ಲಖನೌ: ಊಟದ ಡಬ್ಬಿಯಲ್ಲಿ ಮಾಂಸಾಹಾರವನ್ನು ತಂದಿದ್ದ ಮೂರನೇ ತರಗತಿ ವಿದ್ಯಾರ್ಥಿಯೊಬ್ಬನನ್ನು ಶಾಲೆಯಿಂದ ಹೊರಹಾಕಿರುವ ಘಟನೆ ಉತ್ತರ ಪ್ರದೇಶದ ಅಮರೋಹಾ ಜಿಲ್ಲೆಯಲ್ಲಿ ನಡೆದಿದೆ.
ಖಾಸಗಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿ ಗುರುವಾರ ಊಟದ ಡಬ್ಬಿಯಲ್ಲಿ ಬಿರಿಯಾನಿ ತಂದಿದ್ದ. ಈ ಕಾರಣಕ್ಕೆ ಶಾಲಾ ಪ್ರಾಂಶುಪಾಲರು ವಿದ್ಯಾರ್ಥಿಗೆ ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಲಿಲ್ಲ ಎಂದು ವರದಿಯಾಗಿದೆ.
ಈ ಪ್ರಕರಣ ಸಂಬಂಧ ಪ್ರಾಂಶುಪಾಲ ಮತ್ತು ವಿದ್ಯಾರ್ಥಿಯ ತಾಯಿಯ ನಡುವೆ ನಡೆದಿರುವ ವಾಗ್ವಾದದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘ಮಾಂಸಾಹಾರವನ್ನು ಶಾಲೆಗೆ ತರದಂತೆ ಹಲವು ಬಾರಿ ಹೇಳಿದ್ದರೂ, ವಿದ್ಯಾರ್ಥಿಯು ಹಲವು ತಿಂಗಳುಗಳಿಂದ ಊಟದ ಡಬ್ಬಿಯಲ್ಲಿ ಮಾಂಸಾಹಾರವನ್ನು ತರುತ್ತಿದ್ದಾನೆ’ ಎಂದು ಪ್ರಾಂಶುಪಾಲ ಹೇಳುತ್ತಿರುವ ದೃಶ್ಯ ವಿಡಿಯೊ ತುಣುಕಿನಲ್ಲಿದೆ.
‘ಎಲ್ಲ ಮಕ್ಕಳೂ ಮಾಂಸಾಹಾರ ತಿನ್ನುವಂತೆ ಮಾಡಿ, ಅವರೆಲ್ಲರನ್ನೂ ಇಸ್ಲಾಂಗೆ ಮತಾಂತರ ಮಾಡಲು ನಿಮ್ಮ ಮಗ ಬಯಸಿದ್ದಾನೆ’ ಎಂದು ಬಾಲಕನ ತಾಯಿಗೆ ಪ್ರಾಂಶುಪಾಲರು ಹೇಳುತ್ತಿರುವುದೂ ವಿಡಿಯೊದಲ್ಲಿದೆ.
ಆದರೆ, ವಿದ್ಯಾರ್ಥಿಯ ತಾಯಿ ಈ ಆರೋಪ ನಿರಾಕರಿಸಿದ್ದು, ‘ತರಗತಿಯಲ್ಲಿ ಮಕ್ಕಳು ಹಿಂದೂ–ಮುಸ್ಲಿಂ ಎಂದೆಲ್ಲ ಮಾತನಾಡುತ್ತಾರೆ ಎಂಬುದಾಗಿ ಮಗ ನನ್ನೊಂದಿಗೆ ಹೇಳುತ್ತಿದ್ದ. ಇಲ್ಲಿ ಅವನಿಗೆ ಅದನ್ನೇ ಕಲಿಸಲಾಗುತ್ತಿದೆ’ ಎಂದು ಆಕೆ ಹೇಳುತ್ತಿರುವ ದೃಶ್ಯವೂ ತುಣುಕಿನಲ್ಲಿದೆ.
ತನ್ನ ಮಗನನ್ನು ಒತ್ತೆಯಾಳಾಗಿ ಇರಿಸಿಕೊಂಡು ಶಾಲೆಯ ಕೊಠಡಿಯೊಂದರಲ್ಲಿ ಕೂಡಿಹಾಕಲಾಗಿತ್ತು ಎಂಬ ಆರೋಪವನ್ನೂ ತಾಯಿ ಮಾಡಿದ್ದಾರೆ. ಇದನ್ನು ಶಾಲಾ ಆಡಳಿತ ನಿರಾಕರಿಸಿದೆ.
ಘಟನೆಯ ಬಳಿಕ ಶಾಲಾ ಆಡಳಿತ ಮಂಡಳಿ ಮತ್ತೊಂದು ವಿಡಿಯೊವನ್ನು ಬಿಡುಗಡೆ ಮಾಡಿದ್ದು, 'ಶಾಲೆಯಿಂದ ಹೊರಕ್ಕೆ ಹಾಕಲಾದ ವಿದ್ಯಾರ್ಥಿಯು ಧಾರ್ಮಿಕ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದ’ ಎಂದು ತರಗತಿಯ ಇತರೆ ಕೆಲವು ವಿದ್ಯಾರ್ಥಿಗಳು ಅದರಲ್ಲಿ ಹೇಳಿಕೊಂಡಿದ್ದಾರೆ.