ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

2024ರ ಲೋಕಸಭಾ ಚುನಾವಣೆ | ಪ್ರಾದೇಶಿಕ ಪಕ್ಷಗಳಿಗೆ ದೊಡ್ಡ ಪಾತ್ರ: ಅಮರ್ತ್ಯ

‘ಬಿಜೆಪಿಗೆ ಎದುರಾಳಿಯೇ ಇಲ್ಲ ಎಂದು ಭಾವಿಸುವುದು ತಪ್ಪು’
Last Updated 14 ಜನವರಿ 2023, 19:31 IST
ಅಕ್ಷರ ಗಾತ್ರ

ಕೋಲ್ಕತ್ತ: ಲೋಕಸಭೆಗೆ 2024ರಲ್ಲಿ ನಡೆಯಲಿರುವ ಚುನಾವಣೆ ಯಲ್ಲಿ ಪ್ರಾದೇಶಿಕ ಪಕ್ಷಗಳು ಮಹತ್ವದ ಪಾತ್ರ ವಹಿಸಲಿವೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಎದು ರಾಳಿಯೇ ಇರುವುದಿಲ್ಲ ಎಂದು ಭಾವಿ ಸುವುದು ತಪ್ಪಾಗಬಹುದು ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಪ್ರಾದೇಶಿಕ ಪಕ್ಷಗಳಾದ ಡಿಎಂಕೆ, ಟಿಎಂಸಿ ಈ ಬಾರಿ ಮಹತ್ವದ ಪಾತ್ರ ವಹಿಸಲಿವೆ. ಸಮಾಜವಾದಿ ಪಕ್ಷಕ್ಕೂ ತಕ್ಕಮಟ್ಟಿನ ನೆಲೆ ಇದ್ದು ಅದು ಹಾಗೆಯೇ ಮುಂದುವರಿಯಲಿದೆಯೇ ಎಂಬುದನ್ನು ಹೇಳಲಾಗದು. ಟಿಎಂಸಿಯ ಮಮತಾ, ಟಿಆರ್‌ಎಸ್‌ನ ಕೆ.ಚಂದ್ರಶೇಖರ ರಾವ್‌, ಎಎಪಿಯ ಅರವಿಂದ ಕೇಜ್ರಿವಾಲ್ ಸೇರಿದಂತೆ ಪ್ರಾದೇಶಿಕ ಪಕ್ಷಗಳ ನಾಯ ಕರು ಕಳೆದ ಚುನಾವಣೆಯಲ್ಲಿ ‘ಫೆಡರಲ್ ಫ್ರಂಟ್’ ರಚಿಸಿ ಸಭೆ ನಡೆಸಿದ್ದರು’ ಎಂದು ‘ಪಿಟಿಐ’ಗೆ ನೀಡಿದ ಸಂದರ್ಶನದಲ್ಲಿ ಸೇನ್ ನೆನಪಿಸಿಕೊಂಡಿದ್ದಾರೆ.

ಹಿಂದೂಗಳ ಪರವಾದ ಪಕ್ಷ ಎಂದು ಬಿಂಬಿಸಿ ಅಧಿಕಾರಕ್ಕೆ ಬಂದ ಬಿಜೆಪಿಯ ಸ್ಥಾನವನ್ನು ಬೇರೊಂದು ಪಕ್ಷದಿಂದ ತುಂಬಲು ಸಾಧ್ಯವಾಗುವುದಿಲ್ಲ ಎಂಬ ಮಾತುಗಳನ್ನು ಒಪ್ಪುವುದು ತಪ್ಪಾಗುತ್ತದೆ. ಎನ್‌ಸಿಪಿ, ಜೆಡಿಯು ಹಾಗೂ ಕಾಂಗ್ರೆಸ್ ಹೊಸ ಮೈತ್ರಿಕೂಟಕ್ಕೆ ಕರೆ ನೀಡಿವೆ. ವಿರೋಧ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಿದರೆ ಬಿಜೆಪಿಯನ್ನು ಸೋಲಿಸಬಹುದು ಎಂಬುದಕ್ಕೆ ಈ ಪಕ್ಷಗಳು ಒತ್ತು ನೀಡಿವೆ’ ಎಂದು ಸೇನ್ ಹೇಳಿದ್ದಾರೆ.

‘ಭಾರತದ ದೃಷ್ಟಿಕೋನವನ್ನು ಬಿಜೆಪಿ ಬಹುವಾಗಿ ದುರ್ಬಲಗೊಳಿಸಿದೆ. ಭಾರತ ಎಂದರೆ ಹಿಂದೂಗಳ ದೇಶ ಮತ್ತು ಹಿಂದಿ ಮಾತನಾಡುವವರ ದೇಶ ಎಂಬ ಸಂಕುಚಿತ ಅರ್ಥ ಬರುವಂತೆ ಮಾಡಿದೆ. ದೇಶದಲ್ಲಿ ಇಂದು ಬಿಜೆಪಿಗೆ ಪರ್ಯಾಯ ಇಲ್ಲ ಎಂದಾದರೆ ಅದು ನಿಜಕ್ಕೂ ಬೇಸರ. ಬಿಜೆಪಿಯು ಪ್ರಬಲ ಹಾಗೂ ಶಕ್ತಿಯುತ ಎಂದು ಅನಿಸಿದರೂ, ಅದಕ್ಕೂ ದೌರ್ಬಲ್ಯಗಳಿವೆ. ವಿರೋಧ ಪಕ್ಷಗಳಿಗೆ ಇಚ್ಛಾಶಕ್ತಿ ಬೇಕು’ ಎಂದು ಅಮರ್ತ್ಯ ಸೇನ್ ಹೇಳಿದ್ದಾರೆ.

‘2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲ್ಲುವ ಸಾಮರ್ಥ್ಯವಿದೆಯೇ ಎಂಬುದರ ಕುರಿತು ಸಂದೇಹವಿದೆ. ಆ ಪಕ್ಷವು ದುರ್ಬಲವಾಗಿದೆ. ಕಾಂಗ್ರೆಸ್‌ನ ಮೇಲೆ ಎಷ್ಟರ ಮಟ್ಟಿನ ಭರವಸೆ ಇಡಬಹುದು ಎಂಬುದೂ ಗೊತ್ತಾಗುತ್ತಿಲ್ಲ. ಆದರೆ, ಇಡೀ ಭಾರತದ ದೃಷ್ಟಿಕೋನ ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರ ಇದೆ. ಇದನ್ನು ಬೇರೆ ಯಾವ ಪಕ್ಷವೂ ರೂಪಿಸಿಕೊಳ್ಳಲಾಗದು. ಆದರೆ ಪಕ್ಷದೊಳಗೆ ಸಾಕಷ್ಟು ವಿಭಜನೆಗಳು ಆಗಿವೆ’ ಎಂದು ಅಮರ್ತ್ಯ ಸೇನ್ ಹೇಳಿದ್ದಾರೆ.

‘ಸಿಎಎ ಹಿಂದೆ ಅಲ್ಪಸಂಖ್ಯಾತರ ಕಡೆಗಣನೆ ಉದ್ದೇಶ’
‘ಪೌರತ್ವ (ತಿದ್ದುಪಡಿ) ಕಾಯ್ದೆ’ಯ (ಸಿಎಎ) ಜಾರಿಯಿಂದ ದೇಶದ ಆಗುಹೋಗುಗಳಲ್ಲಿ ಅಲ್ಪಸಂಖ್ಯಾತರ ಪಾತ್ರವು ಕುಗ್ಗಬಹುದು ಮತ್ತು ಬಹುಸಂಖ್ಯಾತ ಶಕ್ತಿಗಳಿಗೆ ಇನ್ನೂ ಹೆಚ್ಚಿನ ಉತ್ತೇಜನ ದೊರೆಯಬಹುದು ಎಂದು ಅಮರ್ತ್ಯ ಸೇನ್ ಅವರು ಅಭಿಪ್ರಾಯಪಟ್ಟಿದ್ದಾರೆ.

‘ದೇಶದಲ್ಲಿ ಅಲ್ಪಸಂಖ್ಯಾತರಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಮಹತ್ವ ಸಿಗದಂತೆ ನೋಡಿಕೊಳ್ಳುವುದು ಸಿಎಎ ಜಾರಿಗೆ ತಂದ ಬಿಜೆಪಿ ಸರ್ಕಾರದ ಉದ್ದೇಶಗಳಲ್ಲಿ ಒಂದಾಗಿತ್ತು. ಹಿಂದೂ ಬಹುಸಂಖ್ಯಾತರಿಗೆ ಎಷ್ಟು ಮಹತ್ವ ನೀಡಲಾಗಿದೆಯೋ, ಅಲ್ಪಸಂಖ್ಯಾತರ ಪಾತ್ರವನ್ನು ಅಷ್ಟೇ ಕಡೆಗಣಿಸಲಾಗಿದೆ’ ಎಂದು ಹೇಳಿದ್ದಾರೆ.

‘ಬಾಂಗ್ಲಾದೇಶ ಅಥವಾ ಪಶ್ಚಿಮ ಬಂಗಾಳದ ಅಲ್ಪಸಂಖ್ಯಾತರನ್ನು ಸ್ಥಳೀಯರು ಎಂದು ಪರಿಗಣಿಸುವ ಬದಲು ವಿದೇಶಿಯರು ಎಂದು ಘೋಷಿಸುವ ಮೂಲಕ ತಾರತಮ್ಯದ ಕ್ರಮ ಅನುಸರಿಸುವುದು ದುರದೃಷ್ಟಕರ. ಜಾತ್ಯತೀತ ಹಾಗೂ ಸಮಾನತೆಯ ದೇಶವಾಗಿರುವ ಭಾರತದಲ್ಲಿ ಇಂತಹ ಕ್ರಮಗಳಿಗೆ ಅರ್ಥವೇ ಇಲ್ಲ. ಮೂಲತಃ ಇದೊಂದು ಕೆಟ್ಟ ನಡೆ’ ಎಂದು ಸೇನ್ ಹೇಳಿದ್ದಾರೆ.

‘ಬಿಜೆಪಿ ಆಡಳಿತ ಸುಧಾರಿಸಿದೆ ಎಂದು ನನಗೆ ಅನಿಸುತ್ತಿಲ್ಲ. ಮಹಾತ್ಮ ಗಾಂಧಿ ಅವರು ಒಂದು ಸಮುದಾಯವನ್ನು ಮತ್ತೊಂದರ ವಿರುದ್ಧ ಎಂದೂ ಎತ್ತಿಕಟ್ಟಿ ರಾಜಕೀಯ ಮಾಡಿರಲಿಲ್ಲ. ಧಾರ್ಮಿಕವಾಗಿ ಅವರು ಹಿಂದೂ ಧರ್ಮಕ್ಕೆ ಬದ್ಧರಾಗಿದ್ದರೂ
ಮುಸ್ಲಿಂ ಸಮುದಾಯವನ್ನು ಬೆಂಬಲಿಸುವುದರ ಪರವಾಗಿದ್ದರು. ಸ್ವಾತಂತ್ರ್ಯಪೂರ್ವದಲ್ಲಿ ಇದ್ದುದಕ್ಕಿಂತ ಹೆಚ್ಚು ಬೆಂಬಲವನ್ನು ನೀಡಿದ್ದರು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಗಾನಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ನೀಡುವುದು ಸಿಎಎ ಉದ್ದೇಶ. 2019ರ ಡಿ.11ರಂದು ಈ ಮಸೂದೆಗೆ ಸಂಸತ್ತು ಒಪ್ಪಿಗೆ ನೀಡಿತ್ತು. ಕಾಯ್ದೆ ಜಾರಿಗೊಳಿಸಲು ನಿಯಮಗಳನ್ನು ಇನ್ನಷ್ಟೇ ರೂಪಿಸಬೇಕಿದೆ.

*
ಮಮತಾ ಬ್ಯಾನರ್ಜಿಗೆ ಪ್ರಧಾನಿಯಾಗುವ ಅರ್ಹತೆ ಇದ್ದರೂ ಬಿಜೆಪಿ ವಿರುದ್ಧ ಅಸಮಾಧಾನ ಹೊಂದಿರುವ ಪಕ್ಷಗಳನ್ನು ಎಷ್ಟರ ಮಟ್ಟಿಗೆ ಅವರು ಒಗ್ಗೂಡಿಸುತ್ತಾರೆ ಎಂಬುದು ಮುಖ್ಯ.
-ಅಮರ್ತ್ಯ ಸೇನ್‌, ಅರ್ಥಶಾಸ್ತ್ರಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT