ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೆಲಂಗಾಣ: ಕೆಸಿಆರ್‌ ಸೋಲಿಸಲು ‘ಕೈ’ ಕಾರ್ಯತಂತ್ರ

ಕಾಮಾರೆಡ್ಡಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ವಿರುದ್ಧ ರೇವಂತ್ ರೆಡ್ಡಿ ಕಣಕ್ಕಿಳಿಸಿದ ಕಾಂಗ್ರೆಸ್‌
Published 9 ನವೆಂಬರ್ 2023, 13:44 IST
Last Updated 9 ನವೆಂಬರ್ 2023, 13:44 IST
ಅಕ್ಷರ ಗಾತ್ರ

ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರನ್ನು ಸೋಲಿಸಲು ಕಾರ್ಯತಂತ್ರ ರೂಪಿಸಿರುವ ಕಾಂಗ್ರೆಸ್, ಪಕ್ಷದ ರಾಜ್ಯ ಅಧ್ಯಕ್ಷ ಎ. ರೇವಂತ್ ರೆಡ್ಡಿ ಅವರನ್ನು ಬಿಆರ್‌ಎಸ್‌ ಪಕ್ಷದ ಅಧ್ಯಕ್ಷರ ವಿರುದ್ಧ ಕಣಕ್ಕಿಳಿಸಿದೆ.  

ಬಿಆರ್‌ಎಸ್‌ ಪಕ್ಷದ ಅಧ್ಯಕ್ಷರೂ ಆಗಿರುವ ಕೆ.ಚಂದ್ರಶೇಖರ ರಾವ್‌ (ಕೆಸಿಆರ್‌) ಅವರು ಈ ಬಾರಿ ಕಾಮಾರೆಡ್ಡಿ ಹಾಗೂ ಗಜ್ವೇಲ್‌ ವಿಧಾನಸಭಾ ಕ್ಷೇತ್ರದಿಂದ ಸ್ಪಧಿಸುತ್ತಿದ್ದಾರೆ. ‍ಪರಿಸ್ಥಿತಿ ಪೂರಕವಾಗಿಲ್ಲದ ಕಾರಣ ಎರಡೂ ಸ್ಥಾನಗಳನ್ನು ಅವರು ಕಳೆದುಕೊಳ್ಳಬಹುದು ಎಂಬುದು ಕಾಂಗ್ರೆಸ್‌ ಕಾರ್ಯತಂತ್ರ ನಿಪುಣರ ಲೆಕ್ಕಾಚಾರವಾಗಿದೆ.  

2014 ಹಾಗೂ 2018ರಲ್ಲಿ ಗಜ್ವೇಲ್‌ನಲ್ಲಿ ಗೆಲುವು ಕಂಡ ಕೆಸಿಆರ್, ಈ ಬಾರಿ ಕಠಿಣ ಸವಾಲು ಎದುರಿಸುತ್ತಿದ್ದಾರೆ. ಕೆಸಿಆರ್‌ ಅವರ ಒಂದುಕಾಲದ ಬಂಟ, ಈಗ ಬಿಜೆಪಿಯಲ್ಲಿರುವ ಈಟೆಲ ರಾಜೇಂದ್ರ ಅವರು ಗಜ್ವೇಲ್‌ನಲ್ಲಿ ಕಣಕ್ಕಿಳಿದಿರುವುದು, ಚುನಾವಣಾ ಲೆಕ್ಕಾಚಾರಗಳನ್ನು ಬದಲಾಯಿಸಿದೆ.

ಕಾಮಾರೆಡ್ಡಿ ಹಾಗೂ ಕೊಡಂಗಲ್ ಎರಡು ಕ್ಷೇತ್ರದಿಂದಲೂ ಸ್ಪರ್ಧಿಸುವ ಮೂಲಕ, ರೆಡ್ಡಿ ಅವರು ರಾಜ್ಯ ರಾಜಕೀಯದಲ್ಲಿ ತಮ್ಮ ಸ್ಥಾನ  ಭದ್ರಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ತೆಲಂಗಾಣದಲ್ಲಿ ಕಾಂಗ್ರೆಸ್ ಮೊದಲ ಬಾರಿಗೆ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆಯ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ.

ಕೆ. ಚಂದ್ರಶೇಖರರಾವ್‌ ವಿರುದ್ಧದ ಪೈಪೋಟಿಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್‌, ಕಾಮಾರೆಡ್ಡಿಯಲ್ಲಿ ಅಭ್ಯರ್ಥಿ ಪರ ಪ್ರಚಾರಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿಕೊಂಡಿದೆ. ಅವರು ಇಲ್ಲಿ ಶುಕ್ರವಾರ ಪ್ರಚಾರ ಕೈಗೊಳ್ಳುವರು.

ಬಿಜೆಪಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಜಿ.ವಿವೇಕ್‌ ವೆಂಕಟಸ್ವಾಮಿ ಅವರು ಕಾಂಗ್ರೆಸ್ ಗೆ ಮರಳಿದ್ದಾರೆ. ಮುನುಗೋಡ್ ಕ್ಷೇತ್ರದ ಮಾಜಿ ಶಾಸಕ ಪಕ್ಷಕ್ಕೆ ಮರಳಿರುವುದು ತೆಲಂಗಾಣದಲ್ಲಿ ಸಾಕಷ್ಟು ಬದಲಾವಣೆ ತೋರಿಸುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಇದರ ನಡುವೆ ವೈಎಸ್ಆರ್‌ಟಿಪಿ ಮುಖ್ಯಸ್ಥೆ ವೈ.ಎಸ್.ಶರ್ಮಿಳಾ ಸಹ ಕಾಂಗ್ರೆಸ್‌ಗೆ ಬೆಂಬಲ ನೀಡಿರುವುದು ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. 

ತೆಲಂಗಾಣ ರಾಜ್ಯ ರಚನೆಯಾದಾಗಿನಿಂದ ಬಿಆರ್‌ಎಸ್‌ ಆಡಳಿತ ನಡೆಸುತ್ತಿದೆ. ಈ ಬಾರಿ ಬಿಆರ್‌ಎಸ್‌ಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು  ಕಾಂಗ್ರೆಸ್‌ ಹೊಂದಿದೆ. 

‘ಇಬ್ಬರು ಮಾಜಿ ಸಂಸದರು, 22 ಮಾಜಿ ಶಾಸಕರು, 8 ಮಾಜಿ ವಿಧಾನ ಪರಿಷತ್ ಸದಸ್ಯರು, 58 ಕಾರ್ಪೊರೇಟರ್‌ಗಳು, 82 ಜಿಲ್ಲಾ ಪಂಚಾಯಿತಿ ಸದಸ್ಯರ ಪೈಕಿ ಹಲವರು ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಸೇರಿದ್ದಾರೆ. ಗಾಳಿ ಯಾವ ದಿಕ್ಕಿನಲ್ಲಿ ಬೀಸುತ್ತಿದೆ ಎಂಬುದು ಬಹಳ ಸ್ಪಷ್ಟವಾಗಿದೆ. ರಾಹುಲ್ ಗಾಂಧಿ ಪ್ರಕಾರ ಕಾಂಗ್ರೆಸ್ 75ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ’ ಎಂದು ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಶ್ರೀವತ್ಸ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಕೆಸಿಆರ್ ಸ್ವತಃ ಕಾಮಾರೆಡ್ಡಿ ಕ್ಷೇತ್ರದಲ್ಲಿ ರೇವಂತ್ ರೆಡ್ಡಿ ವಿರುದ್ಧ ಸೋಲಲು ಸಜ್ಜಾಗಿದ್ದಾರೆ. ಇದು ಮುಖ್ಯಮಂತ್ರಿ ಸೋಲಿಸಲು ಕಾಂಗ್ರೆಸ್ ನ ಕಾರ್ಯತಂತ್ರದ ಭಾಗವಾಗಿದೆ. ಕೆಸಿಆರ್ ಕುಟುಂಬದ ಎಟಿಎಂ ಅನ್ನು ಡಿಸೆಂಬರ್ 3 ರಂದು ಮುಚ್ಚಲಾಗುವುದು. ಕಾಂಗ್ರೆಸ್ ಸರ್ಕಾರ ರಚಿಸುತ್ತದೆ ಮತ್ತು ಆರು ಭರವಸೆಗಳನ್ನು ಜಾರಿಗೆ ತರುತ್ತದೆ’ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ನಿಂದ ‘ಅಲ್ಪಸಂಖ್ಯಾತರಿಗಾಗಿ ಘೋಷಣೆ’ಗಳು

ಹೈದರಾಬಾದ್‌: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌ ಆ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಕೆಲವು ಘೋಷಣೆಗಳನ್ನು ಗುರುವಾರ ಮಾಡಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಇಮಾಮರು, ಮುಅಝ್ಝಿನರು, ಗ್ರಂಥಿಗಳು (ಗುರು ಗ್ರಂಥ ಸಾಹಿಬ್‌ನ ಮುಖ್ಯಸ್ಥರು) ಮತ್ತು ಚರ್ಚ್‌ಗಳ ಮುಖ್ಯಸ್ಥರಿಗೆ ₹10,000ದಿಂದ ₹12,000 ವರೆಗೆ ಮಾಸಿಕ ಗೌರವಧನ ನೀಡಲಾಗುವುದು. ಅಲ್ಪಸಂಖ್ಯಾತರ ಕಲ್ಯಾಣದ ಅನುದಾನವನ್ನು ₹ 4,000 ಕೋಟಿಗೆ ಏರಿಸಲಾಗುವುದು ಎಂಬ ಭರವಸೆಗಳು ಈ ಘೋಷಣೆಯಲ್ಲಿವೆ. 

ಮಾಜಿ ಕೇಂದ್ರ ಸಚಿವ ಸಲ್ಮಾನ್‌ ಖುರ್ಶಿದ್‌ ಮತ್ತು ತೆಲಂಗಾಣ ಕಾಂಗ್ರೆಸ್‌ ಮುಖ್ಯಸ್ಥ ಎ. ರೇವಂತ್‌ ರೆಡ್ಡಿ ‘ಅಲ್ಪಸಂಖ್ಯಾತರಿಗಾಗಿ ಘೋಷಣೆ’ ಬಿಡುಗಡೆ ಮಾಡಿದರು.    

ಮುಸ್ಲಿಂ, ಕ್ರಿಶ್ಚಿಯನ್‌, ಸಿಖ್‌ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಹೊಸ ದಂಪತಿಗೆ ₹ 1.60 ಲಕ್ಷ ನೆರವು ನೀಡಲಾಗುವುದು. ಎಂ.ಫಿಲ್‌ ಮತ್ತು ಪಿಎಚ್‌ಡಿ ವ್ಯಾಸಂಗ ಸಂಪೂರ್ಣಗೊಳಿಸಿರುವ ಯುವಜನರಿಗೆ ₹5 ಲಕ್ಷ ಆರ್ಥಿಕ ನೆರವನ್ನು ಅಬ್ದುಲ್‌ ಕಲಾಂ ತೌಫಾ–ಇ–ತಲೀಂ ಯೋಜನೆ ಅಡಿ ನೀಡಲಾಗುವುದು.  ಜೊತೆಗೆ, ಸ್ನಾತಕೋತ್ತರ ಪದವಿ ಪಡೆದವರಿಗೆ ₹ 1 ಲಕ್ಷ, ಪದವಿ ಪಡೆದವರಿಗೆ ₹ 25,000, ಇಂಟರ್‌ಮೀಡಿಯೆಟ್‌ ವ್ಯಾಸಂಗ ಮಾಡಿದವರಿಗೆ ₹ 15,000 ಮತ್ತು 10ನೇ ತರಗತಿ ವ್ಯಾಸಂಗ ಮಾಡಿದವರಿಗೆ 10,000 ನೀಡುವುದಾಗಿ ಹೇಳಿದೆ.

ಒಟ್ಟು ಜನಸಂಖ್ಯೆಯಲ್ಲಿ ಶೇ 12.7ರಷ್ಟು ಮುಸ್ಲಿಮರಿದ್ದಾರೆ. ಒಟ್ಟು 119 ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 40 ಕ್ಷೇತ್ರಗಳಲ್ಲಿ ಮುಸ್ಲಿಮರ ಮತಗಳು ನಿರ್ಣಾಯಕ ವಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT