ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ‍‍‍ವರ್ಗಾವಣೆ ಪಾವತಿಗೆ ಬಳಸುತ್ತಿದ್ದೀರಾ ಮೊಬೈಲ್‌ ವಾಲೆಟ್‌? ಹಾಗಾದರೆ ಓದಿ

Last Updated 14 ಜನವರಿ 2019, 1:46 IST
ಅಕ್ಷರ ಗಾತ್ರ

ಬೆಂಗಳೂರು: ಮೊಬೈಲ್‌ ವಾಲೆಟ್‌ನಲ್ಲಿ ಒಂದು ವೇಳೆ ಹಣ ಕಳೆದುಕೊಂಡರೆ ಗ್ರಾಹಕರಿಗೆ ಸೂಕ್ತ ಸಹಾಯ ದೊರೆಯುಬೇಕೆನ್ನುವ ನಿಟ್ಟಿನಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಹೊಸ ನಿಯಮಾವಳಿಗಳನ್ನು ರೂಪಿಸಿದೆ. ಇನ್ನು ಮುಂದೆ ಮೊಬೈಲ್‌ ವಹಿವಾಟಿನ ಮೂಲಕ ಹಣ ಕಳೆದುಕೊಂಡರೆ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ.

ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ ಬಳಕೆದಾರರಿಗೆ ನೀಡಲಾಗುತ್ತಿರುವ ಸುರಕ್ಷೆಯನ್ನು ಮೊಬೈಲ್‌ ವಾಲೆಟ್‌ ಬಳಕೆದಾರರಿಗೂ ನೀಡಲು ಈ ಕಡ್ಡಾಯ ನಿಯಮಗಳನ್ನು ರೂಪಿಸಿದೆ. ಹಾಗಾದರೆ ಆ ನಿಯಮಗಳೇನು? ಹಣ ಕಳೆದುಕೊಂಡವರಿಗೆ ವಾಲೆಟ್‌ ಸಂಸ್ಥೆ ಏನೆಲ್ಲ ನೆರವು ನೀಡಬೇಕು? ಇಲ್ಲಿದೆ ಮಾಹಿತಿ.

* ವಾಲೆಟ್‌ ಮೂಲಕ ನಡೆಸಿದ ವಹಿವಾಟಿನ ಬಗ್ಗೆ ಗ್ರಾಹಕರಿಗೆ ತಕ್ಷಣ ಸಂದೇಶ ಬರುತ್ತದೆ. ಹೀಗೆ ಬರುವ ಸಂದೇಶದಲ್ಲಿ ವಾಲೆಟ್‌ ಸಂಸ್ಥೆಯ ಸಂಪರ್ಕ ಸಂಖ್ಯೆ ಅಥವಾ ಇ–ಮೇಲ್‌ ಮಾಹಿತಿ ನೀಡುವುದು ಕಡ್ಡಾಯ. ಒಂದು ವೇಳೆ ವಂಚನೆ ನಡೆದರೆ ಗ್ರಾಹಕರು ಸುಲಭವಾಗಿ ಸಂಸ್ಥೆಯನ್ನು ಸಂಪರ್ಕಿಸಲು ಇದು ನೆರವಾಗುತ್ತದೆ.

* ಬಳಕೆದಾರರು ವಹಿವಾಟಿನ ಬಗ್ಗೆಎಸ್‌ಎಂಎಸ್‌, ಇ–ಮೇಲ್‌ ಹೀಗೆ ಯಾವುದಾದರೂ ರೂಪದಲ್ಲಿ ಸೂಚನೆ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆಯೇ ಎನ್ನುವುದನ್ನು ಸಂಸ್ಥೆ ಖಾತರಿ ಪಡಿಸಿಕೊಳ್ಳಬೇಕು. ಇದರಿಂದ ವಂಚನೆ ನಡೆದರೆ ತಕ್ಷಣ ದೂರು ದಾಖಲಿಸಬಹುದು.

* ಗ್ರಾಹಕರು ಯಾವುದೇ ರೀತಿಯ ದೂರುಗಳನ್ನ ದಾಖಲಿಸಲು ನೆರವಾಗಲು ಎಲ್ಲಾ ವಾಲೆಟ್‌ ಸಂಸ್ಥೆ 24/7 ಗ್ರಾಹಕ ಸೇವಾ ಸಹಾಯವಾಣಿಯನ್ನು ಹೊಂದಿರಬೇಕು.

* ಕಂಪನಿಯ ನಿರ್ಲಕ್ಷ್ಯ ಅಥವಾ ಆ್ಯಪ್‌ ನ್ಯೂನತೆಯಿಂದ ಗ್ರಾಹಕರು ಹಣ ಕಳೆದುಕೊಂಡರೆ, ಈ ಬಗ್ಗೆ ದೂರು ದಾಖಲಾದ 3 ದಿನಗಳೊಳಗೆ ಸಂಸ್ಥೆ ಹಣವನ್ನು ಮರುಪಾವತಿಸಬೇಕು. ಒಂದು ವೇಳೆ ಬಳಕೆದಾರ ಈ ಬಗ್ಗೆ ದೂರು ನೀಡದಿದ್ದರೂ ಕಂಪನಿಯೇ ಹಣ ಮರುಪಾವತಿಸಲು ಕ್ರಮಕೈಗೊಳ್ಳಬೇಕು.

* ಹಣ ಕಳೆದುಕೊಂಡ ಬಗ್ಗೆ 4 ರಿಂದ 7 ದಿನಗಳಲ್ಲಿ ದೂರು ನೀಡಿದರೆ, ವಹಿವಾಟಿನ ಹಣ ಅಥವಾ ₹10,000 ಇದರಲ್ಲಿ ಯಾವುದು ಸಣ್ಣ ಮೊತ್ತವೊ ಅದನ್ನು ಕಂಪನಿ ಗ್ರಾಹಕರಿಗೆ ಮರುಪಾವತಿಸಬೇಕು. ಒಂದು ವೇಳೆ ವಂಚನೆ ನಡೆದು 7 ದಿನಗಳ ನಂತರ ದೂರು ನೀಡಿದರೆ ಕಂಪನಿಯ ನಿಯಮದ (ಆರ್‌ಬಿಐ ಅನುಮೋದಿಸಿದ) ಪ್ರಕಾರ ಹಣ ಮರುಪಾವತಿ ಮಾಡಲಾಗುತ್ತದೆ.

* ದೂರು ನೀಡಿದ 10 ದಿನಗಳೊಳಗೆ ಕಂಪನಿ ಹಣ ಮರುಪಾವತಿ ಬಗ್ಗೆ ಕ್ರಮಕೈಗೊಳ್ಳಬೇಕು. ಗ್ರಾಹಕರಿಂದ ದಾಖಲಾದ ದೂರನ್ನು ಗರಿಷ್ಠ 90 ದಿನಗಳಲ್ಲಿಪರಿಹರಿಸಬೇಕು. ಇಲ್ಲದಿದ್ದರೆ ವಂಚನೆಯಾದ ಪೂರ್ತಿ ಹಣವನ್ನು ಸಂಸ್ಥೆ ಮರುಪಾವತಿಸಬೇಕು.

ಮೊಬೈಲ್ ವಾಲೆಟ್ ಕಂಪನಿಗಳು ಫೆಬ್ರವರಿ 28ರ ಒಳಗಾಗಿ ‘ತಿಳಿಯಿರಿ ನಿಮ್ಮ ಗ್ರಾಹಕರು (ಕೆವೈಸಿ)’ ಪೂರ್ಣಗೊಳಿಸಬೇಕು. ಬಹುತೇಕ ಹೆಚ್ಚಿನ ಕಂಪನಿಗಳು ಕೆವೈಸಿ ಪೂರ್ಣಗೊಳಿಸಿಲ್ಲ. ಕೆವೈಸಿ ಪ್ರಕ್ರಿಯೆ ಪೂರ್ಣವಾಗದೆ ಹೋದರೆ ಮಾರ್ಚ್ 1ರಿಂದ ಮೊಬೈಲ್ ವಾಲೆಟ್‌ಗಳು ಬಂದ್‌ ಆಗಲಿವೆ. ಗ್ರಾಹಕರೂ ಸಹ ಕೆವೈಸಿ ಮಾಡಿಕೊಳ್ಳದಿದ್ದರೆ ವಾಲೆಟ್ ಬಳಕೆ ಸಾಧ್ಯವಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT