ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ: ದೇಶದ ಮೊದಲ ನೀರೊಳಗಿನ ಮೆಟ್ರೊ ಸುರಂಗ ಮಾರ್ಗ ಉದ್ಘಾಟಿಸಲಿರುವ ಮೋದಿ

Published 5 ಮಾರ್ಚ್ 2024, 11:00 IST
Last Updated 5 ಮಾರ್ಚ್ 2024, 11:00 IST
ಅಕ್ಷರ ಗಾತ್ರ

ನವದೆಹಲಿ: ಕೋಲ್ಕತ್ತದಲ್ಲಿ ದೇಶದ ಮೊದಲ ನೀರೊಳಗಿನ ಮೆಟ್ರೊ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಬುಧವಾರ) ಉದ್ಘಾಟಿಸಲಿದ್ದಾರೆ.

‘ನಾವು ನದಿಪಾತ್ರದಿಂದ 16 ಮೀಟರ್ ಒಳಗೆ ಪ್ರಯಾಣಿಸುತ್ತೇವೆ. ಇದು ಅದ್ಭುತ ಅನುಭವ ನೀಡಲಿದೆ. ಈ ಮಾರ್ಗದಲ್ಲಿ ಪ್ರತಿನಿತ್ಯ 7 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇದೆ’ ಎಂದು ಕೋಲ್ಕತ್ತ ಮೆಟ್ರೊ ರೈಲು ನಿಗಮದ ಜನರಲ್ ಮ್ಯಾನೇಜರ್ ಉದಯ್ ಕುಮಾರ್ ರೆಡ್ಡಿ ಹೇಳಿದ್ದಾರೆ.

ಪೂರ್ವ ಪಶ್ಚಿಮ ಮೆಟ್ರೊ ಕಾರಿಡಾರ್‌ನ ಭಾಗವಾಗಿ ಸುಮಾರು ₹120 ಕೋಟಿ ವೆಚ್ಚದಲ್ಲಿ ಪಶ್ಚಿಮ ಬಂಗಾಳದ ಹೂಗ್ಲಿ ನದಿಯ ಅಡಿಯಲ್ಲಿ ಭಾರತದ ಮೊದಲ ನೀರೊಳಗಿನ ಸುರಂಗ ಮಾರ್ಗವನ್ನು ನಿರ್ಮಿಸಲಾಗಿದೆ. ನೀರೊಳಗಿನ 520 ಮೀಟರ್ ಉದ್ಧದ ಈ ಮಾರ್ಗವನ್ನು ಪ್ರಯಾಣಿಕರು ಕಣ್ಣುರೆಪ್ಪೆ ಮುಚ್ಚಿ ತೆಗೆಯುವುದರೊಳಗೆ ಅಂದರೆ ಕೇವಲ 45 ಸೆಕೆಂಡುಗಳಲ್ಲಿ ಮೆಟ್ರೊ ರೈಲು ದಾಟಿ ಹೋಗಲಿದೆ.

ಈ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇತ್ತೀಚೆಗೆ ತಿಳಿಸಿದ್ದರು.

ಯುರೋಸ್ಟಾರ್‌ನ ಲಂಡನ್-ಪ್ಯಾರಿಸ್ ಕಾರಿಡಾರ್‌ನ ರೀತಿಯೇ ಭಾರತದ ಈ ಸುರಂಗ ಮಾರ್ಗವು ನದಿಪಾತ್ರದಿಂದ 16 ಮೀಟರ್ ಕೆಳಗೆ ಮತ್ತು ನೆಲದ ಮಟ್ಟದಿಂದ 33 ಮೀಟರ್ ಕೆಳಗೆ ನಿರ್ಮಾಣವಾಗಿದೆ. ಕೋಲ್ಕತ್ತದ ಪೂರ್ವದಲ್ಲಿ ಸಾಲ್ಟ್ ಲೇಕ್ ಸೆಕ್ಟರ್‌ನ ಐಟಿ ತಾಣದಿಂದ ಪಶ್ಚಿಮದಲ್ಲಿ ಹೌರಾ ಮೈದಾನದವರೆಗೆ 520 ಮೀಟರ್ ಉದ್ದದ ಸುರಂಗವು ನದಿಗೆ ಅಡ್ಡಲಾಗಿ ಹಾದುಹೋಗಿದೆ.

‘ಸುರಂಗದ ನಿರ್ಮಾಣವು ಪೂರ್ಣಗೊಂಡಿದೆ. ಪೂರ್ವ ಪಶ್ಚಿಮ ಕಾರಿಡಾರ್‌ಗೆ ಈ ಸುರಂಗವು ಅತ್ಯಗತ್ಯ ಮತ್ತು ಪ್ರಮುಖವಾದುದು. ಹೌರಾ ಮತ್ತು ಸೀಲ್ದಾ ನಡುವಿನ ಈ ಮೆಟ್ರೊ ಮಾರ್ಗವು ರಸ್ತೆಯ ಮೂಲಕ ಸಂಚರಿಸಬೇಕಿದ್ದ ಒಂದೂವರೆ ಗಂಟೆಗಳ ಪ್ರಯಾಣದ ಸಮಯವನ್ನು 40 ನಿಮಿಷಗಳಿಗೆ ಇಳಿಸಿದೆ. ಇದು ಎರಡೂ ಕಡೆಗಳಲ್ಲಿ ದಟ್ಟಣೆಯನ್ನು ಸಹ ತಗ್ಗಿಸಲಿದೆ’ ಎಂದು ಕೋಲ್ಕತ್ತ ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ (ಸಿವಿಲ್) ಶೈಲೇಶ್ ಕುಮಾರ್ ಹೇಳಿದ್ದಾರೆ.

ಮೆಟ್ರೊ ರೈಲಿನ ಪೂರ್ವ ಪಶ್ಚಿಮ ಕಾರಿಡಾರ್ ವಿಳಂಬದಿಂದಾಗಿ ವೆಚ್ಚವು ಹೆಚ್ಚಳವಾಗಿದೆ. ₹4,875 ಕೋಟಿ ವೆಚ್ಚದ ಈ ಯೋಜನೆಗೆ 2009ರಲ್ಲಿ ಅನುಮೋದನೆ ನೀಡಲಾಗಿತ್ತು. 2015ರ ಆಗಸ್ಟ್‌ನಲ್ಲಿ ಪೂರ್ಣವಾಗಬೇಕಿತ್ತು. ಕಾಲಮಿತಿಯಲ್ಲಿ ಮುಗಿಯದೆ, ವೆಚ್ಚವು ಈಗ ₹8,475 ಕೋಟಿಗೆ ಏರಿದೆ. ಇದರಲ್ಲಿ ಈಗಾಗಲೇ ₹8,383 ಕೋಟಿ ಖರ್ಚಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT