ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ‘ಇಂಡಿಯಾ’ ಮೈತ್ರಿಗೆ ಸ್ಪಷ್ಟ ಬಹುಮತ: ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ

Published 30 ಮೇ 2024, 10:12 IST
Last Updated 30 ಮೇ 2024, 10:12 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ‘ಎಲ್ಲರನ್ನೂ ಒಳಗೊಳ್ಳುವ ಮತ್ತು ರಾಷ್ಟ್ರೀಯವಾದಿ ಸರ್ಕಾರವನ್ನು ನೀಡುತ್ತೇವೆ’ ಎಂದು ಹೇಳಿದರು.

ಚುನಾವಣೆಯ ಕೊನೆಯ ಹಂತದ ಪ್ರಚಾರದ ಕುರಿತು ಎಐಸಿಸಿ ಕೇಂದ್ರ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಂದು ವೇಳೆ ಈಗಿರುವ ಸರ್ಕಾರಕ್ಕೆ ಮತ್ತೊಂದು ಅವಕಾಶ ಸಿಕ್ಕರೆ, ಅದು ಪ್ರಜಾಪ್ರಭುತ್ವವನ್ನು ಅಂತ್ಯಗೊಳಿಸುತ್ತದೆ ಎಂಬುದನ್ನು ಜನರು ಮನಗಂಡಿದ್ದಾರೆ’ ಎಂದರು.

ಜಾತಿ, ಧರ್ಮದ ಆಧಾರದ ಮೇಲೆ ಮತ ಕೇಳದಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರದ ಸಮಯದಲ್ಲಿ ಮಂದಿರ– ಮಸೀದಿ ಮತ್ತು ವಿಭಜನೆಕಾರಿ ವಿಷಯಗಳನ್ನು 421 ಬಾರಿ ಪ್ರಸ್ತಾಪಿಸಿದ್ದಾರೆ ಎಂದು ಖರ್ಗೆ ವಿವರಿಸಿದರು.

ಮೋದಿ ಅವರು ಕಳೆದ 15 ದಿನಗಳ ತಮ್ಮ ಭಾಷಣದಲ್ಲಿ 232 ಬಾರಿ ಕಾಂಗ್ರೆಸ್‌ ಹೆಸರನ್ನು ಪ್ರಸ್ತಾಪಿಸಿದ್ದರೆ, 758 ಬಾರಿ ತಮ್ಮದೇ ಹೆಸರನ್ನು ಹೇಳಿಕೊಂಡಿದ್ದಾರೆ. ಆದರೆ ಒಮ್ಮೆಯೂ ಅವರು ನಿರುದ್ಯೋಗ ಸಮಸ್ಯೆ ಕುರಿತು ಮಾತನಾಡಿಲ್ಲ ಎಂದು ಕಿಡಿಕಾರಿದರು.

ದೇಶದ ಜನರು ಪರ್ಯಾಯ ಸರ್ಕಾರ ರಚನೆಗೆ ಜೂನ್‌ 4ರಂದು ಜನಾದೇಶ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ಅವರು ಪ್ರತಿಪಾದಿಸಿದರು.

ರಿಚರ್ಡ್‌ ಅಟೆನ್‌ಬರೊ ಅವರು ‘ಗಾಂಧಿ’ ಚಲನಚಿತ್ರ ನಿರ್ಮಿಸುವವರೆಗೂ ಜಗತ್ತಿಗೆ ಮಹಾತ್ಮ ಗಾಂಧಿ ಕುರಿತು ಅರಿವು ಇರಲಿಲ್ಲ ಎಂದು ಹೇಳಿರುವ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಪ್ರಧಾನಿ ಅವರು ಗಾಂಧಿ ಬಗ್ಗೆ ಅಧ್ಯಯನ ನಡೆಸದಿರಬಹುದು, ಆದರೆ ಮಹಾತ್ಮ ಗಾಂಧಿ ಅವರು ವಿಶ್ವಕ್ಕೆ ತಿಳಿದಿರುವ ನಾಯಕ’ ಎಂದು ಹೇಳಿದರು.

ಗಾಂಧಿ ಕುರಿತ ಮೋದಿ ಹೇಳಿಕೆ ನಗು ತರಿಸುತ್ತದೆ. ಬಹುಷಃ ಅವರು ಗಾಂಧೀಜಿ ಬಗ್ಗೆ ಓದಿಕೊಂಡಿಲ್ಲ. ಇಡೀ ಜಗತ್ತಿಗೆ ಮಹಾತ್ಮ ಗಾಂಧಿ ಬಗ್ಗೆ ತಿಳಿದಿದೆ. ಅವರ ಪ್ರತಿಮೆಗಳು ವಿಶ್ವಸಂಸ್ಥೆ ಸೇರಿದಂತೆ ವಿಶ್ವದ ವಿವಿಧ ಸ್ಥಳಗಳಲ್ಲಿ ಇವೆ ಎಂದರು.

ನರೇಂದ್ರ ಮೋದಿ ಅವರಿಗೆ ಮಹಾತ್ಮ ಗಾಂಧಿ ಬಗ್ಗೆ ಗೊತ್ತಿಲ್ಲದಿದ್ದರೆ, ಸಂವಿಧಾನದ ಬಗ್ಗೆಯೂ ಹೆಚ್ಚು ತಿಳಿದಿಲ್ಲ ಎನಿಸುತ್ತದೆ. ಜೂನ್‌ 4ರ ಬಳಿಕ ಮೋದಿ ಅವರಿಗೆ ಸಾಕಷ್ಟು ಬಿಡುವಿನ ಸಮಯ ದೊರೆಯುತ್ತದೆ. ಆಗ ಅವರು ಮಹಾತ್ಮ ಗಾಂಧಿ ಅವರ ಆತ್ಮಚರಿತ್ರೆಯನ್ನು ಓದಬೇಕು ಎಂದು ಖರ್ಗೆ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT