ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಧ್ಯಂತರ ಜಾಮೀನಿಗೆ ಸೊರೇನ್‌ ಅರ್ಜಿ; ಇ.ಡಿ ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್

Published 17 ಮೇ 2024, 15:22 IST
Last Updated 17 ಮೇ 2024, 15:22 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ಮಧ್ಯಂತರ ಜಾಮೀನು ನೀಡಬೇಕು ಎಂದು ಕೋರಿ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ಮೇ 20ರೊಳಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್‌, ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಶುಕ್ರವಾರ ನಿರ್ದೇಶಿಸಿತು. 

ಈ ಸಂಬಂಧ ಸಂಕ್ಷಿಪ್ತ ವಿವರಣೆ ನೀಡಬೇಕು ಎಂದು ಸೂಚಿಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್‌ ದತ್ತಾ ಅವರಿದ್ದ ಪೀಠವು, ಅರ್ಜಿಯ ಮುಂದಿನ ವಿಚಾರಣೆಯನ್ನು ಮೇ 21ಕ್ಕೆ ನಿಗದಿಪಡಿಸಿತು.

ಸೊರೇನ್‌ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ಜಾಮೀನು ದೊರೆತಲ್ಲಿ ಸೊರೇನ್‌ ಅವರು ಮತ್ತೆ ಜೂನ್ 2ರಂದು ಶರಣಾಗಲಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ‘ಈ ಪ್ರಕರಣದಲ್ಲಿ ನನ್ನ ವಿರುದ್ಧ ಯಾವುದೇ ಸಾಕ್ಷ್ಯಗಳು ಇಲ್ಲ. ಈಗ ಜಾಮೀನು ಸಿಗದಿದ್ದಲ್ಲಿ ಚುನಾವಣೆಯೇ ಮುಗಿದುಹೋಗಲಿದೆ’ ಎಂದು ಸೊರೇನ್‌ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.

ಇ.ಡಿ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, ‘ಸೊರೇನ್‌ ಅವರನ್ನು ಬಹಳ ಹಿಂದೆಯೇ ಬಂಧಿಸಲಾಗಿದೆ. ಸಾಮಾನ್ಯ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದನ್ನೂ ಅವರು ಪ್ರಶ್ನಿಸಿಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT