ಠಾಣೆ: ಮಹಾರಾಷ್ಟ್ರದ ಠಾಣೆ ನಗರದ ಮುಂಬ್ರಾ ಪ್ರದೇಶದಲ್ಲಿ ಎಂಟು ಮಹಡಿಯ ಕಟ್ಟಡದ ಪಿಲ್ಲರ್‌ಗಳು ಬಿರುಕು ಬಿಟ್ಟಿರುವುದರಿಂದ, ಈ ಕಟ್ಟಡದ ಪ್ಲ್ಯಾಟ್‌ಗಳಲ್ಲಿ ನೆಲೆಸಿದ್ದ ಸುಮಾರು 120 ಮಂದಿಯನ್ನು ಭಾನುವಾರ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಲ್ಮಾಸ್ ಕಾಲೋನಿಯಲ್ಲಿರುವ, ಸುಮಾರು 20 ವರ್ಷ ಹಳೆಯದಾದ ಈ ಕಟ್ಟಡದ ಎಲ್ಲ 45 ಪ್ಲ್ಯಾಟ್‌ಗಳಿಗೆ ಠಾಣೆಯ ಮಹಾನಗರಪಾಲಿಕೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಬೀಗಮುದ್ರೆ ಹಾಕಿದ್ದಾರೆ ಎಂದು ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಯಾಸಿನ್ ತದ್ವಿ ತಿಳಿಸಿದ್ದಾರೆ.
‘ಮುಂಜಾಗ್ರತಾ ಕ್ರಮವಾಗಿ ಕಟ್ಟಡಕ್ಕೆ ವಿದ್ಯುತ್ ಮತ್ತು ನೀರಿನ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಕಟ್ಟಡದ ಮೇಲೆ ಅಳವಡಿಸಿರುವ ಮೂರು ಮೊಬೈಲ್ ಟವರ್‌ಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.