ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1ಸಾವಿರ ಕೋಟಿ ನೀಡಿದ ಫಾರ್ಮ ಕಂಪನಿಗಳಲ್ಲಿ ಕೆಲವು ಕಳಪೆ ಔಷಧ ತಯಾರಿಸಿವೆ: ಕೈ ಆರೋಪ

Published 21 ಮಾರ್ಚ್ 2024, 13:07 IST
Last Updated 21 ಮಾರ್ಚ್ 2024, 13:07 IST
ಅಕ್ಷರ ಗಾತ್ರ

ನವದೆಹಲಿ: ‘ರಾಜಕೀಯ ಪಕ್ಷಗಳಿಗೆ ₹1 ಸಾವಿರ ಕೋಟಿಗೂ ಅಧಿಕ ಮೊತ್ತ ನೀಡಿದ ಒಟ್ಟು 35 ಔಷಧ ತಯಾರಿಕಾ ಕಂಪನಿಗಳಲ್ಲಿ ಏಳು ಕಂಪನಿಗಳು ಕೆಮ್ಮು ಸಿರಪ್ ಹಾಗೂ ರೆಮ್‌ಡೆಸಿವಿರ್ ಸೇರಿದಂತೆ ಕಳಪೆ ಗುಣಮಟ್ಟದ ಔಷಧ ತಯಾರಿಸಿದ ಆರೋಪ ಹೊತ್ತಿವೆ’ ಎಂದು ಕಾಂಗ್ರೆಸ್ ಹೇಳಿದೆ.

'ಸರ್ಕಾರ ಮತ್ತು ಫಾರ್ಮಾ ಕಂಪನಿಗಳ ನಡುವೆ ಒಳ ಒಪ್ಪಂದಗಳು ನಡೆದಿದ್ದು, ಆಡಳಿತ ಪಕ್ಷಕ್ಕೆ ದೇಣಿಗೆ ನೀಡಿ ತಮ್ಮ ವ್ಯವಹಾರವನ್ನು ತಮ್ಮಿಷ್ಟದಂತೆ ನಡೆಸುವ ಸ್ವಾತಂತ್ರ್ಯ ಪಡೆದಿವೆ. ಇದು ಆಡಳಿತಾರೂಢ ಪಕ್ಷದ ‘ಚಂದಾ ದೊ, ಧಂಡಾ ಲೋ’ ಕಾರ್ಯಾಚರಣೆಯ ಭಾಗವಾಗಿದೆ’ ಎಂದು ಪಕ್ಷದ ಮುಖಂಡ ಜೈರಾಂ ರಮೇಶ್ ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ.

‘ಚುನಾವಣಾ ಆಯೋಗವು ಮಾರ್ಚ್ 14ರಂದು ಬಹಿರಂಗಪಡಿಸಿದ ಚುನಾವಣಾ ಬಾಂಡ್ ಕುರಿತ ಮಾಹಿತಿ ಅನ್ವಯ ಸುಮಾರು 35 ಕಂಪನಿಗಳು ಸುಮಾರು ₹1 ಸಾವಿರ ಕೋಟಿಯಷ್ಟು ದೇಣಿಗೆಯನ್ನು ಬಾಂಡ್ ಖರೀದಿಸುವ ಮೂಲಕ ನೀಡಿರುವ ಮಾಹಿತಿ ಬಹಿರಂಗಗೊಂಡಿದೆ. ಇವುಗಳಲ್ಲಿ ಕಳಪೆ ಗುಣಮಟ್ಟದ ಔಷಧ ತಯಾರಿಕೆಯಲ್ಲಿ ತೊಡಗಿರುವ ಏಳು ಕಂಪನಿಗಳು ಇವೆ. ಇವುಗಳು ವ್ಯಾಪಕ ಬಳಕೆಯ ಕೆಮ್ಮಿನ ಸಿರಪ್, ರಕ್ತದೊತ್ತಡ ನಿಯಂತ್ರಕ ಔಷಧಗಳು, ಕೋವಿಡ್–19ರ ಚಿಕಿತ್ಸೆ ಅವಧಿಯಲ್ಲಿ ನೀಡಲಾಗುತ್ತಿದ್ದ ರೆಮ್‌ಡೆಸಿವಿರ್‌ ಸೇರಿವೆ’ ಎಂದಿದ್ದಾರೆ.

‘ಸರ್ಕಾರದ ‘ಚಂದಾ ದೊ, ಧಂಡಾ ಲೊ’ದಂತ ಒಳ ಒಪ್ಪಂದಗಳು ಕಳಪೆ ಗುಣಮಟ್ಟದ ಔಷಧಗಳ ತಯಾರಿಕೆಗೆ ರಹದಾರಿ ಕಲ್ಪಿಸಿವೆ. ಇದರ ಪರಿಣಾಮ ಸರ್ಕಾರವನ್ನು ನಂಬಿರುವ ಮುಗ್ದ ಸಾರ್ವಜನಿಕರ ಮೇಲಾಗುತ್ತಿದೆ. ಪಾರದರ್ಶಕತೆ ಮತ್ತು ಸ್ವಚ್ಛ ಮಾರುಕಟ್ಟೆಯ ನಿರೀಕ್ಷೆಯಲ್ಲಿ ಜನರು ಇದ್ದಾರೆ. ಆದರೆ ಸರ್ಕಾರ ಮತ್ತು ಕಂಪನಿಗಳು ಒಳ ಒಪ್ಪಂದಗಳ ಮೂಲಕ ಜನರಿಗೆ ನಂಬಿಕೆ ದ್ರೋಹ ಎಸಗುತ್ತಿವೆ’ ಎಂದು ಜೈರಾಂ ರಮೇಶ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT