ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಕೆಶಿ ಹೇಳಿದಂತೆ ಶತ್ರು ಭೈರವಿ ಯಾಗ, ಪ್ರಾಣಿ ಬಲಿ ನಡೆದಿಲ್ಲ: ಕೇರಳ ಸರ್ಕಾರ

Published 1 ಜೂನ್ 2024, 6:15 IST
Last Updated 1 ಜೂನ್ 2024, 6:15 IST
ಅಕ್ಷರ ಗಾತ್ರ

ತಿರುವನಂತಪುರ: ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೊಂಡಿರುವಂತೆ ರಾಜ್ಯದ ಕಣ್ಣೂರು ಜಿಲ್ಲೆಯ ತಳಿಪರಂಬದಲ್ಲಿರುವ ದೇವಸ್ಥಾನದಲ್ಲಿ ಯಾವುದೇ ಪ್ರಾಣಿ ಬಲಿ ನಡೆದಿಲ್ಲ ಎಂದು ಕೇರಳ ಸರ್ಕಾರ ಶನಿವಾರ ಹೇಳಿದೆ.

‘ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನ್ನ ವಿರುದ್ಧ ತಳಿಪರಂಬ ಎಂಬಲ್ಲಿರುವ ರಾಜರಾಜೇಶ್ವರ ದೇವಸ್ಥಾನದಲ್ಲಿ ಪ್ರಾಣಿ ಬಲಿ ಕೊಡಲಾಗಿದೆ’ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇತ್ತೀಚೆಗೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಈ ಮಾತು ಹೇಳಿದೆ.

‘ತಳಿಪರಂಬ ದೇವಸ್ಥಾನದಲ್ಲಿ ಪ್ರಾಣಿ ಬಲಿ ನಡೆಸಲಾಗಿದೆ ಎಂಬುದಾಗಿ ಶಿವಕುಮಾರ್ ಆರೋಪಿದ್ದಾರೆ. ಈ ಕುರಿತು ತನಿಖೆ ನಡೆಸಲಾಗಿದೆ. ಜೊತೆಗೆ, ಮಲಬಾರ್‌ ದೇವಸ್ವಂ ಮಂಡಳಿಯಿಂದಲೂ ಮಾಹಿತಿ ಪಡೆಯಲಾಗಿದೆ. ದೇವಸ್ಥಾನದಲ್ಲಿ ಅಥವಾ ಅದರ ಸಮೀಪ ಇಂತಹ ಯಾವುದೇ ವಿಧಿ ನಡೆದಿಲ್ಲ ಎಂಬುದಾಗಿ ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ’ ಎಂದು ದೇವಸ್ವಂ ಸಚಿವ ಕೆ.ರಾಧಾಕೃಷ್ಣನ್‌ ಹೇಳಿದ್ದಾರೆ.

‘ಉಪಮುಖ್ಯಮಂತ್ರಿ ಶಿವಕುಮಾರ್‌ ಏಕೆ ಇಂಥ ಆರೋಪ ಮಾಡಿದರು ಎಂಬುದನ್ನು ಪರಿಶೀಲಿಸಬೇಕಿದೆ. ಅವರು ಆರೋಪಿಸಿರುವಂತಹ ಘಟನೆಗಳು ರಾಜ್ಯದ ಬೇರೆಡೆ ಎಲ್ಲಿಯಾದರೂ ನಡೆದಿವೆಯೇ ಎಂಬ ಬಗ್ಗೆಯೂ ಸರ್ಕಾರ ತನಿಖೆ ನಡೆಸುತ್ತಿದೆ’ ಎಂದು ಸಚಿವ ರಾಧಾಕೃಷ್ಣನ್‌ ಹೇಳಿದ್ದಾರೆ.

‘ಪ್ರಾಣಿ ಬಲಿ ನಿಷೇಧಿಸಿ 1968ರಲ್ಲಿಯೇ ಕಾನೂನು ಜಾರಿಗೆ ತರಲಾಗಿದೆ. ಹೀಗಾಗಿ, ಇಂತಹ ಕೃತ್ಯ ನಡೆದಿರುವ ಸಾಧ್ಯತೆ ಕಡಿಮೆ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT