ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೋಶೆ ಕಾರು ದುರಂತ | ಬಾಲಕನ ತಾಯಿಯ ರಕ್ತದ ಮಾದರಿ ಬಳಕೆ: ವೈದ್ಯರು ಸೇರಿ ಮೂವರ ಬಂಧನ

Published 30 ಮೇ 2024, 12:49 IST
Last Updated 30 ಮೇ 2024, 12:49 IST
ಅಕ್ಷರ ಗಾತ್ರ

ಪುಣೆ: ದುಬಾರಿ ಪೋಶೆ ಕಾರನ್ನು ವೇಗವಾಗಿ ಚಾಲನೆ ಮಾಡಿ ಇಬ್ಬರು ಐಟಿ ಉದ್ಯೋಗಿಗಳ ಸಾವಿಗೆ ಕಾರಣನಾದ ಬಾಲಕ ಮದ್ಯ ಸೇವಿಸಿದ್ದನೇ ಎಂಬುದನ್ನು ಖಚಿತಪಡಿಸುವ ಪರೀಕ್ಷೆಯಲ್ಲಿ ತಾಯಿಯ ರಕ್ತದ ಮಾದರಿ ಬಳಸಿರುವ ಶಂಕೆ ಇದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಇಬ್ಬರು ವೈದ್ಯರನ್ನು ಒಳಗೊಂಡು ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ದೇಶದಲ್ಲೇ ಸಂಚಲನ ಮೂಡಿಸಿದ ಈ ಕಾರು ಅಪಘಾತ ಪ್ರಕರಣದ ಆರೋಪಿ 17 ವರ್ಷದ ಬಾಲಕನ ವೈದ್ಯಕೀಯ ಪರೀಕ್ಷೆಯು ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಸ್ಸೂನ್ ಆಸ್ಪತ್ರೆಯಲ್ಲಿ ನಡೆದಿದೆ. ಇಲ್ಲಿ ಬಹಳಷ್ಟು ಅವ್ಯವಹಾರಗಳು ನಡೆದಿರುವ ಸಾಧ್ಯತೆ ಇದೆ. ಈ ವಿಷಯ ಪತ್ತೆಗಾಗಿ ಮಹಾರಾಷ್ಟ್ರ ವೈದ್ಯಕೀಯ ಶಿಕ್ಷಣ ಇಲಾಖೆಯು ಮುಂಬೈ ಮೂಲದ ವೈದ್ಯಕೀಯ ಕಾಲೇಜಿನ ಡೀನ್‌ ಡಾ. ಪಲ್ಲವಿ ಸಪಾಳೆ ಅವರ ನೇತೃತ್ವದ ತ್ರಿಸದಸ್ಯ ಸಮಿತಿ ರಚಿಸಿದೆ ಎಂದು ವರದಿಯಾಗಿದೆ.

‘ಮಹಿಳೆ ಮತ್ತು ಇಬ್ಬರು ವಯಸ್ಕರ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ. ಬಾಲಕನ ರಕ್ತದ ಮಾದರಿಯನ್ನು ಮರೆಮಾಚುವ ಹಾಗು ಅದಲುಬದಲು ಮಾಡುವ ಉದ್ದೇಶದಿಂದ ಈ ಯತ್ನ ನಡೆದಿರುವ ಸಾಧ್ಯತೆ ಇದೆ’ ಎಂದು ಈ ಸಮಿತಿ ಹೇಳಿದೆ.

‘ತಾಯಿಯ ಮಾದರಿಯನ್ನು ಬಾಲಕನ ಮಾದರಿಯೊಂದಿಗೆ ಅದಲುಬದಲು ಮಾಡಿರುವ ಶಂಕೆ ಇದೆ ಎಂದು ಪೊಲೀಸರೂ ಸಂಶಯ ವ್ಯಕ್ತಪಡಿಸಿದ್ದಾರೆ’ ಎಂದು ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. 

ಸದ್ಯ ಬಾಲಕ ಬಾಲಮಂದಿರದಲ್ಲಿದ್ದಾನೆ. ಆತನ ತಂದೆ, ರಿಯಲ್‌ ಎಸ್ಟೇಟ್‌ ಉದ್ಯಮಿ ಹಾಗೂ ಅಜ್ಜನ ಬಂಧನವಾಗಿದೆ. ಅಪಘಾತದ ಹೊಣೆ ಹೊರುವಂತೆ ತಮ್ಮ ಮನೆಯ ಚಾಲಕನ ಮೇಲೆ ಒತ್ತಡ ಹೇರುವ ತಂತ್ರ ನಡೆದಿರುವ ಕುರಿತೂ ವರದಿಯಾಗಿದೆ. ಒಂದೊಮ್ಮೆ ರಕ್ತದ ಮಾದರಿ ಬಾಲಕನ ತಾಯಿಯದ್ದೇ ಆದಲ್ಲಿ, ಈ ಪ್ರಕರಣದಲ್ಲಿ ಇದೇ ಕುಟುಂಬದ ಮತ್ತೊಬ್ಬ ಸದಸ್ಯನ ಹೆಸರೂ ಸೇರಿದಂತಾಗಲಿದೆ ಎಂದು ವರದಿಯಾಗಿದೆ.

ಮೇ 19ರಂದು ಮಧ್ಯಪ್ರದೇಶ ಮೂಲದ ಅನೀಶ್ ಅವಾಧಿಯಾ ಹಾಗೂ ಅಶ್ವಿನಿ ಕೋಸ್ತಾ ಎಂಬ 24 ವರ್ಷದ ಎಂಜಿನಿಯರ್‌ಗಳು ತಡರಾತ್ರಿ ಬೈಕ್‌ನಲ್ಲಿ ಮರಳುತ್ತಿದ್ದಾಗ, ವೇಗವಾಗಿ ನುಗ್ಗಿದ ಪೋಶೆ ಕಾರು ಇವರಿಗೆ ಗುದ್ದಿ ಪ್ರಾಣ ಕಸಿದುಕೊಂಡಿತ್ತು. ಕಾರು ಚಾಲನೆ ಮಾಡುತ್ತಿದ್ದ ಬಾಲಕ, ಪಾನಮತ್ತನಾಗಿದ್ದ ಎಂದು ಆರೋಪಿಸಲಾಗಿದೆ. ಘಟನೆ ನಡೆದ 15 ಗಂಟೆಯೊಳಗಾಗಿ, ಅಪಘಾತ ಕುರಿತು ಕೇವಲ 300 ಪದಗಳ ನಿಬಂಧನೆ ಬರೆಯುವ, ನಶೆಮುಕ್ತ ಕೇಂದ್ರದಲ್ಲಿ 15 ದಿನಗಳ ಚಿಕಿತ್ಸೆ ಪಡೆಯುವ ಹಾಗೂ ಸಂಚಾರ ಠಾಣೆ ಪೊಲೀಸರೊಂದಿಗೆ ಕೆಲಸ ಮಾಡುವ ಷರತ್ತು ವಿಧಿಸಿ ಜಾಮೀನು ಪಡೆದಿದ್ದು ದೊಡ್ಡ ಮಟ್ಟದ ಸುದ್ದಿಯಾಗಿತ್ತು.

ಈ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಬಾಲಾಪರಾಧ ನ್ಯಾಯ ಮಂಡಳಿಯು ತನ್ನ ಆದೇಶವನ್ನು ಮಾರ್ಪಡಿಸಿ, ಆರೋಪಿ ಬಾಲಕನನ್ನು ಜೂನ್ 5ರವರೆಗೆ ನಿರೀಕ್ಷಣಾ ಮಂದಿರದಲ್ಲಿರಿಸುವಂತೆ ಆದೇಶಿಸಿತು. ಜತೆಗೆ ಈ ಪ್ರಕರಣದಲ್ಲಿ ಬಾಲಕನನ್ನು ವಯಸ್ಕ ಎಂದು ಪರಿಗಣಿಸುವಂತೆ ಪುಣೆ ಪೊಲೀಸರು ಕೋರಿದ್ದರು.

ಬಾಲಕನ ರಕ್ತದ ಮಾದರಿ ಅದಲುಬದಲು ಮಾಡಿದ ಪ್ರಕರಣದಲ್ಲಿ ಪುಣೆಯ ಸಸ್ಸೂನ್ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಅಜಯ್ ತಾವರೆ, ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಹರಿ ಹಳನೂರ್ ಹಾಗೂ ಸಿಬ್ಬಂದಿ ಅತುಲ್ ಘಾಟಕಾಂಬಳೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಡಾ. ಹಳನೂರ್ ಹಾಗೂ ಘಾಟಕಾಂಬಳೆ ಅವರು ಡಾ. ತಾವರೆ ಅವರಿಂದ ತಲಾ ₹3 ಲಕ್ಷ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿರುವುದಾಗಿ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT