ಜೈಪುರ: ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ ಅಕ್ರಮವಾಗಿ ಪ್ರವೇಶಿಸಿ ವನ್ಯಜೀವಿಗಳಿಗೆ ತೊಂದರೆ ಮಾಡಿದ ಆರೋಪದಡಿ 14 ಮಹೀಂದ್ರ ಎಸ್‌ಯುವಿ ಮಾಲೀಕರಿಗೆ ರಾಜಸ್ಥಾನ ಅರಣ್ಯ ಇಲಾಖೆ ತಲಾ ₹1 ಲಕ್ಷ ದಂಡ ವಿಧಿಸಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
‘ಸ್ವಾತಂತ್ರ್ಯ ದಿನಾಚರಣೆಯಂದು (ಆಗಸ್ಟ್ 15) ರಣಥಂಬೋರ್‌ನ ಹುಲಿ ಸಂರಕ್ಷಿತ ಪ್ರದೇಶದೊಳಗೆ ಸಫಾರಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಜತೆಗೆ, ಪ್ರವಾಸಿಗರಿಗೆ ಪ್ರವೇಶ ಮತ್ತು ಖಾಸಗಿ ವಾಹನಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿದ್ದರೂ ಕೂಡ ಎಸ್‌ಯುವಿಗಳಲ್ಲಿ ರ್‍ಯಾಲಿ ನಡೆಸಲು ರೇಂಜರ್ ಮತ್ತು ಗಾರ್ಡ್ ಅನುಮತಿ ನೀಡಿದ್ದಾರೆ’ ಎಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಅರಣ್ಯ ರಕ್ಷಕರಾದ ವಿಷ್ಣು ಗುಪ್ತಾ ಮತ್ತು ಸುರೇಶ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅರಣ್ಯ ಇಲಾಖೆ ಹೇಳಿದೆ.
‘ಪ್ರಕರಣ ಸಂಬಂಧ ದಂಡ ಪಾವತಿಸಿದ ಬಳಿಕ ಎಸ್‌ಯುವಿ ವಾಹನಗಳನ್ನು ಬಿಡುಗಡೆ ಮಾಡಿದ್ದೇವೆ. ಆದರೆ, ರ್‍ಯಾಲಿ ಆಯೋಜಕರ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಮುಖ್ಯ ವನ್ಯಜೀವಿ ವಾರ್ಡನ್ ಪಿ.ಕೆ. ಉಪಾಧ್ಯಾಯ ತಿಳಿಸಿದ್ದಾರೆ.
‘ಅದೃಷ್ಟವಶಾತ್ ರ್‍ಯಾಲಿಯಲ್ಲಿ ಭಾಗವಹಿಸಿದ್ದವರು ಯಾರೂ ಕೂಡ ಮರಗಳಿಗೆ ಹಾನಿ ಅಥವಾ ಹಾರ್ನ್ ಮಾಡುವಂತಹ ಇತರೆ ಯಾವುದೇ ವಸ್ತುಗಳನ್ನು ಬಳಸಿಲ್ಲ. ಒಂದು ವೇಳೆ ಹಾಗೇನಾದರೂ ಮಾಡಿದ್ದರೆ ದಂಡ ಪಾವತಿಸಿದರೂ ವಾಹನಗಳನ್ನು ಬಿಡುಗಡೆ ಮಾಡುತ್ತಿರಲಿಲ್ಲ‘ ಎಂದು ಉಪಾಧ್ಯಾಯ ಹೇಳಿದ್ದಾರೆ.
ಆಟೋ ಚಾಲಕ ರತ್ತನ್ ಧಿಲ್ಲೋನ್ ಅವರು ಘಟನೆಯ ವಿಡಿಯೊವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದು, ‘ಈ ರೀತಿ ಗಂಭೀರ ಸ್ವರೂಪದ ನಿರ್ಲಕ್ಷ್ಯಕ್ಕೆ ಮಹೀಂದ್ರಾ ಕಂಪನಿ ಹೊಣೆ ಹೊತ್ತುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
Over 10 vehicles were seized after an adventure drive organized by the official Mahindra team in Tiger Zone 8 of Ranthambore.
— Rattan Dhillon (@ShivrattanDhil1) August 17, 2024
The forest department is now pursuing legal action against Mahindra Adventure officials.
It's alarming that such an event could occur under the watch… pic.twitter.com/f24Kki1vl3
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.