ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಶಾಂತ್ ಸಾವು ಪ್ರಕರಣ: ನಟಿ ರಿಯಾ ಚಕ್ರವರ್ತಿ ಬಂಧನ, 14 ದಿನ ನ್ಯಾಯಾಂಗ ಬಂಧನ

Last Updated 8 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಮುಂಬೈ: ನಟ ಸುಶಾಂತ್‌ ಸಿಂಗ್ ರಜಪೂತ್‌ ಸಾವಿಗೆ ಸಂಬಂಧಿಸಿದ ಡ್ರಗ್ಸ್‌ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ನಟಿ ರಿಯಾ ಚಕ್ರವರ್ತಿ ಅವರನ್ನು ಮಾದಕವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ) ಮಂಗಳವಾರ ಬಂಧಿಸಿದೆ. ಅಲ್ಲದೆ, ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ರಿಯಾ ಚಕ್ರವರ್ತಿ ಅವರನ್ನು ಬಂಧಿಸಿರುವುದಾಗಿ ಮಾದಕವಸ್ತು ನಿಯಂತ್ರಣ ಸಂಸ್ಥೆಯ ಡೆಪ್ಯುಟಿ ಡೈರೆಕ್ಟರ್‌ ಕೆ.ಪಿ.ಎಸ್‌. ಮಲ್ಹೋತ್ರ ತಿಳಿಸಿದ್ದಾರೆ.

ಭಾನುವಾರ ಮೊದಲ ಬಾರಿಗೆ ರಿಯಾ ಅವರನ್ನು ಕರೆಸಿಕೊಂಡಿದ್ದ ಎನ್‌ಸಿಬಿ ಅಧಿಕಾರಿಗಳು ಆರು ತಾಸು ವಿಚಾರಣೆ ನಡೆಸಿದ್ದರು. ಸೋಮವಾರ ಬೆಳಗ್ಗೆ 9.30ರ ವೇಳೆಗೆ ಮತ್ತೆ ಬಲ್ಲಾರ್ಡ್‌ ಎಸ್ಟೇಟ್‌ ಪ್ರದೇಶದಲ್ಲಿ ಇರುವ ಎನ್‌ಸಿಬಿ ಕಚೇರಿಗೆ ರಿಯಾ ಬಂದಿದ್ದರು. ಸಂಜೆ ಆರು ಗಂಟೆಯವರೆಗೂ ಅವರ ವಿಚಾರಣೆ ನಡೆದಿತ್ತು. ಮಂಗಳವಾರ ಕೆಲವು ಪ್ರಕ್ರಿಯೆಗಳನ್ನು ಪೂರೈಸಿ ಅವರನ್ನು ಬಂಧಿಸಲಾಗಿದೆ.

'ಎನ್‌ಸಿಬಿಗೆ ರಿಯಾ ವಿರುದ್ಧ ಸಾಕ್ಷ್ಯಾಧಾರಗಳು ದೊರೆತಿರಬಹುದು. ಡ್ರಗ್‌ ಪೆಡ್ಲರ್‌ಗಳೊಂದಿಗೆ ರಿಯಾ ಸಂಪರ್ಕ ಹೊಂದಿರುವುದು ಖಚಿತವಾಗಿದೆ. ಹಾಗಾಗಿಯೇ ಅವರು ಬಂಧನಕ್ಕೆ ಒಳಗಾಗಿದ್ದಾರೆ' ಎಂದು ಬಿಹಾರ ಡಿಜಿಪಿ ಗುಪ್ತೇಶ್ವರ್ ಪಾಂಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣದಲ್ಲಿ ಈಗಾಗಲೇ ರಿಯಾ ಸಹೋದರ ಶೋವಿಕ್‌ ಚಕ್ರವರ್ತಿ, ರಜಪೂತ್‌ ಮನೆಯ ವ್ಯವಸ್ಥಾಪಕ ಸ್ಯಾಮುಯೆಲ್‌ ಮಿರಾಂಡ ಹಾಗೂ ಮನೆಯಲ್ಲಿ ಕೆಲಸಕ್ಕಿದ್ದ ದೀಪೇಶ್‌ ಸಾವಂತ್‌ ಅವರನ್ನು ಎನ್‌ಸಿಬಿ ಬಂಧಿಸಿದೆ. ಇವರು ಕೆಲ ನಿಷೇಧಿತ ಡ್ರಗ್ಸ್‌ಗಳನ್ನು ಖರೀದಿಸಿದ್ದರು ಎನ್ನುವ ಆರೋಪವಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಸೇರಿ 10 ಜನರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದು, ಈ ಪೈಕಿ ಎಂಟು ಜನರು ಈ ಪ್ರಕರಣದಲ್ಲಿ ನೇರವಾದ ಸಂಬಂಧ ಹೊಂದಿದ್ದಾರೆ.

ನಟ ಸುಶಾಂತ್ ಸಿಂಗ್‌ಗೆ ನಿಷೇಧಿತ ಔಷಧಗಳನ್ನು ನೀಡುವ ಮೂಲಕ ನನ್ನ ವಿರುದ್ಧ ಕ್ರಿಮಿನಲ್ ಪಿತೂರಿ ನಡೆಸಿದ್ದಾರೆಂದು ಆರೋಪಿಸಿ ಆರೋಪಿ ರಿಯಾ ಚಕ್ರವರ್ತಿ ನೀಡಿದ ದೂರಿನ ಅನ್ವಯ ಸುಶಾಂತ್ ಸಿಂಗ್ ಸಹೋದರಿಯರು ಮತ್ತು ಇತರರ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ನಟ ಸುಶಾಂತ್ ಸಿಂಗ್ ಅವರ ಸಾವಿನ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ರಿಯಾ ಚಕ್ರವರ್ತಿ, ಸುಶಾಂತ್‌ ಸಹೋದರಿಯರಾದ ಪ್ರಿಯಾಂಕಾ ಸಿಂಗ್, ಮೀತು ಸಿಂಗ್‌ ಮತ್ತು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಡಾ.ತರುಣ್ ಕುಮಾರ್ ಅವರ ವಿರುದ್ಧ ದೂರು ಸಲ್ಲಿಸಿದ್ದರು.

ಪ್ರಕರಣದ ಹಿನ್ನೆಲೆ...

ಜೂನ್‌ 14ರಂದು ಮುಂಬೈ ಬಾಂದ್ರಾದ ನಿವಾಸದಲ್ಲಿ ನಟ ಸುಶಾಂತ್‌ ಸಿಂಗ್‌ ರಜಪೂತ್‌ (34) ನೇಣು ಬಿಗಿದ ಸ್ಥಿತಿಯಲ್ಲಿ ಸಾವಿಗೀಡಾಗಿದ್ದರು. ಸುಶಾಂತ್ ಸಿಂಗ್‌ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂದು ಆರೋಪಿಸಿ ಸುಶಾಂತ್ ಸಿಂಗ್ ತಂದೆ ಕೆ.ಕೆ.ಸಿಂಗ್ ಅವರು, ನಟಿ ರಿಯಾ ಮತ್ತು ಅವರ ಕುಟುಂಬದವರ ವಿರುದ್ಧ ಜುಲೈ 25ರಂದು ಪಟ್ನಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪೊಲೀಸರು ರಿಯಾ, ಆಕೆಯ ಪೋಷಕರಾದ ಇಂದ್ರಜಿತ್, ಸಂಧ್ಯಾಚಕ್ರವರ್ತಿ, ಸಹೋದರ ಶೋಯಿಕ್ ಚಕ್ರವರ್ತಿ ಮತ್ತು ಸ್ಯಾಮುಯೆಲ್ ಮಿರಾಂಡಾ ಮತ್ತು ಶೃತಿ ಮೋದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

ಜುಲೈ 31 ರಂದು ಸುಶಾಂತ್ ಸಿಂಗ್ ಬ್ಯಾಂಕ್ ಖಾತೆಗಳಿಂದ ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಕೆ.ಕೆ.ಸಿಂಗ್ ಆರೋಪಿಸಿದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ರಿಯಾ ವಿರುದ್ಧ ದೂರು ದಾಖಲಿಸಿ, ವಿಚಾರಣೆ ನಡೆಸಿದೆ. ಸುಶಾಂತ್ ಆತ್ಮಹತ್ಯೆ ಪ್ರಕರಣ ಸಂಬಂಧ ಪಟ್ನಾದಲ್ಲಿ ದಾಖಲಾಗಿರುವ ಎಫ್ಐಆರ್ ಅನ್ನು ಮುಂಬೈಗೆ ವರ್ಗಾಯಿಸಲು ಕೋರಿ ನಟಿ ರಿಯಾ ಚಕ್ರವರ್ತಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಸಾವಿನ ತನಿಖೆಯನ್ನು ಸಿಬಿಐ ಮುಂದುವರಿಸಲು ಸುಪ್ರೀಂ ಕೋರ್ಟ್‌ ಆಗಸ್ಟ್ 19ರಂದು ಆದೇಶಿಸಿತ್ತು. ಪ್ರಕರಣದಲ್ಲಿ ಡ್ರಗ್ಸ್‌ ಸಂಬಂಧಿಸಿದ ವಿಚಾರಗಳು ತನಿಖೆಯಿಂದ ತಿಳಿಯುತ್ತಿದ್ದಂತೆ ಎನ್‌ಸಿಬಿ ತನಿಖೆ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT