ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಅಧಿಕಾರದಲ್ಲಿರುವವರಿಗೆ ಜಾತ್ಯತೀತತೆ ನಿಕೃಷ್ಟವಾಗಿದೆ: ಸೋನಿಯಾ ಗಾಂಧಿ

Published 2 ಜನವರಿ 2024, 7:41 IST
Last Updated 2 ಜನವರಿ 2024, 7:41 IST
ಅಕ್ಷರ ಗಾತ್ರ

ತಿರುವನಂತಪುರ: ಜಾತ್ಯತೀತತೆಯನ್ನು ಭಾರತದ ಪ್ರಜಾಪ್ರಭುತ್ವದ ಆಧಾರ ಸ್ತಂಭ ಎಂದು ಬಣ್ಣಿಸಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಈಗ ಅಧಿಕಾರದಲ್ಲಿರುವವರು ಜಾತ್ಯತೀತತೆಯನ್ನು ನಿಕೃಷ್ಟವಾಗಿ ನೋಡುತ್ತಿದ್ದಾರೆ. ಇದರ ಪರಿಣಾಮವಾಗಿ ಸಮಾಜದಲ್ಲಿ ಧ್ರುವೀಕರಣ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

'ಪ್ರಜಾಪ್ರಭುತ್ವಕ್ಕೆ ಬದ್ಧರಾಗಿದ್ದೇವೆ ಎಂದು ಹೇಳುವವರು ಅದೇ ಸಮಯದಲ್ಲಿ ಅದಕ್ಕಿರುವ ರಕ್ಷಣಾತ್ಮಕ ಅಂಶಗಳನ್ನು ದುರ್ಬಲಗೊಳಿಸುತ್ತಿದ್ದಾರೆ. ಅದರ ಪರಿಣಾಮ, ನಮ್ಮ ರಾಷ್ಟ್ರವನ್ನು ಸಾಮರಸ್ಯದತ್ತ ಕೊಂಡೊಯ್ಯುವ ಮಾರ್ಗಗಳು ಹಾನಿಗೊಳಗಾಗುತ್ತಿವೆ. ಅದರ ಫಲಿತಾಂಶಗಳನ್ನು ಈಗಾಗಲೇ ನೋಡುತ್ತಿದ್ದೀರಿ. ಸಮಾಜದಲ್ಲಿ ಧ್ರುವೀಕರಣವನ್ನು ಹೆಚ್ಚಿಸಿದೆ’ಎಂದು ಸೋನಿಯಾ ಮನೋರಮಾ ಇಯರ್‌ಬುಕ್ 2024ರ ಲೇಖನದಲ್ಲಿ ಬರೆದಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಗಳು ಆಳವಾಗಿ ಪರಸ್ಪರ ಸಂಬಂಧ ಹೊಂದಿವೆ. ಇವೆರಡು ರೈಲ್ವೆ ಹಳಿಗಳಿದ್ದಂತೆ. ಸಾಮರಸ್ಯದ ಆದರ್ಶ ಸಮಾಜದ ನಿರ್ಮಾಣಕ್ಕೆ ನಿತ್ಯ ಸರ್ಕಾರಕ್ಕೆ ಮಾರ್ಗದರ್ಶನ ಮಾಡುತ್ತವೆ ಎಂದಿದ್ದಾರೆ.

‘ನಾವು ಚರ್ಚೆಗಳು, ಭಾಷಣಗಳು, ಪಠ್ಯಪುಸ್ತಕಗಳು ಮತ್ತು ಸಂವಿಧಾನದ ಮುನ್ನುಡಿಯಲ್ಲಿ ಓದಿರುವ ಈ ಪದಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಈ ಪರಿಚಿತತೆಯ ಹೊರತಾಗಿಯೂ ಈ ಪರಿಕಲ್ಪನೆಗಳ ಹಿಂದಿನ ಆಳವಾದ ಅರ್ಥಗಳು ಸಾಮಾನ್ಯವಾಗಿ ಹಲವರಿಗೆ ಅಸ್ಪಷ್ಟವಾಗಿರುತ್ತವೆ. ಈ ಪದಗಳ ಸ್ಪಷ್ಟ ತಿಳುವಳಿಕೆ ಪಡೆದರೆ ಪ್ರತಿಯೊಬ್ಬರಿಗೂ ಸಹಾಯವಾಗುತ್ತದೆ. ನಾಗರಿಕರು ಭಾರತದ ಇತಿಹಾಸ, ವರ್ತಮಾನದ ಸವಾಲುಗಳು ಮತ್ತು ಭವಿಷ್ಯದ ಹಾದಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ’ ಎಂದೂ ಅವರು ಹೇಳಿದ್ದಾರೆ.

ಜಾತ್ಯತೀತತೆಯನ್ನು ಹಲವು ವಿಧಗಳಲ್ಲಿ ಅರ್ಥೈಸಬಹುದು. ಆದರೆ, ಭಾರತಕ್ಕೆ ಮಹಾತ್ಮ ಗಾಂಧೀಜಿಯವರು ಹೇಳಿದ 'ಸರ್ವ ಧರ್ಮ ಸಮ ಭಾವ' ಎಂಬುದೇ ಸೂಕ್ತ ಎಂದಿದ್ದಾರೆ.

ಭಾರತವು ಬಹು ಧರ್ಮಗಳ ಸಮಾಜ ಎಂಬ ಬಗ್ಗೆ ಜವಾಹರಲಾಲ್ ನೆಹರೂ ಅವರಿಗೆ ಅರಿವಿತ್ತು. ಹಾಗಾಗಿ, ಜಾತ್ಯತೀತ ರಾಷ್ಟ್ರ ನಿರ್ಮಾಣಕ್ಕೆ ನಿರಂತರವಾಗಿ ಶ್ರಮಿಸಿದರು ಎಂದು ಸೋನಿಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT