ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿದ್ದಲು ಗಣಿ ಹರಾಜು ಪಟ್ಟಿಯಿಂದ ತಮಿಳುನಾಡು ಹೊರಕ್ಕೆ

Last Updated 8 ಏಪ್ರಿಲ್ 2023, 9:36 IST
ಅಕ್ಷರ ಗಾತ್ರ

ತಮಿಳುನಾಡು : ಕಲ್ಲಿದ್ದಲು ಗಣಿ ಹರಾಜು ಪಟ್ಟಿಯಿಂದ ತಮಿಳುನಾಡಿನ ಕಾವೇರಿ ನದಿ ಮುಖಜ ಭೂಮಿಯನ್ನು (ಡೆಲ್ಟಾ ರಿಜನ್‌) ಕೈಬಿಟ್ಟಿರುವುದಕ್ಕೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.

ಈ ಬಗ್ಗೆ ಕೇಂದ್ರದ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ’ಕಲ್ಲಿದ್ದಲು ಗಣಿ ಹರಾಜು ಪಟ್ಟಿಯಿಂದ ತಮಿಳುನಾಡನ್ನು ಕೈಬಿಡುವಂತೆ ಕೆ.ಅಣ್ಣಾಮಲೈ ಅವರು ಮನವಿ ಮಾಡಿದ್ದರು. ಒಕ್ಕೂಟ ವ್ಯವಸ್ಥೆಯ ಘನತೆ ಕಾಪಾಡಲು ಮತ್ತು ತಮಿಳುನಾಡು ಜನತೆಯ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಬರೆದುಕೊಂಡಿದ್ದಾರೆ.

’ಕೆ.ಅಣ್ಣಮಲೈ ಬೆಂಗಳೂರಿನಲ್ಲಿ ನನ್ನನ್ನು ಭೇಟಿಯಾಗಿ ಈ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದರು. ಏಳನೇ ಸುತ್ತಿನ ವಾಣಿಜ್ಯ ಹರಾಜು ಪ್ರಕ್ರಿಯೆಯಲ್ಲಿ ತಮಿಳುನಾಡಿನ ಮೂರು ಲಿಗ್ನೈಟ್‌ (ಬ್ರೌನ್‌ ಕೋಲ್‌) ಗಣಿಗಳನ್ನು ಪಟ್ಟಿಯಿಂದ ಹೊರ ಇಡಲು ವಿನಂತಿಸಿಕೊಂಡಿದ್ದರು. ತಮಿಳುನಾಡು ಜನರ ಹಿತಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಜೋಶಿ ತಿಳಿಸಿದ್ದಾರೆ.

ಮಾರ್ಚ್‌ 29, 2023ರಲ್ಲಿ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವಾಲಯ ಏಳನೇ ಸುತ್ತಿನ ವಾಣಿಜ್ಯ ಹರಾಜು (ಕಲ್ಲಿದ್ದಲು ಮತ್ತು ಲಿಗ್ನೈಟ್‌) ಪ್ರಕ್ರಿಯೆಗೆ ಟೆಂಡರ್‌ ಹೊರಡಿಸಿತ್ತು. ಇದರಲ್ಲಿ ತಮಿಳುನಾಡು ರಾಜ್ಯದ ಕಾವೇರಿ ನದಿ ಮುಖಜಭೂಮಿಯು ಸೇರಿತ್ತು. ತಮಿಳುನಾಡಿನಲ್ಲಿ ಈ ಟೆಂಡರ್‌ ಪ್ರಕ್ರಿಯೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಯಾವುದೇ ಕಾರಣಕ್ಕೂ ಕಾವೇರಿ ನದಿ ಮುಖಜಭೂಮಿಯಲ್ಲಿ ಗಣಿಗಾರಿಕೆ ನಡೆಸಲು ಬಿಡುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಎಚ್ಚರಿಕೆ ನೀಡಿದ್ದರು.

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಈ ಬಗ್ಗೆ ಮನವಿ ಮಾಡಿದ್ದರು. ’ಕಾವೇರಿ ನದಿ ಮುಖಜಭೂಮಿಯು ಕೃಷಿ ವಲಯವಾಗಿದೆ. ಇಲ್ಲಿ ಗಣಿಗಾರಿಕೆ ಮಾಡುವುದಕ್ಕೆ ಈ ಭಾಗದ ರೈತರ ವಿರೋಧವಿದೆ. ಗಣಿಗಾರಿಕೆಯಿಂದ ಅಂತರ್ಜಲ ಹಾಗೂ ಕೃಷಿ ಚಟುವಟಿಕೆ ಮೇಲೆ ಪರೋಕ್ಷ ಪರಿಣಾಮ ಬೀರಲಿದೆ’ ಎಂದು ತಿಳಿಸಿದ್ದರು.

ಕಲ್ಲಿದ್ದಲು ಗಣಿ ಹರಾಜು ಪಟ್ಟಿಯಿಂದ ತಮಿಳುನಾಡನ್ನು ಕೈಬಿಟ್ಟಿರುವುದಕ್ಕೆ ಕೆ. ಅಣ್ಣಾಮಲೈ ಟ್ವೀಟ್‌ ಮೂಲಕ ಧನ್ಯವಾದ ತಿಳಿಸಿದ್ದಾರೆ. ’ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರಿಗೆ ಧನ್ಯವಾದ ತಿಳಿಸುತ್ತೇನೆ. ರೈತರ ಕಲ್ಯಾಣಕ್ಕಾಗಿ ಪ್ರಧಾನಿ ಮೋದಿ ಶ್ರಮಿಸುತ್ತಿದ್ದು, ರೈತರ ಪರ ನಿಂತಿದ್ದಾರೆ‘ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT