ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಎನ್‌ಕೌಂಟರ್: ಪೊಲೀಸ್ ಅಧಿಕಾರಿ ಶರ್ಮಾಗೆ ಶರಣಾಗುವಂತೆ ಸುಪ್ರೀಂಕೋರ್ಟ್ ಸೂಚನೆ

Published 12 ಮೇ 2024, 11:21 IST
Last Updated 12 ಮೇ 2024, 11:21 IST
ಅಕ್ಷರ ಗಾತ್ರ

ನವದೆಹಲಿ: ನಕಲಿ ಎನ್‌ಕೌಂಟರ್ ಪ್ರಕರಣದ ಅಪರಾಧಿಯಾಗಿರುವ ಮುಂಬೈನ ಮಾಜಿ ಪೊಲೀಸ್‌ ಅಧಿಕಾರಿ ಪ್ರದೀ‍ಪ್ ಶರ್ಮಾ ಅವರಿಗೆ ಜಾಮೀನು ಪಡೆಯುವ ಸಲುವಾಗಿ ಕಾನೂನು ಪ್ರಕ್ರಿಯೆಗೆ ಅನುಗುಣವಾಗಿ ಪೊಲೀಸರ ಎದುರು ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಎನ್‌ಕೌಂಟರ್ ಪರಿಣತ ಎಂದೇ ಹೆಸರಾಗಿದ್ದ ಪ್ರದೀ‍ಪ್ ಶರ್ಮಾಗೆ ಬಾಂಬೆ ಹೈಕೋರ್ಟ್‌ 18 ವರ್ಷದ ಹಿಂದಿನ ‘ನಕಲಿ ಎನ್‌ಕೌಂಟರ್’ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿತ್ತು. ಬಾಂಬೆ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಪ್ರದೀ‍ಪ್ ಶರ್ಮಾ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರ ಪೀಠವು ವಿಚಾರಣೆ ಆರಂಭಿಸಿದ್ದು, ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಪ್ರಾಸಿಕ್ಯೂಷನ್‌ನಿಂದ ಯಾವುದೇ ವಿರೋಧ ವ್ಯಕ್ತವಾಗದ ಹಿನ್ನೆಲೆಯಲ್ಲಿ ಜಾಮೀನು ಮಂಜೂರಾತಿಗೆ ಸಂಬಂಧಿಸಿ ಪ್ರದೀ‍ಪ್ ಶರ್ಮಾ ಸಲ್ಲಿಸಿರುವ ಮೇಲ್ಮನವಿಯನ್ನು ಪರಿಗಣಿಸಲಾಗುವುದು ಎಂದು ಅಭಿಪ್ರಾಯಪಟ್ಟಿದೆ.

ಶರ್ಮಾ ಪರ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಅವರು ವಾದ ಮಂಡಿಸಿದ್ದಾರೆ.

ಭೂಗತ ಪಾತಕಿ ಛೋಟಾ ರಾಜನ್‌ನ ಆಪ್ತ ಎಂದು ಹೇಳಲಾಗಿದ್ದ ರಾಮ ನಾರಾಯಣ ಗುಪ್ತ ಅಲಿಯಾಸ್‌ ಲಖ್ಖಾನ್‌ ಭಯ್ಯಾ ಎಂಬಾತನ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ಶರ್ಮಾ ಅವರನ್ನು ಖುಲಾಸೆಗೊಳಿಸಿ 2013ರಲ್ಲಿ ಮುಂಬೈನ ಸೆಷನ್ಸ್‌ ಕೋರ್ಟ್ ನೀಡಿದ್ದ ಆದೇಶವನ್ನು ಇದೇ ಮಾರ್ಚ್‌ 24ರಂದು ಬಾಂಬೆ ಹೈಕೋರ್ಟ್‌ ರದ್ದುಪಡಿಸಿತ್ತು.

ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಗೌರಿ ಗೋಡ್ಸೆ ಅವರಿದ್ದ ವಿಭಾಗೀಯ ಪೀಠವು ಶರ್ಮಾಗೆ ಜೀವಾವಧಿ ಶಿಕ್ಷೆ ವಿಧಿಸಿ ಅದೇಶ ನೀಡಿತ್ತು. ಅಲ್ಲದೆ, ಮೂರು ವಾರಗಳಲ್ಲಿ ಶರಣಾಗಬೇಕು ಎಂದು ಅಪರಾಧಿಗೆ ಆದೇಶಿಸಿತ್ತು.

‘ಶರ್ಮಾರನ್ನು ಖುಲಾಸೆಗೊಳಿಸಿದ್ದ ಸೆಷನ್ಸ್‌ ಕೋರ್ಟ್‌ನ ಆದೇಶವು ಅಸಮರ್ಥನೀಯ. ವಿಚಾರಾಣಾಧೀನ ನ್ಯಾಯಾಲಯವು ಶರ್ಮಾ ವಿರುದ್ಧದ ಸಾಕ್ಷ್ಯಗಳನ್ನು ಸರಿಯಾಗಿ ಪರಿಗಣಿಸಿಲ್ಲ’ ಎಂದು ಹೈಕೋರ್ಟ್‌ನ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತ್ತು.

ಇದೇ ಪ್ರಕರಣದ ಸಂಬಂಧ ಪೊಲೀಸರು ಸೇರಿ 13 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೆಳಹಂತದ ಕೋರ್ಟ್‌ ನೀಡಿದ್ದ ಆದೇಶವನ್ನು ಪೀಠವು ಎತ್ತಿಹಿಡಿದಿತ್ತು. 13 ಪೊಲೀಸರು ಸೇರಿ 22 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು.

ನಕಲಿ ಎನ್‌ಕೌಂಟರ್‌ ಸಂಬಂಧ ಪೊಲೀಸ್‌ ಆಧಿಕಾರಿ ಶಿಕ್ಷೆಗೆ ಗುರಿಯಾದಮಹಾರಾಷ್ಟ್ರದ ಮೊದಲ ಪ್ರಕರಣ ಇದಾಗಿದೆ. ಪ್ರದೀಪ್ ಶರ್ಮಾ (63) ಸ್ವಯಂ ನಿವೃತ್ತಿ ಪಡೆದ ಬಳಿಕ ಶಿವಸೇನೆಗೆ ಸೇರಿದ್ದರು. 2019ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿ, ಸೋತಿದ್ದರು. ಮೂರು ದಶಕಗಳ ಸೇವೆಯಲ್ಲಿ ಭೂಗತ ಪಾತಕಿಗಳು, ಉಗ್ರರು, ಶಾರ್ಪ್‌ ಶೂಟರ್‌ ಸೇರಿ 113 ಕ್ರಿಮಿನಲ್‌ಗಳಿಗೆ ಅಂತ್ಯ ಹಾಡಿದ್ದರು.

ಘಟನೆಯು 2006ರ ನವೆಂಬರ್ 11ರಲ್ಲಿ ನಡೆದಿತ್ತು. ನವೀ ಮುಂಬೈನ ವಶಿಯಿಂದ ಲಖ್ಖಾನ್ ಭಯ್ಯಾನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅದೇ ದಿನ ನಾನಾ ನಾನಿ ಪಾರ್ಕ್‌ ಬಳಿ ಎನ್‌ಕೌಂಟರ್‌ ನಡೆದಿತ್ತು. ಅದೇ ವರ್ಷದ ನವೆಂಬರ್ 15ರಂದು ಲಖ್ಖಾನ್‌ ಭಯ್ಯಾ ಸಹೋದರ, ವಕೀಲ ರಾಮಪ್ರಸಾದ್ ಗುಪ್ತಾ ಇದು ‘ನಕಲಿ ಎನ್‌ಕೌಂಟರ್‌’ ಎಂದು ದೂರಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕೃತ್ಯದ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT