ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್‌ಕೋಟ್‌ ಅಗ್ನಿ ದುರಂತ: ಮತ್ತೆ ಹೈಕೋರ್ಟ್‌ ಛೀಮಾರಿ

Published 6 ಜೂನ್ 2024, 16:16 IST
Last Updated 6 ಜೂನ್ 2024, 16:16 IST
ಅಕ್ಷರ ಗಾತ್ರ

ಅಹಮದಾಬಾದ್‌: ಮಕ್ಕಳು ಸೇರಿ 27 ಜನರ ಸಾವಿಗೆ ಕಾರಣವಾದ ರಾಜ್‌ಕೋಟ್‌ ಟಿಆರ್‌ಪಿ ಗೇಮ್‌ ಜೋನ್ ಅಗ್ನಿ ದುರಂತವನ್ನು ತಡೆಗಟ್ಟುವಲ್ಲಿ ಮುನ್ಸಿಪಲ್‌ ಕಮಿಷನರ್‌ಗಳಂತಹ ಹಿರಿಯ ಅಧಿಕಾರಿಗಳ ವಿರುದ್ಧ ಏಕೆ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಗುಜರಾತ್‌ ಹೈಕೋರ್ಟ್‌ ಗುರುವಾರ ಮತ್ತೊಮ್ಮೆ ಅಲ್ಲಿನ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ.

ನ್ಯಾಯಮೂರ್ತಿ ಬಿರೇನ್‌ ವೈಷ್ಣವ್‌ ನೇತೃತ್ವದ ವಿಶೇಷ ಪೀಠ ಈ ಕುರಿತು ವಿಚಾರಣೆ ನಡೆಸಿತು.

‘ನಗರಸಭೆ ಆಯುಕ್ತರ ಜವಾಬ್ದಾರಿ ಏನು, ಗೇಮ್‌ ಜೋನ್‌ ಆರಂಭವಾದಾಗ ಇದ್ದ ಆಯುಕ್ತರ ಪ್ರಮಾಣ ಪತ್ರ ಎಲ್ಲಿ? ಅವರ ವಿವರಣೆ ಏನಿದೆ? ಅಗ್ನಿಶಾಮಕ ಇಲಾಖೆಯಿಂದ ಕಾಲ ಕಾಲಕ್ಕೆ ತಪಾಸಣೆ ನಡೆದಿಲ್ಲ, ಅವರನ್ನು ಏಕೆ ಅಮಾನತು ಮಾಡಿಲ್ಲ?’ ಎಂದು ಪೀಠ ಪ್ರಶ್ನಿಸಿತು.

‘ಮೇಲಿನ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಆದರೆ ಆಯುಕ್ತರನ್ನು ಏಕೆ ಅಮಾನತು ಮಾಡಿಲ್ಲ? ನೀವು ಒಬ್ಬರಿಂದ ಮತ್ತೊಬ್ಬರತ್ತ ಚೆಂಡನ್ನು ಎಸೆಯುತ್ತ ಆಟ ಆಡುತ್ತಿದ್ದೀರಾ? ಅಗ್ನಿಶಾಮಕ ಇಲಾಖೆ, ತಾಲ್ಲೂಕು ಅಭಿವೃದ್ಧಿ ಅಧಿಕಾರಿ, ಆಯುಕ್ತರು, ನಂತರ ನಗರ ಯೋಜನೆ ಇಲಾಖೆ... ಹೀಗೆ ಆಟ ಮುಂದುವರಿಸಿದ್ದೀರಾ’ ಎಂದು ಪೀಠ ಖಾರವಾಗಿ ಕೇಳಿತು.

‘ಗೇಮ್‌ ಜೋನ್‌ನ ಅಕ್ರಮ ನಿರ್ಮಾಣದ ಬಗ್ಗೆ ಗೊತ್ತಾದ ಬಳಿಕ ಪಾಲಿಕೆಯು 2023ರ ಜೂನ್‌ನಲ್ಲಿ ಅದನ್ನು ಕೆಡವಲು ನೋಟಿಸ್‌ ಜಾರಿ ಮಾಡಿದೆ ಎಂಬುದು ದಾಖಲೆಗಳಿಂದ ತಿಳಿದು ಬರುತ್ತದೆ. ಜೂನ್‌ 8ರಂದು ಅಕ್ರಮ ನಿರ್ಮಾಣ ಕೆಡವಲು ಆದೇಶ ಹೊರಡಿಸಲಾಗಿದೆ. ಆದರೆ ಆ ನಂತರ ಏನಾಯಿತು. 27 ಜೀವಗಳು ಹೋಗುವವರೆಗೂ ನೀವು ವಿಶ್ರಾಂತಿಯಲ್ಲಿದ್ದಿರಾ?’ ಎಂದು ಪೀಠ ಪ್ರಶ್ನೆ ಮಾಡಿತು.

ಈ ಬೆಳವಣಿಗೆಗಳ ಬಗ್ಗೆ ಆಯುಕ್ತರ ಕಚೇರಿಗೆ ತಿಳಿದಿರಲಿಲ್ಲ ಎಂದು ರಾಜ್‌ಕೋಟ್‌ ಮುನ್ಸಿಪಲ್‌ ಕಾರ್ಪೊರೇಷನ್‌ (ಆರ್‌ಎಂಸಿ) ಪರ ವಕೀಲರು ಪ್ರತಿಕ್ರಿಯಿಸಿದರು.

ಏತನ್ಮಧ್ಯೆ, ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಾಥಮಿಕ ವರದಿಯನ್ನು ರಾಜ್ಯ ಸರ್ಕಾರವು ಸಲ್ಲಿಸಿದೆ. ಆರ್‌ಎಂಸಿ, ಪೊಲೀಸ್, ರಸ್ತೆ ಮತ್ತು ಕಟ್ಟಡ ಇಲಾಖೆಯ ಕಡೆಯಿಂದ ಗಂಭೀರ ನಿರ್ಲಕ್ಷ್ಯ ಆಗಿದೆ ಎಂದು ವರದಿ ಎತ್ತಿ ತೋರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT