಸ್ಥಿತಿಗೆ ತಲುಪಿದ್ದಾರೆ. ಇಸ್ರೇಲ್ ಮತ್ತು ರಷ್ಯಾದಲ್ಲಿ ಭಾರತೀಯ ಯುವಕರು ತಮ್ಮ ಪ್ರಾಣ ಪಣಕ್ಕಿಡುತ್ತಿದ್ದಾರೆ
ಜೈರಾಮ್ ರಮೇಶ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT