ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಜಾಲತಾಣಕ್ಕೆ 'ಅತ್ಯುತ್ತಮ ಸುದ್ದಿ ವೆಬ್‌ಸೈಟ್' ರಜತ ಪ್ರಶಸ್ತಿ

Wan-Ifra ದಕ್ಷಿಣ ಏಷ್ಯಾ ಡಿಜಿಟಲ್ ಮೀಡಿಯಾ ಪ್ರಶಸ್ತಿ
Published 12 ಫೆಬ್ರುವರಿ 2024, 11:48 IST
Last Updated 12 ಫೆಬ್ರುವರಿ 2024, 11:48 IST
ಅಕ್ಷರ ಗಾತ್ರ

ಬೆಂಗಳೂರು: 2023ರ ಪ್ರತಿಷ್ಠಿತ 'ದಕ್ಷಿಣ ಏಷ್ಯಾ ಡಿಜಿಟಲ್ ಮೀಡಿಯಾ' ಪ್ರಶಸ್ತಿಗಳು ಘೋಷಣೆಯಾಗಿದ್ದು, ಕನ್ನಡದ ಅತ್ಯಂತ ವಿಶ್ವಾಸಾರ್ಹ ಮಾಧ್ಯಮ ಪ್ರಜಾವಾಣಿಯು (www.prajavani.net) 'ಅತ್ಯುತ್ತಮ ಸುದ್ದಿ ಜಾಲತಾಣ' ವಿಭಾಗದಲ್ಲಿ ರಜತ ಪುರಸ್ಕಾರಕ್ಕೆ ಭಾಜನವಾಗಿದೆ.

ಸುದ್ದಿ ಪ್ರಕಾಶಕರ ಜಾಗತಿಕ ಒಕ್ಕೂಟ (WAN-IFRA) ನೀಡುವ ದಕ್ಷಿಣ ಏಷ್ಯಾ ಡಿಜಿಟಲ್ ಮೀಡಿಯಾ ಪ್ರಶಸ್ತಿಗಳ 7ನೇ ಆವೃತ್ತಿಯಲ್ಲಿ ಪ್ರಜಾವಾಣಿ ಜಾಲತಾಣವು ಆಂಗ್ಲ ಸುದ್ದಿ ತಾಣ 'ದಿ ಹಿಂದು' ಜೊತೆಗೆ ದ್ವಿತೀಯ ಪ್ರಶಸ್ತಿಯನ್ನು ಹಂಚಿಕೊಂಡಿದೆ. ಈ ವರ್ಷದ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾದ ಕನ್ನಡದ ಏಕೈಕ ಸುದ್ದಿ ಜಾಲತಾಣ ಎಂಬ ಹೆಗ್ಗಳಿಕೆ ಪ್ರಜಾವಾಣಿಯದು.

ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿ. ಸಂಸ್ಥೆಯ ಭಾಗವಾಗಿರುವ ಪ್ರಜಾವಾಣಿ ಜಾಲತಾಣವು ಇತ್ತೀಚೆಗಷ್ಟೇ ವಿನೂತನ ವಿನ್ಯಾಸದೊಂದಿಗೆ, ಅತ್ಯಾಧುನಿಕ ತಂತ್ರಜ್ಞಾನಗಳಿರುವ ಹೊಸ ಸಿಎಂಎಸ್ (ಸುದ್ದಿ-ಮಾಹಿತಿ ನಿರ್ವಹಣಾ ವ್ಯವಸ್ಥೆ) ಅಳವಡಿಸಿಕೊಂಡಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಪರಿಷ್ಕೃತ ವಿನ್ಯಾಸ ಮತ್ತು ವ್ಯವಸ್ಥೆಯಿಂದಾಗಿ, ಆಕರ್ಷಕ ಮುಖಪುಟ, ತಾಜಾ ಸುದ್ದಿಗಳ ನಿರಂತರ ಮತ್ತು ತ್ವರಿತ ಅಪ್‌ಡೇಟ್ಸ್, ಓದುಗರಿಗೆ ಅನುಕೂಲಕರವಾದ ನ್ಯಾವಿಗೇಶನ್, ಪುಟ ತೆರೆಯುವಿಕೆಯಲ್ಲಿನ ವೇಗ - ಹೀಗೆ ಯೂಸರ್ ಇಂಟರ್‌ಫೇಸ್ (ಯುಐ) ಮತ್ತು ಯೂಸರ್ ಎಕ್ಸ್‌ಪೀರಿಯನ್ಸ್ (ಯುಎಕ್ಸ್) - ಎರಡರಲ್ಲಿಯೂ ಅದ್ಭುತವಾದ ಸುಧಾರಣೆಯಾಗಿದೆ. ಜೊತೆಗೆ, ಅತ್ಯಾಧುನಿಕವಾದ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನೂ ಅಳವಡಿಸಲಾಗಿದ್ದು, ತನ್ನದೇ ಆದ ಯೂನಿಕೋಡ್ ಅಕ್ಷರ ವಿನ್ಯಾಸ, ವೈವಿಧ್ಯಮಯ ಟೆಂಪ್ಲೇಟ್‌ಗಳು ಪ್ರಜಾವಾಣಿ ಜಾಲತಾಣದ ಜನಪ್ರಿಯತೆಗೆ ಕಾರಣವಾಗಿವೆ. ಈ ಎಲ್ಲ ಅಂಶಗಳೂ 'ಬೆಸ್ಟ್ ನ್ಯೂಸ್ ವೆಬ್‌ಸೈಟ್' ಪುರಸ್ಕಾರಕ್ಕೆ ಪರಿಗಣನೆಯಾಗಿವೆ.

'ವಾನ್-ಇಫ್ರಾ'ದಿಂದ ಹಲವಾರು ವಿಭಾಗಗಳಲ್ಲಿ ಪ್ರಶಸ್ತಿ ಘೋಷಿಸಲಾಗಿದ್ದು, ಅತ್ಯುತ್ತಮ ಸುದ್ದಿ ವೆಬ್‌ಸೈಟ್ ವಿಭಾಗದಲ್ಲಿ ಮೊದಲ ಸ್ಥಾನ (ಚಿನ್ನ) ದಿ ಕ್ವಿಂಟ್ ಹಾಗೂ ತೃತೀಯ (ಕಂಚು) ಸ್ಥಾನ ಲೈವ್ ಮಿಂಟ್‌ಗೆ ಘೋಷಣೆಯಾಗಿದ್ದು, ಇವೆರಡೂ ಆಂಗ್ಲ ಜಾಲತಾಣಗಳು. ವಿಭಿನ್ನ ವಿಭಾಗಗಳಲ್ಲಿ ಆಂಗ್ಲ ಡಿಜಿಟಲ್ ಮಾಧ್ಯಮ ಸಂಸ್ಥೆಗಳೇ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದು, ಕನ್ನಡದಲ್ಲಿ ಪ್ರಜಾವಾಣಿ ಡಾಟ್ ನೆಟ್‌ಗೆ ಪ್ರಶಸ್ತಿ ದಕ್ಕಿರುವುದು ಹೆಮ್ಮೆಯ ಸಂಗತಿ. ಆಂಗ್ಲ ಹೊರತಾಗಿ, ಭಾರತೀಯ ಭಾಷೆಗಳಲ್ಲಿ ಹಿಂದಿಯ ಅಮರ್ ಉಜಾಲ ಹಾಗೂ ಬಂಗಾಳಿಯ ಪ್ರಥಮ್ ಅಲೊ ಜಾಲತಾಣಗಳು ಅನ್ಯ ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿವೆ. ಅಂತರರಾಷ್ಟ್ರೀಯ ತೀರ್ಪುಗಾರರ ತಂಡವು ಈ ಆಯ್ಕೆ ಪ್ರಕ್ರಿಯೆ ನೆರವೇರಿಸಿತ್ತು.

ಮಾರ್ಚ್ 13-14ರಂದು ನವದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT