ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಕಲಾಪಕ್ಕೆ ಕನ್ನಡದ ಸೊಗಡು

Published 5 ಡಿಸೆಂಬರ್ 2023, 16:19 IST
Last Updated 5 ಡಿಸೆಂಬರ್ 2023, 16:19 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಯ ಅಧಿವೇಶನದಲ್ಲಿ ಇನ್ನು ಮುಂದೆ ಕನ್ನಡದ ಕಂಪು ಇನ್ನಷ್ಟು ಇರಲಿದೆ. ಲೋಕಸಭೆಯ ಪ್ರತಿಯೊಂದು ಕಾರ್ಯಕಲಾಪವು ಕನ್ನಡ ಸೇರಿದಂತೆ 21 ಭಾಷೆಗಳಿಗೆ ಭಾಷಾಂತರಗೊಳ್ಳಲಿದೆ.

ಸಂಸತ್ತಿನ ಪೂರ್ಣ ಕಾರ್ಯಕಲಾಪಗಳನ್ನು ಭಾರತೀಯ ಭಾಷೆಗಳಲ್ಲಿ ಭಾಷಾಂತರ ಮಾಡಿಸುವ ಸಲುವಾಗಿ ಹೊಸ ಸಂಸತ್ ಭವನದಲ್ಲಿ ವ್ಯವಸ್ಥೆ ಮಾಡಲಾಗಿದ್ದು ಅದಕ್ಕಾಗಿ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಿರುವ ಎಲ್ಲ ಭಾಷೆಗಳಲ್ಲೂ ತಲಾ ಐದು ಕನ್ಸಲ್ಟಂಟ್ ಹುದ್ದೆಗಳನ್ನು ಸೃಜಿಸಲಾಗಿದೆ. ಕೊಂಕಣಿ, ಮೈಥಿಲಿ, ಸಂಸ್ಕೃತ ಸೇರಿದಂತೆ ಹಲವು ಭಾಷೆಗಳ 64 ಭಾಷಾಂತರಕಾರರಿಗೆ ಈ ವರ್ಷದ ಜೂನ್‌–ಜುಲೈ ತಿಂಗಳಲ್ಲಿ ತರಬೇತಿ ನೀಡಲಾಗಿದೆ. ಈ ಪೈಕಿ, ಕನ್ನಡ, ತಮಿಳು, ತೆಲುಗು, ಗುಜರಾತ್‌ ಸೇರಿದಂತೆ 10 ಭಾಷೆಗಳಿಗೆ ಕಾರ್ಯಕಲಾಪವು ಮುಂದಿನ ಸೋಮವಾರದಿಂದ ಭಾಷಾಂತರಗೊಳ್ಳಲಿದೆ. ಇದಲ್ಲದೆ, ಲೋಕಸಭೆಯ ಕಾರ್ಯಕಲಾಪ ಪಟ್ಟಿಯು ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಮುದ್ರಣಗೊಳ್ಳುತ್ತಿತ್ತು. ಇದೀಗ, ಕನ್ನಡದಲ್ಲಿ ಕಾರ್ಯಕಲಾಪ ಪಟ್ಟಿ ಮುದ್ರಣಗೊಳ್ಳುತ್ತಿದೆ.

1967ರಲ್ಲಿ ಸಂಸತ್ತಿನಲ್ಲಿ ಕನ್ನಡದಲ್ಲಿ ಮೊದಲ ಬಾರಿಗೆ ಮಾತನಾಡಿದ  ಜೆ. ಎಚ್. ಪಟೇಲ್ ಅವರು ಪ್ರಾದೇಶಿಕ ಭಾಷೆಗಳಲ್ಲಿ ಮಾತನಾಡುವ ಪ್ರವೃತ್ತಿಗೆ ಮೇಲ್ಪಂಕ್ತಿ ಹಾಕಿಕೊಟ್ಟರು. ಅವರು ಅಂದು ಹಠಕ್ಕೆ ಬಿದ್ದು ಕನ್ನಡದಲ್ಲಿ ಮಾತನಾಡಿದ್ದು ಇಂದು  21 ಭಾಷೆಗಳಲ್ಲೂ ನಿರಂತರವಾಗಿ ಭಾಷಾಂತರ ವ್ಯವಸ್ಥೆ ಜಾರಿಗೆ ಬರಲು ಮುನ್ನುಡಿ ಬರೆದಂತಾಗಿದೆ.

ಪ್ರಸ್ತುತ ಜಾರಿಯಲ್ಲಿರುವ ಭಾಷಾಂತರ ವ್ಯವಸ್ಥೆಯು ಏಕಮುಖವಾಗಿತ್ತು. ಅಂದರೆ ಕರ್ನಾಟಕದ ಸಂಸದರು ಕನ್ನಡದಲ್ಲಿ ಮಾತನಾಡಿದಾಗ ಅದನ್ನು ಇಂಗ್ಲಿಷ್ ಅಥವಾ ಹಿಂದಿಗೆ  ಭಾಷಾಂತರ ಮಾಡಲಾಗುತ್ತಿತ್ತು. ಹೊಸ ಭಾಷಾಂತರ ವ್ಯವಸ್ಥೆಯಲ್ಲಿ ಹಿಂದಿ, ಇಂಗ್ಲಿಷ್‌ ಸೇರಿ ಇತರ ಭಾಷೆಗಳಲ್ಲಿ ನಡೆಯುವ ಸಂಸತ್ತಿನ ಕಲಾಪದ ಸಂಪೂರ್ಣ ಚರ್ಚೆಗಳನ್ನು ಕನ್ನಡದಲ್ಲಿಯೂ ಕೇಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಈಶಾನ್ಯ ರಾಜ್ಯದ ಸಂಸದರೊಬ್ಬರು ತಮ್ಮ ಮಾತೃಭಾಷೆಯಲ್ಲಿ ಸದನದಲ್ಲಿ ಮಾತನಾಡಿದರೆ ಅದು ಇಂಗ್ಲೀಷ್‌ ಹಾಗೂ ಹಿಂದಿಗೆ ಭಾಷಾಂತರಗೊಳ್ಳಲಿದೆ. ಅದೇ ವೇಳೆ, ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಕಾರರು ಅನುವಾದ ಮಾಡಲಿದ್ದಾರೆ. ಈ ಮೂಲಕ ಸಂಸದರು ತಮಗೆ ಇಷ್ಟ ಬಂದ ಭಾಷೆಗಳಲ್ಲಿ ಕಲಾಪ ಆಲಿಸಲು ಅನುವು ಮಾಡಿಕೊಡಲಾಗಿದೆ ಎಂದು ಲೋಕಸಭೆಯ ಮೂಲಗಳು ತಿಳಿಸಿವೆ.

‘ದೇಶದ ಭಾಷಾ ವೈವಿಧ್ಯತೆ ಶ್ರೀಮಂತವಾಗಿದೆ. ಹೊಸ ಸಂಸತ್‌ ಭವನದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ವ್ಯಾಖ್ಯಾನ ಒದಗಿಸುವುದು ಸೂಕ್ತ. ಇದರಿಂದ ಕಲಾಪದಲ್ಲಿ ಸದಸ್ಯರ ಭಾಗವಹಿಸುವಿಕೆ ಹೆಚ್ಚಾಗಲಿದೆ. ಜತೆಗೆ, ಬಹುಭಾಷಾ ಭಾಷಾಂತರವು ಸದಸ್ಯರ ಭಾಷೆಗಳ ಅಡೆತಡೆಗಳನ್ನು ನಿವಾರಿಸಲಿದೆ. ಯುರೋಪಿಯನ್‌ ಸಂಸತ್‌ನಲ್ಲಿ ಏಕಕಾಲಕ್ಕೆ 24 ಭಾಷೆಗಳಿಗೆ ಭಾಷಾಂತರ ಪ್ರಕ್ರಿಯೆ ನಡೆಯುತ್ತಿದೆ. ಅದೇ ರೀತಿ, ಲೋಕಸಭೆಯಲ್ಲಿ ಈ ವ್ಯವಸ್ಥೆ ಜಾರಿಗೆ ತರಬೇಕು’ ಎಂದು ಒತ್ತಾಯಿಸಿ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಒರಿಸ್ಸಾದ ಲೋಕಸಭಾ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ಸಂಸದರ ಬೇಡಿಕೆಯ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ.

‘ಪ್ರಾದೇಶಿಕ ಭಾಷೆಗಳನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಸಂಸತ್ತಿನ ಇತಿಹಾಸದಲ್ಲಿಯೇ ಇದೊಂದು ಮಹತ್ವದ ಮೈಲಿಗಲ್ಲು. ರಾಜ್ಯಸಭೆಯಲ್ಲೂ ಶೀಘ್ರದಲ್ಲಿ ಈ ವ್ಯವಸ್ಥೆ ಜಾರಿಗೆ ತರಬೇಕು’ ಎಂದು ರಾಜ್ಯಸಭಾ ಸದಸ್ಯ ಲಹರ್‌ ಸಿಂಗ್‌ ಸಿರೋಯಾ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT